Advertisement
ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ತಮಿಳುನಾಡಿನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ದಕ್ಷಿಣ ಭಾರತದ ಸಿನಿವಲಯದಲ್ಲಿ ಸ್ಟಾರ್ ನಟ/ನಟಿಯರು ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಇಳಿಯುವುದು ಮೊದಲಲ್ಲ. ಸಿನಿಮಾರಂಗದಲ್ಲಿ ಜನಪ್ರಿಯತೆ ಪಡೆದುಕೊಂಡು ಜನರ ಸೇವೆಗಿಳಿದ ದಕ್ಷಿಣ ಭಾರತದ ಖ್ಯಾತ ನಟ/ ನಟಿಯರಿವರು..
Related Articles
Advertisement
ಚಿರಂಜೀವಿ: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಕ್ಷೇತ್ರದಲ್ಲಿ ಇಂದಿಗೂ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶ ಪಡೆಯುವ ನಿಟ್ಟಿನಲ್ಲಿ 2007 ರಲ್ಲಿ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡು, 2008 ರಲ್ಲಿಆಂಧ್ರಪ್ರದೇಶದಲ್ಲಿ ʼಪ್ರಜಾರಾಜ್ಯಂʼ ಪಕ್ಷವನ್ನು ಸ್ಥಾಪಿಸಿದರು. ಆ ಬಳಿಕ ಅದನ್ನು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಆ ಬಳಿಕ ನಟನೆಗೆ ಹಿಂತಿರುಗಿದ ಚಿರಂಜೀವಿ, ಇಂದು ರಾಜಕೀಯವಾಗಿ ಅಷ್ಟಾಗಿ ಸಕ್ರಿಯವಾಗಿಲ್ಲ.
ರಜಿನಿಕಾಂತ್: ಸೂಪರ್ ಸ್ಟಾರ್ ರಜಿನಿಕಾಂತಾ ಅವರು, 2017 ರಲ್ಲಿ ರಾಜಕೀಯಕ್ಕೆ ಸೇರಿದ್ದರು. ರಜಿನಿ ʼಮಕ್ಕಳ್ ಮಂದ್ರಮ್ (ಆರ್‌ಎಂಎಂ) ನ್ನು ಸ್ಥಾಪಿಸಿದರು. ಇನ್ನೇನು ರಜಿನಿ ಸಿಎಂ ಆಗುತ್ತಾರೆ ಎನ್ನುವ ಮಾತುಗಳ ನಡುವೆಯೇ 2021 ರಲ್ಲಿ ಅವರು ಆರೋಗ್ಯದ ದೃಷ್ಟಿಯಿಂದ ತಮ್ಮ ಪಕ್ಷವನ್ನು ವಿಸರ್ಜಿಸಿದರು. ಆ ಮೂಲಕ ರಾಜಕೀಯದಿಂದ ದೂರ ಉಳಿದರು.
ಖುಷ್ಬು ಸುಂದರ್: ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಖುಷ್ಬು ಸುಂದರ್ ಅವರು, ಸಿನಿಮಾವಲಯದಲ್ಲಿ ಹೇಗೆ ಏರಿಳಿತವನ್ನು ಕಂಡಿದ್ದಾರೆಯೋ, ರಾಜಕೀಯವಾಗಿ ಹಾಗೆಯೇ ಅದೇ ರೀತಿಯಾಗಿ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ಡಿಎಂಕೆ ಪಕ್ಷಕ್ಕೆ ಸೇರಿದ ಅವರು, 2014 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಆದರೆ 2020 ರಲ್ಲಿ ಅವರು ಬಿಜೆಪಿ ಪಕ್ಷದತ್ತ ಮುಖಮಾಡಿದರು. 2021 ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಸೋಲನ್ನು ಎದುರಿಸಿದರು.
ಕಮಲ್ ಹಾಸನ್: ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ ಅವರು ಸಿನಿಮಾರಂಗದಲ್ಲಿ ಇಂದು ದೊಡ್ಡಮಟ್ಟದ ಹೆಸರನ್ನು ಗಳಿಸಿದ್ದಾರೆ. ಆದರೆ ಅವರ ರಾಜಕೀಯ ಜರ್ನಿ ಅಷ್ಟಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿಲ್ಲ. 2018 ರಲ್ಲಿ ʼಮಕ್ಕಳ್ ನೀಧಿ ಮೈಯಂʼ (MNM) ಪಕ್ಷವನ್ನು ಸ್ಥಾಪಿಸಿದರು. 2021 ರ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತಿದ್ದರು. ಇಂದು ಕಮಲ್ ಹಾಸನ್ ಅವರು ಸಿನಿಮಾರಂಗ ಹಾಗೂ MNM ಅಧ್ಯಕ್ಷರಾಗಿ ತೊಡಗಿಸಿಕೊಂಡಿದ್ದಾರೆ.
ಉದಯನಿಧಿ ಸ್ಟಾಲಿನ್: ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಉದಯನಿಧಿ ಸ್ಟಾಲಿನ್ ಅವರು ಇಂದು ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ತಮಿಳುನಾಡಿನ ಸಿಎಂ ಆಗಿರುವ ಅವರು ಅವರ ತಂದೆ ಎಂ.ಕೆ. ಸ್ಟಾಲಿನ್ ಅವರ ಸಚಿವ ಸಂಪುಟದಲ್ಲಿ ಉದಯನಿಧಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿದ್ದಾರೆ.
ಪವನ್ ಕಲ್ಯಾಣ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ರಾಜಕೀಯ ಅಖಾಡ ಆಂಧ್ರದಲ್ಲಿ ಸದ್ದು ಮಾಡಿದೆ. ಪವನ್ ಕಲ್ಯಾಣ್ 2014 ರಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ತಮ್ಮ ಜನಸೇನಾ ಪಕ್ಷದಿಂದ ಅವರು ಯಾತ್ರೆಗಳನ್ನು ಕೈಗೊಂಡು ರಾಜಕೀಯವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಚುನಾವಣೆಯನ್ನು ಎದುರಿಸು ತಯಾರಿಯಲ್ಲಿದ್ದಾರೆ.
ವಿಜಯಕಾಂತ್: ಇತ್ತೀಚೆಗೆ ನಿಧನರಾದ ಕ್ಯಾಪ್ಟನ್ ವಿಜಯಕಾಂತ್ ತಮಿಳು ಸಿನಿಮಾರಂಗದಲ್ಲಿ ದೊಡ್ಡ ಹೆಸರು. 2005 ರಲ್ಲಿ ಶುರುವಾದ ʼದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ʼ ಪಕ್ಷದ ಸಂಸ್ಥಾಪಕರಲ್ಲಿ ವಿಜಯಕಾಂತ್ ಅವರು ಒಬ್ಬರು. 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು. 2016 ರಲ್ಲಿ ಚುನಾವಣಾ ಭಾಷಣದ ಸಂದರ್ಭದಲ್ಲಿ ಹಲವು ಟೀಕೆಗಳನ್ನು ಎದುರಿಸಿದ್ದರು.
ರಮ್ಯಾ: ಚಂದನವನದ ಮೋಹಕತಾರೆ ನಟಿ ರಮ್ಯಾ(ದಿವ್ಯಾ ಸ್ಪಂದನಾ) ಅವರು ನಟನೆ ಮೂಲಕವೇ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡವರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಅವರು, 2013 ರಲ್ಲಿ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಂಸದೆಯಾಗಿ ಸೇವೆ ಸಲ್ಲಿಸಿದ್ದರು. ನಟನೆಯಿಂದ ದೂರ ಉಳಿದರೂ ರಾಜಕೀಯವಾಗಿ ಅವರು ಆಗಾಗ ಟ್ವೀಟ್ ಗಳನ್ನು ಮಾಡಿ, ಸ್ವಪಕ್ಷದ ತಪ್ಪುಗಳನ್ನೇ ಟೀಕಿಸುವ ಮೂಲಕ ಸದ್ದು ಮಾಡಿದ್ದರು.
ಸುರೇಶ್ ಗೋಪಿ: ಮಾಲಿವುಡ್ ಸಿನಿಮಾರಂಗದ ಖ್ಯಾತ ನಟ ಸುರೇಶ್ ಗೋಪಿ ಅವರು ರಾಜಕೀಯದಲ್ಲಿ ಯಶಸ್ಸಿನ ಹಾದಿಯನ್ನು ಕಂಡುಕೊಂಡಿದ್ದಾರೆ. ರಾಜ್ಯಸಭಾ ಸಂಸದರಾಗಿ ಬಿಜೆಪಿ ಸೇರಿದರು. 2019 ರಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ತ್ರಿಶೂರ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.