Advertisement

ಮಹಿಳಾ ಏಕದಿನ ಸರಣಿ: ವೈಟ್‌ವಾಷ್‌ನಿಂದ ದ.ಆಫ್ರಿಕಾ ಪಾರು

06:50 AM Feb 11, 2018 | |

ಪೊಚೆಫ್ಸ್ಟ್ರೋಮ್‌(ದಕ್ಷಿಣ ಆಫ್ರಿಕಾ): ಅಮೋಘ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿ ವೈಟ್‌ವಾಷ್‌ ಮುಖಭಂಗದಿಂದ ಪಾರಾಗಿದೆ. ಕೊನೆಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭಾರತ ಸೋತರೂ 2-1ರಿಂದ ಸರಣಿ ವಶಪಡಿಸಿಕೊಂಡಿದೆ. ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗೆ 240 ರನ್‌ ಬಾರಿಸಿ ಆಲೌಟ್‌ ಆಗಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 49.2 ಓವರ್‌ಗೆ 241 ರನ್‌ ಬಾರಿಸಿ ಗೆಲುವು ಪಡೆದಿದೆ.

Advertisement

ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ: ಈ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಎದುರಿಸಿದ ಆಫ್ರಿಕಾ ತಂಡ ಈ ಪಂದ್ಯದಲ್ಲಿ ಸಫ‌ಲತೆ ಕಂಡಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನುಹತ್ತುವಾಗ ತಂಡದ ಮೊತ್ತ 10 ರನ್‌ ಆದಾಗಲೇ ಲಿಜೆಲ್‌ ಲೀ ವಿಕೆಟ್‌ ಕಳೆದುಕೊಂಡರು. ಆದರೆ ಈ ಹಂತದಲ್ಲಿ ಜತೆಯಾದ ಲೌರಾ ವೊಲ್ವಾರ್ಟ್‌(59 ರನ್‌) ಮತ್ತು ಆ್ಯಂಡ್ರಿ ಸ್ಟೇನ್‌ (30 ರನ್‌) ತಂಡದ ಮೊತ್ತವನ್ನು ಏರಿಸಿದರು. ಇದರ ಫ‌ಲವಾಗಿ ಈ ಹಂತದಲ್ಲಿಯೇ ಗೆಲುವಿನ ವಿಶ್ವಾಸ ಬೆಳೆಸಿಕೊಂಡಿತು. ಕೊನೆಯ ಹಂತದಲ್ಲಿ ಬ್ಯಾಟಿಂಗ್‌ಗೆ ಬಂದ ಮಿಗ್‌ನಾನ್‌ ಡು ಪ್ರಿಜ್‌ (90 ರನ್‌) ಮತ್ತು ಡಿ ವಾನ್‌ ನಿಕೆರ್ಕ್‌ (ಅಜೇಯ 41 ರನ್‌) ತಂಡವನ್ನು ದಡ ಸೇರಿಸಿದರು. ಭಾರತದ ಪರ ಶಿಖಾ ಪಾಂಡೆ, ಏಕ್ತಾ ಬಿಷ್ಟ್, ಪೂನಂ ಯಾದವ್‌ ತಲಾ 1 ವಿಕೆಟ್‌ ಪಡೆದರು.

ದೀಪ್ತಿ, ವೇದಾ ಅರ್ಧಶತಕ: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಭಾರತ ತಂಡ ಆರಂಭದಲ್ಲಿಯೇ ಸ್ಫೋಟಕ ಆಟಗಾರ್ತಿ ಸ್ಮತಿ ಮಂಧನಾ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ನಾಯಕಿ ಮಿಥಾಲಿ ರಾಜ್‌ (4 ರನ್‌) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ದೀಪ್ತಿ ಶರ್ಮ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ತಂಡದ ಸ್ಕೋರ್‌ ಏರಿಸಿದರು. ದೀಪ್ತಿ 112 ಎಸೆತದಲ್ಲಿ 79 ರನ್‌ ಬಾರಿಸಿ ಔಟ್‌ ಆದರು. ಅವರ ಆಟದಲ್ಲಿ 8 ಬೌಂಡರಿ ಸೇರಿತ್ತು. ವೇದಾ 64 ಎಸೆತದಲ್ಲಿ 56 ರನ್‌ ಬಾರಿಸಿದರು. ಅವರ ಆಟದಲ್ಲಿಯೂ 8 ಬೌಂಡರಿ ಸೇರಿತ್ತು. ಉಳಿದಂತೆ ಶಿಖಾ ಪಾಂಡೆ (31 ರನ್‌), ಹರ್ಮನ್‌ಪ್ರೀತ್‌ ಕೌರ್‌ (25 ರನ್‌) ಅಲ್ಪ ಕಾಣಿಕೆ ನೀಡಿದರು. ಆದರೆ ಇತರೆ ಆಟಗಾರ್ತಿಯರು ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಎದುರಿಸಿದ ಪರಿಣಾಮ ಭಾರತ ಆಲೌಟ್‌ ಆಗುವಂತಾಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ 50 ಓವರ್‌ಗೆ 240/10 (ದೀಪ್ತಿ ಶರ್ಮಾ 79, ವೇದಾಕೃಷ್ಣಮೂರ್ತಿ 56, ಶಿಖಾ ಪಾಂಡೆ 31, ಶಬಿ°ಲ್‌ ಇಸ್ಮಾಯಿಲ್‌ 40ಕ್ಕೆ 4), ದಕ್ಷಿಣ ಆಫ್ರಿಕಾ 49.2 ಓವರ್‌ಗೆ 241 (ಪ್ರಿಜ್‌ ಅಜೇಯ 90, ವೊಲ್ವಾರ್ಟ್‌ 59, ಏಕ್ತಾ ಬಿಷ್ಟ್ 38ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next