Advertisement

South Western Railway: ಪ್ರಧಾನ ವ್ಯವಸ್ಥಾಪಕರಾಗಿ ಅರವಿಂದ್ ಶ್ರೀವಾಸ್ತವ ಅಧಿಕಾರ ಸ್ವೀಕಾರ

07:00 PM Mar 01, 2024 | Team Udayavani |

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಅರವಿಂದ್ ಶ್ರೀವಾಸ್ತವ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.

Advertisement

1965 ರಲ್ಲಿ ಜನಿಸಿದ ಶ್ರೀವಾಸ್ತವ ಅವರು ವಾರಣಾಸಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಬಿ.ಟೆಕ್ (ಮೆಕ್ಯಾನಿಕಲ್ ಇಂಜಿನಿಯರಿಂಗ್‌) ಪದವಿ ಪಡೆದಿದ್ದಾರೆ.

1987 ರ ಬ್ಯಾಚ್‌ ನ ಭಾರತೀಯ ರೈಲ್ವೆ ಸ್ಟೋರ್ಸ್ ಸರ್ವೀಸ್ (ಐ.ಆರ್.ಎಸ್.ಎಸ್) ಅಧಿಕಾರಿಯಾಗಿರುವ ಅವರು 1989ರಲ್ಲಿ ರೈಲ್ವೆ ಇಲಾಖೆಗೆ ಸೇರಿದವರು. ಭಾರತೀಯ ರೈಲ್ವೆಯೊಂದಿಗೆ ಮೂರೂವರೆ ದಶಕಗಳ ಕಾಲ ಒಡನಾಟ ಹೊಂದಿದ್ದಾರೆ. ಕೊಲ್ಕತ್ತಾದ ಪೂರ್ವ ರೈಲ್ವೆ, ವಾರಾಣಸಿಯ ಡೀಸೆಲ್ ಲೋಕೋಮೋಟಿವ್ ವರ್ಕ್ಸ್, ನವ ದೆಹಲಿಯ ರೈಲ್ವೆ ಮಂಡಳಿ, ಬೆಂಗಳೂರಿನ ರೈಲ್ ವ್ಹೀಲ್ ಫ್ಯಾಕ್ಟರಿ ಮತ್ತು ಕಲ್ಕತ್ತಾ ಆಗ್ನೇಯ ರೈಲ್ವೆ ಸೇರಿದಂತೆ ವಿವಿಧ ಇಲಾಖೆಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯ ಮುಖ್ಯ ಸಾಮಗ್ರಿ ವ್ಯವಸ್ಥಾಪಕರಾಗಿ, ಸ್ಟೋರ್ಸ್ (ಜಾಗೃತ) ಕಾರ್ಯನಿರ್ವಾಹಕ ನಿರ್ದೇಶಕರಾಗಿ, ನವದೆಹಲಿ ರೈಲ್ವೆ ಮಂಡಳಿ ಮುಖ್ಯ ವಿಚಕ್ಷಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗುವ ಮುನ್ನ ಅವರು ಕೊಲ್ಕತ್ತಾದ ಆಗ್ನೇಯ ರೈಲ್ವೆಯ ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕರಾಗಿದ್ದರು.

ಅವರು ಸಿಂಗಾಪುರದ ಐಎನ್ಎಸ್ಇಎಡಿ ಮತ್ತು ಮಲೇಷ್ಯಾದ ಐಸಿಎಲ್ಐಎಫ್ವಗಳಲ್ಲಿ ಅಡ್ವಾನ್ಸಡ್ ಮ್ಯಾನೇಜ್ ಮೆಂಟ್ ಪ್ರೋಗ್ರಾಂನಲ್ಲಿ ತರಬೇತಿ ಪಡೆದಿದ್ದಾರೆ. ಆಸ್ಟ್ರಿಯಾದ ಲಕ್ಸೆಂಬರ್ಗ್ ನ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಅಕಾಡೆಮಿ ಮತ್ತು ಭಾರತದ ಹೈದರಾಬಾದ್‌ನ ಆಡಳಿತ ಸಿಬ್ಬಂದಿ ಕಾಲೇಜಿನಲ್ಲಿ ವಿಶ್ವಬ್ಯಾಂಕ್ ಖರೀದಿ ವಿಷಯಗಳಲ್ಲಿ ಭ್ರಷ್ಟಾಚಾರ ವಿರೋಧಿ ಕ್ರಮಗಳ ಪ್ರೋಗ್ರಾಂ ನಲ್ಲಿ ತರಬೇತಿ ಪಡೆದಿದ್ದಾರೆ. ಹೈದರಾಬಾದ್ ದ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ ಕಾರ್ಯತಂತ್ರದ ನಿರ್ವಹಣಾ ವಿಷಯಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

Advertisement

ಗುರುವಾರವಷ್ಟೇ ನಿವೃತ್ತರಾದ ಸಂಜೀವ್ ಕಿಶೋರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next