ಕಿಂಬರ್ಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಕಳೆದುಕೊಂಡ ಬಳಿಕ ಇಂಗ್ಲೆಂಡ್ ಅಂತಿಮ ಮುಖಾಮುಖಿಯಲ್ಲಿ ತಿರುಗಿ ಬಿದ್ದು ಗೌರವ ಉಳಿಸಿಕೊಂಡಿದೆ. ಕಿಂಬರ್ಲಿಯ “ಡೈಮಂಡ್ ಓವಲ್’ನಲ್ಲಿ ನಡೆದ ಮುಖಾಮುಖಿಯನ್ನು 59 ರನ್ನುಗಳಿಂದ ಜಯಿಸಿದೆ.
ಆರಂಭಕಾರ ಡೇವಿಡ್ ಮಲಾನ್ ಮತ್ತು ನಾಯಕ ಜಾಸ್ ಬಟ್ಲರ್ ಅವರ ಶತಕ ಇಂಗ್ಲೆಂಡ್ ಸರದಿಯ ಆಕರ್ಷಣೆ ಆಗಿತ್ತು. ಇವರಿಬ್ಬರ ಸಾಹಸದಿಂದ 7 ವಿಕೆಟಗೆ 346 ರನ್ ಒಟ್ಟುಗೂಡಿತು. ದಕ್ಷಿಣ ಆಫ್ರಿಕಾ 43.1 ಓವರ್‌ಗಳಲ್ಲಿ 287 ರನ್ ಬಾರಿಸಿ ಶರಣಾಯಿತು.
14 ರನ್ನಿಗೆ 3 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಇಂಗ್ಲೆಂಡ್‌ಗೆ ಮಲಾನ್-ಬಟ್ಲರ್ ಜೋಡಿ ರಕ್ಷಣೆ ಒದಗಿಸಿತು. ಭರ್ತಿ 35 ಓವರ್ ಜತೆಯಾಟ ನಡೆಸಿ 4ನೇ ವಿಕೆಟಿಗೆ 232 ರನ್ ರಾಶಿ ಹಾಕಿದರು. ಇಬ್ಬರೂ ಆಕ್ರಮಣಕಾರಿ ಆಟದ ಮೂಲಕ ಆತಿಥೇಯ ಬೌಲರ್‌ಗಳ ಮೇಲೆರಗಿ ಹೋದರು. ಮಲಾನ್ ಕೊಡುಗೆ 118 ರನ್. 114 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 6 ಸಿಕ್ಸರ್ ಸೇರಿತ್ತು. ಬೊಂಬಾಟ್ ಆಟವಾಡಿದ ಬಟ್ಲರ್ 127 ಎಸೆತಗಳನ್ನು ನಿಭಾಯಿಸಿ 131 ರನ್ ಹೊಡೆದರು. ಸಿಡಿಸಿದ್ದು 6 ಬೌಂಡರಿ ಹಾಗೂ 7 ಸಿಕ್ಸರ್. ಇವರಿಬ್ಬರನ್ನು ಹೊರತುಪಡಿಸಿದರೆ 41 ರನ್ ಮಾಡಿದ ಮೊಯಿನ್ ಅಲಿ ಅವರದೇ ಹೆಚ್ಚಿನ ಗಳಿಕೆ.
ದಕ್ಷಿಣ ಆಫ್ರಿಕಾದ ಚೇಸಿಂಗ್‌ನಲ್ಲಿ ಜೋಶ್ ಕಂಡುಬರಲಿಲ್ಲ. 6 ವಿಕೆಟ್ 193ಕ್ಕೆ ಉರುಳಿದರೆ, ಅಂತಿಮ 5 ವಿಕೆಟ್ ಕೇವಲ 9 ರನ್ ಅಂತರದಲ್ಲಿ ಉರುಳಿ ಹೋಯಿತು. ಜೋಫ್ರಾ ಆರ್ಚರ್ 40 ರನ್ನಿಗೆ 6 ವಿಕೆಟ್ ಕಿತ್ತು ಹರಿಣಗಳನ್ನು ಬೇಟೆಯಾಡಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಆಗಿದೆ. ರಶೀದ್ 3 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-7 ವಿಕೆಟಿಗೆ 346 (ಬಟ್ಲರ್ 131, ಮಲಾನ್ 118, ಅಲಿ 41, ಎನ್‌ಗಿಡಿ 62ಕ್ಕೆ 4, ಜಾನ್ಸೆನ್ 53ಕ್ಕೆ 2). ದಕ್ಷಿಣ ಆಫ್ರಿಕಾ-43.1 ಓವರ್‌ಗಳಲ್ಲಿ 287 (ಕ್ಲಾಸೆನ್ 80, ಹೆಂಡ್ರಿಕ್ಸ್ 52, ಬವುಮ 35, ಆರ್ಚರ್ 40ಕ್ಕೆ 6, ರಶೀದ್ 68ಕ್ಕೆ 3).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಜಾಸ್ ಬಟ್ಲರ್.