Advertisement

ಪೀಡೆಗೆ ಕಾರಣವಾಗುವ ದಕ್ಷಿಣ ದಿಕ್ಕು

03:31 PM Jan 08, 2018 | |

ನೆನಪಿರಲಿ, ದಕ್ಷಿಣ ದಿಕ್ಕು ಮಾನವನ ಜೀವನದ ಪರಿಸಮಾಪ್ತಿ ಸೂಚಿಸುವ ದಿಕ್ಕು. ಕೇವಲ ಸಾವಿನ ವಿಚಾರದಲ್ಲಿ ಮಾತ್ರ ಈ ದಿಕ್ಕು ಮಾನವನ ಮೇಲೆ ತನ್ನ ಹಿಡಿತ ಸಾಧಿಸುತ್ತದೆ ಎಂದು ಅರ್ಥವಲ್ಲ. ಒಟ್ಟಿನಲ್ಲಿ ಈ ದಿಕ್ಕಿನ ದೋಷ ಶನಿ, ರಾಹು, ಕುಜ, ಕೇತು ಅಥವಾ ಸೂರ್ಯನ ವೈಪರೀತ್ಯಗಳ ಸಂದರ್ಭ ಆಯಾ ವೃತ್ತಿಯ ಮುಖ್ಯ ವೇದಿಕೆಯಲ್ಲಿ ಕೆಟ್ಟ ಹೆಸರನ್ನು, ಆರೋಗ್ಯದ ವೈಪರೀತ್ಯಗಳನ್ನು, ದಿಢೀರನೆ ಸಲ್ಲದ ಕಾರ್ಯತಂತ್ರಗಳನ್ನು ಸಂಯೋಜಿಸುವ, ದುಬುìದ್ಧಿಯಿಂದ ಅನಿಷ್ಟಗಳಿಗೆ ಮುಂದಾಗುವ ನಿರ್ಣಯಗಳನ್ನು, ಪರಿಣಾಮಗಳ ಯೋಚನೆಗಳಿರದೆ ಸರ್ರನೆ ಕಾರ್ಯೋನ್ಮುಖರಾಗುವ ಅವಸರಗಳನ್ನು, ಕೈಗೆ ಎಟುಕಲಾರದ ಕನಸಿನ ಗೋಪುರಕ್ಕೆ ಕೈಚಾಚುವುದನ್ನು, ನಿರಪರಾಧಿಗಳನ್ನು ಶಿಕ್ಷಿಸಿ ಕರ್ಮವನ್ನು ಸುತ್ತಿಕೊಳ್ಳುವ, ಭಯೋತ್ಪಾದಕ ಘಟನೆಗಳಿಗೆ ಬಲಿಯಾಗುವ, ಮಕ್ಕಳಿಂದಲೇ ಗೋಳಿಗೆ ಸಿಲುಕುವ ಮಿಸುಕಾಟಗಳನ್ನು ಒದಗಿಸಬಹುದು. ಕಟ್ಟಡಗಳಿಗೂ ದುಷ್ಟ ಗ್ರಹಗಳ ಬಾಧೆಯೇ ಎಂಬ ವಿಚಾರ ಆಶ್ಚರ್ಯಕರ. ಆದರೆ ಸತ್ಯ. ಕಟ್ಟಡಗಳಿಗೂ ತೊಂದರೆ ಉದ್ಭವಿಸುತ್ತದೆ. 2001ರ ಸೆಪ್ಟೆಂಬರ್‌ನಲ್ಲಿ ಉರುಳಿದ ಅಮೆರಿಕಾದ ವರ್ಲ್ಡ್ ಟ್ರೇಡ್‌ ಸೆಂಟರ್‌ ಅವಳಿ ಕಟ್ಟಡಗಳನ್ನು ನೆನೆಪಿಸಿಕೊಳ್ಳಿ.

Advertisement

ಕಟ್ಟಡದ ದಕ್ಷಿಣ ದಿಕ್ಕಿನ ವಾಸ್ತು ಸಂಯೋಜನೆಗಳು ಅಗ್ನಿ ತತ್ವಕ್ಕೆ ವೈರುಧ್ಯದಿಂದ ಕೂಡಿದ ಪ್ರಮಾಣದೊಂದಿಗೆ ಸಮತೋಲನ ತಪ್ಪಿದ್ದವು. ತಗ್ಗಿನ ಹೊರ ಆವರಣ, ಕಟ್ಟಡಗಳ ದಕ್ಷಿಣ ಭಾಗದಲ್ಲಿ ವಿಸ್ತೃತವಾಗಿ ಹಿಗ್ಗಿಕೊಂಡಿದ್ದರಿಂದ ಉತ್ತರ ದಿಕ್ಕಿನ ಅಮೃತ ಸ್ಪಂದನಗಳನ್ನು ಅದು ಘರ್ಷಿಸುತ್ತಲೇ ಇತ್ತು. ಹೀಗಾಗಿ ಶನೈಶ್ಚರನ ಮೂಲದ ರಾಹುವಿನ ಜಾಗೆಗೆ ಜಾರ್ಜ್‌ ಬುಷ್‌ ಅಧಿಕಾರದ ಪ್ರಥಮ ಸಂದರ್ಭದಲ್ಲಿ ಅಷ್ಟಮ ಶನಿ ಕಾಡಿದಾಗ, ಒಸಾಮ ಬಿನ್‌ ಲಾಡೆನ್‌ ಅಪಾಯಕಾರಿ ಯೋಜನೆ ರೂಪಿಸುವುದರಲ್ಲಿ ಯಶಸ್ವಿಯಾಗಿದ್ದ. ದಕ್ಷಿಣ ದಿಕ್ಕಿನ ದೋಷದ ಅಂಶವನ್ನು ವಾಸ್ತುವಿನಲ್ಲಿ ಹೊಂದಿದ್ದ ವರ್ಲ್ಡ್ ಟ್ರೇಡ್‌ ಅವಳಿ ಕಟ್ಟಡಗಳು ಕುಸಿದು ಬಿದ್ದದ್ದು. ಭಯೋತ್ಪಾದನೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಬಹುದು ಎಂದು ಜಗತ್ತಿಗೆ ಅರ್ಥವಾದದ್ದೇ ಆಗ. ಭಾರತದಲ್ಲಿ 1983ರ ಮುಂಬೈ ಸ್ಫೋಟಗಳು ಭಯೋತ್ಪಾದಕತೆಯ ಕರಾಳ ಮುಖವನ್ನು ಎತ್ತಿ ಹಿಡಿದಿದ್ದರೂ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯ ವಿರುದ್ಧ ಒಕ್ಕೊರಲಿನ ಕೂಗು ಎದ್ದದ್ದು 2001ರಲ್ಲಿಯೇ. ವಾಸ್ತು ದೋಷದ ಪರಿಣಾಮವು ಒಂದು ಅವಳಿ ಅಟ್ಟಡಗಳ ಕಾರಣದಿಂದಾಗಿ ಜಾಗತಿಕ ವರ್ತಮಾನದ ತಲ್ಲಣಗಳಿಗೆ ಕಾರಣವಾಗುವ ಕ್ರಿಯೆ ಅನೂಹ್ಯ.

ನಾವು ಕಟ್ಟುವ ಕಟ್ಟಡಗಳು, ವಸತಿ ಸಂಕೀರ್ಣ, ಮನೆ ಅಥವಾ ಬೇರಾವುದೇ ಕಟ್ಟಡವಿರಲಿ ಎಡವಟ್ಟಾದ ಸ್ವರೂಪದಲ್ಲಿ ಆಗ್ನೇಯ ದಿಕ್ಕು ವಿಸ್ತರಿಸಿಕೊಳ್ಳಬಾರದು. 70ರ ದಶಕದ ಜನಪ್ರಿಯ ಚಲನಚಿತ್ರ ರಂಗ ಆವರೆಗೆ ಕಂಡರಿಯದ ಸೂಪರ್‌ ಸ್ಟಾರ್‌, ತನ್ನ ಅರಮನೆ ಸದೃಶ್ಯವಾದ ಬಂಗಲೆಯಲ್ಲಿ ಎಷ್ಟು ಎತ್ತರಕ್ಕೆ ಏರಿದ್ದು ಸತ್ಯವೋ, ಹಾಗೇ ಇನ್ನಿಲ್ಲದ ರೀತಿಯಲ್ಲಿ ಕುಸಿದಿದ್ದೂ ಅಷ್ಟೇ ಸತ್ಯ. ಈ ಕಟ್ಟಡದ ವಿಚಾರದಲ್ಲಿನ ವಾಸ್ತು ದೋಷಗಳು ಹೇಗೆ ಅವರ ಅವನತಿಗೆ ಕಾರಣವಾಯಿತು ಎಂಬುದನ್ನು ಆ ಪ್ರಬುದ್ಧ ನಟರೇ ಅವರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪತ್ನಿಯೊಂದಿಗೆ ಹೊಂದಿಕೊಂಡು ಹೋಗಲಾರದ ಶನಿ ದಶಾ ಸಂದರ್ಭವೂ ಈ ನಟ ಡೈವರ್ಸ್‌ ಪಡೆದು ಒಂಟಿಯಾಗುವಂತೆ ಮಾಡಿತು. ಅನೇಕ ರೀತಿಯ ತಾಪತ್ರಯಗಳು, ಮಾಡಿದ ಸಾಲ ಕಷ್ಟಗಳಿಗೆ ವೇದಿಕೆ ಒದಗಿಸಿತು. ದಕ್ಷಿಣ ದಿಕ್ಕು ಮೂಲಭೂತವಾಗಿ ಅಗ್ನಿಯನ್ನು ಸಂಕೇತಿಸುವ ವಿಚಾರಗಳನ್ನು ಅಂತರ್ಗತಗೊಳಿಸಿಕೊಂಡಿರುತ್ತದೆ. ಅಗ್ನಿಯು ಶುಭಕರನಾದಾಗ, ಅವನೇ ವೈಶ್ವಾನರ ಸ್ವರ್ಗ ಹಾಗೂ ಭೂಮಿಯನ್ನು ಕೊಂಡಿ ಕೂಡಿಸುವ ಹವ್ಯವಾಹನ. ನಮ್ಮ ಪ್ರಾರ್ಥನೆಗಳು, ನಮ್ಮ ಸಮರ್ಪಣೆಗಳು ದೈವಿಕವಾದ ಅನನ್ಯ ಶಕ್ತಿ ಧಾತುವನ್ನು ಮುಟ್ಟುತ್ತದೆ. ಬೆಂಕಿ ಮುನಿದಾಗ ಅದು ಕಾಳ್ಗಿಚ್ಚು. ಅದು ಚಿತೆಯ ದಾರುಣತೆಗೆ ಕಾರಣವಾಗುವ ಸರಕು. 

ದಕ್ಷಿಣ ದಿಕ್ಕು ವಾಸ್ತು ದೋಷ ಹೊಂದಿದ್ದರೆ ದುರ್ಗಾದೇವಿಯನ್ನು ನೆನೆಯಬೇಕು. ಸ್ತುತಿಸಬೇಕು. ಇದರಿಂದ ಅಗ್ನಿಭೀತಿಯ ದಾರುಣತೆಯ ಶಮನಗಳಿಗೆ ದಾರಿ ಲಭ್ಯ. ಮಲಿನತೆಗಳು ದಕ್ಷಿಣ ದಿಕ್ಕಿನಲ್ಲಿ ಬೇರೂರದಂತೆ ಗಮನ ಹರಿಸಿ. ನಿಮ್ಮ ಪ್ರಯತ್ನ ಈ ದಿಸೆಯಲ್ಲಿ ನಡೆದುದಾದರೆ ಕೊಂಚ ಮಟ್ಟಿಗಿನ ನಿರಾಳತೆ ಸಾಧ್ಯ. 

ಅನಂತಶಾಸ್ತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next