ಕೊಲಂಬೊ: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಭಾರತ ವನಿತೆಯರು ಐಸಿಸಿ ವನಿತಾ ವಿಶ್ವಕಪ್ ಅರ್ಹತಾ ಕೂಟದ ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 49 ರನ್ನುಗಳಿಂದ ಸೋಲಿಸಿದ್ದಾರೆ.
ದಿನದ ಇನ್ನೆರಡು ಪಂದ್ಯಗಳಲ್ಲಿ ಶ್ರೀಲಂಕಾ ತಂಡವು ಪಾಕಿಸ್ಥಾನವನ್ನು ಮತ್ತು ಬಾಂಗ್ಲಾ ದೇಶವು ಅಯರ್‌ಲ್ಯಾಂಡ್ ತಂಡವನ್ನು ಸೋಲಿಸಿದೆ. ಸೂಪರ್ ಸಿಕ್ಸ್ ಹಂತದ ದ್ವಿತೀಯ ಪಂದ್ಯದಲ್ಲಿ ಭಾರತ ವನಿತೆಯರು ಫೆ. 17ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿದ ಭಾರತ ತಂಡವು ಮೋನಾ ಮೆಶ್ರಾಮ್ ಮತ್ತು ಮಿಥಾಲಿ ರಾಜ್ ಅವರ ಅರ್ಧಶತಕದಿಂದಾಗಿ 8 ವಿಕೆಟಿಗೆ 205 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಮೊದಲ ವಿಕೆಟ್ ಬೇಗನೇ ಹೋದರೂ ಮೋನಾ ಮತ್ತು ರಾಜ್ ದ್ವಿತೀಯ ವಿಕೆಟಿಗೆ 96 ರನ್ ಪೇರಿಸಿದ್ದರಿಂದ ತಂಡ ಚೇತರಿಸಿಕೊಂಡಿತು. ಇವರಿಬ್ಬರೂ ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದರು. ಮೋನಾ 85 ಎಸೆತ ಎದುರಿಸಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 55 ರನ್ ಹೊಡೆದೆರ ಮಿಥಾಲಿ ರಾಜ್ 85 ಎಸೆತ ಎದುರಿಸಿ 10 ಬೌಂಡರಿ ನೆರವಿನಿಂದ 64 ರನ್ ಹೊಡೆದರು.
ಮೋನಾ ಮತ್ತು ಮಿಥಾಲಿ ಅವರನ್ನು ಬಿಟ್ಟರೆ ಉಳಿದ ಯಾವುದೇ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್ ಮಾಡಲು ವಿಫಲರಾದರು. ಅಂತಿಮವಾಗಿ ತಂಡ 8 ವಿಕೆಟ್ ಕಳೆದುಕೊಂಡು 205 ರನ್ ತಲುಪಿತು.
ಆರಂಭಿಕ ಕುಸಿತ ಕಂಡ ದಕ್ಷಿಣ ಆಫ್ರಿಕಾಕ್ಕೆ ಭಾರತೀಯ ಬೌಲರ್‌ಗಳು ಕಡಿವಾಣ ಹಾಕಲು ಯಶಸ್ವಿಯಾದರು. ಪಾಂಡೆ ಮತ್ತು ಏಕ್ತ ಬಿಸ್ತ್ ಅವರ ನಿಖರ ದಾಳಿಯಿಂದಾಗಿ ರನ್ ಗಳಿಸಿಲು ಒದ್ದಾಡಿದ ದಕ್ಷಿಣ ಆಫ್ರಿಕಾ 46.4 ಓವರ್‌ಗಳಲ್ಲಿ 156 ರನ್ನಿಗೆ ಆಲೌಟಾಯಿತು. ತೃಷಾ ಚೆಟ್ಟಿ 52 ರನ್ ಗಳಿಸಿದರು. ಬಿಗು ದಾಳಿ ಸಂಘಟಿಸಿದ ಶಿಖಾ ಪಾಂಡೆ 34 ರನ್ನಿಗೆ 4 ವಿಕೆಟ್ ಕಿತ್ತರೆ ಬಿಸ್ತ್ 22 ರನ್ನಿಗೆ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಭಾರತ ವನಿತೆಯರು 8 ವಿಕೆಟಿಗೆ 205 (ಮೋನಾ ಮೆಶ್ರಾಮ್ 55, ಮಿಥಾಲಿ ರಾಜ್ 64, ಶಿಖಾ ಪಾಂಡೆ 21, ಮಾರಿಝಾನೆ ಕ್ಯಾಪ್ 23ಕ್ಕೆ 2, ಅಯಬೋಂಗಾ ಖಾಟಾ 44ಕ್ಕೆ 2); ದಕ್ಷಿಣ ಆಫ್ರಿಕಾ ವನಿತೆಯರು 46.4 ಓವರ್‌ಗಳಲ್ಲಿ 156 (ತೃಷಾ ಚೆಟ್ಟಿ 52, ಮಾರಿಝಾನೆ ಕ್ಯಾಪ್ 29, ಡ್ಯಾನ್ ವಾನ ನೀಕೆರ್ಕ್ 20, ಶಿಖಾ ಪಾಂಡೆ 34ಕ್ಕೆ 4, ಏಕ್ತ ಬಿಸ್ತ್ 22ಕ್ಕೆ 3).