ನಾಟಿಂಗಂ: ಆತಿಥೇಯ ಇಂಗ್ಲೆಂಡ್ ವಿರುದ್ಧ ಟ್ರೆಂಟ್‌ಬ್ರಿಡ್ಜ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 340 ರನ್ನುಗಳ ಭಾರೀ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಓವಲ್‌ನಲ್ಲಿ ಜು. 27ರಿಂದ 31ರ ವರೆಗೆ ನಡೆಯಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 211 ರನ್ನುಗಳಿಂದ ಸೋತಿತ್ತು.
ಗೆಲ್ಲಲು 474 ರನ್ ಗಳಿಸುವ ಕಠಿನ ಗುರಿ ಪಡೆದ ಇಂಗ್ಲೆಂಡ್ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ದಿನದ ಟೀ ವಿರಾಮಕ್ಕೆ 40 ನಿಮಿಷಗಳಿರುವಾಗ 133 ರನ್ನಿಗೆ ಆಲೌಟಾಗಿ ಶರಣಾಯಿತು. ಇಂಗ್ಲೆಂಡಿನ ಯಾವುದೇ ಆಟಗಾರ ಅರ್ಧಶತಕ ದಾಖಲಿಸಿಲ್ಲ. ಮಾಜಿ ನಾಯಕ ಅಲಸ್ಟೇರ್ ಕುಕ್ 42 ರನ್ ಗಳಿಸಿದ್ದು ತಂಡದ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ಯಾವುದೇ ರನ್ ಗಳಿಸದೇ ದಿನದಾಟ ಆರಂಭಿಸಿದ್ದ ಇಂಗ್ಲೆಂಡ್ ತಂಡ ಊಟದ ವಿರಾಮದ ವೇಳೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದರೆ ಇನ್ನುಳಿದ ಆರು ವಿಕೆಟ್ ಟೀ ಮೊದಲು ಉರುಳಿದವು. ವೆರ್ನನ್ ಫಿಲಾಂಡರ್ ಮತ್ತು ಕೇಶವ್ ಮಹಾರಾಜ್ ಅವರ ದಾಳಿಗೆ ಇಂಗ್ಲೆಂಡ್ ಸಂಪೂರ್ಣ ನೆಲಕಚ್ಚಿತು. ಫಿಲಾಂಡರ್ 24 ರನ್ನಿಗೆ 3 ಮತ್ತು ಕೇಶವ್ 42 ರನ್ನಿಗೆ3 ವಿಕೆಟ್ ಪಡೆದರು. ಡುಯಾನೆ ಆಲಿವರ್ ಬಾಲಂಗೋಚಿಗಳಾದ ಮಾರ್ಕ್ ವುಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ವಿಕೆಟ್ ಕಿತ್ತು ಇಂಗ್ಲೆಂಡಿನ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು.
ಮೊದಲ ಮಗು ಜನಿಸಿದ್ದರಿಂದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ಫಾ ಡು ಪ್ಲೆಸಿಸ್ ಈ ಪಂದ್ಯಕ್ಕೆ ಮರಳಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ದಿಟ್ಟ ನಿರ್ಧಾರ ಮಾಡಿದ್ದರು. ಹಾಶಿಮ್ ಆಮ್ಲ ಅವರ 78 ರನ್ ನೆರವಿನಿಂದ ದಕ್ಷಿಣ ಆಫ್ರಿಕಾ 335 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 205 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಮ್ಲ (87), ಡೀನ್ ಎಲ್ಗರ್ (80) ಮತ್ತು ಪ್ಲೆಸಿಸ್ ಅವರ 63 ರನ್ ನೆರವಿನಿಂದ ದಕ್ಷಿಣ ಆಫ್ರಿಕಾ 9 ವಿಕೆಟಿಗೆ 343 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 335 ಮತ್ತು 9 ವಿಕೆಟಿಗೆ 343 ಡಿಕ್ಲೇರ್x; ಇಂಗ್ಲೆಂಡ್ 205 ಮತ್ತು 133 (ಅಲೆಸ್ಟೇರ್ ಕುಕ್ 42, ಮೊಯಿನ್ ಅಲಿ 27, ವೆರ್ನನ್ ಫಿಲಾಂಡರ್ 24ಕ್ಕೆ 3, ಕೇಶವ್ ಮಹಾರಾಜ್ 42ಕ್ಕೆ 3, ಡುಯಾನೆ ಆಲಿವರ್ 25ಕ್ಕೆ 2, ಕ್ರಿಸ್ ಮೊರಿಸ್ 7ಕ್ಕೆ 2).