ಒಂದೆಡೆ ಕನ್ನಡ ಚಿತ್ರರಂಗದಲ್ಲಿ ವರ್ಷದಿಂದ ವರ್ಷಕ್ಕೆ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೂಂದೆಡೆ ಈ ಸಿನಿಮಾಗಳ ಮೂಲಕ ಪ್ರತಿವರ್ಷ ಚಿತ್ರರಂಗಕ್ಕೆ ಪರಿಚಯವಾಗುವ ನವ ನಾಯಕಿಯರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಚಿತ್ರರಂಗಕ್ಕೆ ಕಾಲಿಟ್ಟ ನವ ನಾಯಕಿಯರ ಪೈಕಿ ಕೆಲವೇ ಕೆಲವರು ಮಾತ್ರ ತಮ್ಮ ಸಿನಿಮಾ, ಪಾತ್ರ ಮತ್ತು ಅಭಿನಯದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗುತ್ತಾರೆ. ಅಂಥ ನವ ನಾಯಕಿಯರಲ್ಲಿ ಪೈಕಿ ಸದ್ಯಕ್ಕೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಗಮನ ಸೆಳೆಯುತ್ತಿರುವುದು ನಟಿ ಕಾಶಿಮಾ. ಈಗಾಗಲೇ ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಭರವಸೆ ಮೂಡಿಸಿರುವ ಕಾಶಿಮಾ ನಟಿಸಿರುವ “ಸೌತ್ ಇಂಡಿಯನ್ ಹೀರೋ’ ಚಿತ್ರ ಇಂದು ತೆರೆಕಾಣುತ್ತಿದೆ
ಇನ್ನು, ಕಾಶಿಮಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ “ಕಸ್ತೂರಿ ಮಹಲ್’ ಚಿತ್ರದ ಮೂಲಕ. “ಕಸ್ತೂರಿ ಮಹಲ್’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡ ಕಾಶಿಮಾಗೆ ಮೊದಲ ಸಿನಿಮಾವೇ ಸಾಕಷ್ಟು ಅನುಭವಗಳನ್ನು ತಂದುಕೊಟ್ಟಿತಂತೆ. ಈ ಬಗ್ಗೆ ಮಾತನಾಡುವ ಕಾಶಿಮಾ, “ಮೊದಲ ಸಿನಿಮಾದಲ್ಲೇ ದಿನೇಶ್ ಬಾಬು ಅವರಂಥ ಲೆಜೆಂಡರಿ ಡೈರೆಕ್ಟರ್, ಮತ್ತು ದೊಡ್ಡ ಸ್ಟಾರ್ ಜೊತೆಗೆ ಕೆಲಸ ಮಾಡುವ ಅನುಭವ ಸಿಕ್ಕಿತು. ಒಂದು ಸಿನಿಮಾದ ಕೆಲಸ ಹೇಗೆ ನಡೆಯುತ್ತದೆ. ಕಲಾವಿದರು ಹೇಗಿರುತ್ತಾರೆ. ಪಾತ್ರಕ್ಕೆ ನಮ್ಮ ತಯಾರಿ ಹೇಗಿರಬೇಕು, ಹೀಗೆ ಹತ್ತಾರು ವಿಷಯಗಳನ್ನು ಈ ಸಿನಿಮಾದಲ್ಲಿ ಕಲಿತುಕೊಂಡೆ’ ಎನ್ನುತ್ತಾರೆ.
“ಕಾಲೇಜ್ ದಿನಗಳಲ್ಲಿಯೇ ಮಾಡೆಲಿಂಗ್‌ನಲ್ಲಿ ಭಾಗವಹಿಸುತ್ತಿದ್ದರಿಂದ, ಅಲ್ಲಿ ಒಂದಷ್ಟು ಅನುಭವವಿತ್ತು. ಆದರೆ ಸಿನಿಮಾ ಇಂಡಸ್ಟ್ರಿ ಮಾತ್ರ ನನಗೆ ಸಂಪೂರ್ಣ ಹೊಸದಾಗಿತ್ತು. ಸಿನಿಮಾದ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಒಂದು ಸಿನಿಮಾ ಹೇಗೆ ಆಗುತ್ತದೆ, ಅದರ ಕೆಲಸಗಳು ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಹೀಗಾಗಿ ಮೊದಲು ಸಿನಿಮಾದ ಆಫರ್ ಬಂದಾಗ, ಸಿನಿಮಾ ಹೇಗೋ.., ಏನೋ? ಎಂಬ ಸಣ್ಣ ಭಯವಂತೂ ಇದ್ದೇ ಇತ್ತು. ಆದರೆ ಮೊದಲ ಸಿನಿಮಾದಲ್ಲೇ ಒಳ್ಳೆಯ ಪ್ರೊಡಕ್ಷನ್ ಹೌಸ್, ಡೈರೆಕ್ಟರ್, ಕೋ ಆರ್ಟಿಸ್ಟ್, ಒಳ್ಳೆಯ ಟೀಮ್ ಸಿಕ್ಕಿದ್ದರಿಂದ, ಎಲ್ಲವನ್ನೂ ಕಲಿತುಕೊಳ್ಳಲು ಸಹಾಯವಾಯ್ತು’ ಎನ್ನುತ್ತಾರೆ ಕಾಶಿಮಾ.
ಕಾಶಿಮಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷವಾಯಿತು. ಈ ನಾಲ್ಕು ವರ್ಷಗಳಲ್ಲಿ ಕಾಶಿಮಾ, ಕನ್ನಡದಲ್ಲಿ “ಕಸ್ತೂರಿ ಮಹಲ್’, “ಟೆಂಪರ್’, “ಸೌಥ್ ಇಂಡಿಯನ್ ಹೀರೋ’ ಸೇರಿದಂತೆ ಮೂರು ಸಿನಿಮಾಗಳಲ್ಲಿ ಮತ್ತು ತೆಲುಗಿನಲ್ಲಿ “ಕಲಾಪುರಂ’ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ಒಂದೇ ವರ್ಷದಲ್ಲಿ ಕಾಶಿಮಾ ನಾಯಕಿಯಾಗಿರುವ ಮೂರು ಸಿನಿಮಾಗಳು ತೆರೆಕಂಡಿವೆ.
ಇತ್ತೀಚೆಗೆ ಕಾಶಿಮಾ ನಾಯಕಿಯಾಗಿ ಅಭಿನಯಿಸಿದ್ದ “ಸೌಥ್ ಇಂಡಿಯನ್ ಹೀರೋ’ ಸಿನಿಮಾ ಕೂಡ ತೆರೆಕಂಡಿದ್ದು, ಈ ಸಿನಿಮಾದಲ್ಲಿ ಕಾಶಿಮಾ ಪಾತ್ರದ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜಿ.ಎಸ್. ಕಾರ್ತಿಕ ಸುಧನ್