Advertisement

ಆರ್ಥಿಕ ಕುಸಿತದ ಭೀತಿ: ದ. ಆಫ್ರಿಕಾದಲ್ಲಿ ಲಾಕ್‌ ಡೌನ್‌ ಸಡಿಲಿಕೆ

04:33 PM May 02, 2020 | sudhir |

ಜೋಹಾನ್ಸ್‌ಬರ್ಗ್‌: ಜನರು ದುಡಿದು ಉಣ್ಣಬೇಕು, ಅದಕ್ಕಾಗಿ ಲಾಕ್‌ಡೌನ್‌ ಸಡಿಲಿಕೆ ಅನಿವಾರ್ಯ ಎಂದಿದೆ ದಕ್ಷಿಣ ಆಫ್ರಿಕಾ.
ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿರುವುದಾಗಿ ಘೋಷಿಸಿರುವ ಸರಕಾರ, ಕೆಲವು ಕೈಗಾರಿಕೆಗಳನ್ನು ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.

Advertisement

ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಿದ್ದ ದ. ಆಫ್ರಿಕಾ, ಐದು ವಾರಗಳ ಬಳಿಕ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲು ಮುಂದಾಗಿದೆ. ಆಫ್ರಿಕಾ ಖಂಡದ ಗರಿಷ್ಠ ಕೈಗಾರಿಕೀಕೃತ ದೇಶವಾದ ದ. ಆಫ್ರಿಕಾ ಕೋವಿಡ್ ಹರಡುವಿಕೆ ತಡೆಗಟ್ಟಲು ಮಾ. 27ರಂದು ಲಾಕ್‌ಡೌನ್‌ ಘೋಷಿಸಿದಲ್ಲಿಂದ ತೀವ್ರವಾದ ಆರ್ಥಿಕ ಸಂಕಷ್ಟ ಅನುಭವಿಸಿತ್ತು. ಕೈಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಯನ್ನು ಮೇ 1ರಿಂದಲೇ ಸರಕಾರ ಹಂತ ಹಂತವಾಗಿ ಆರಂಭಿಸಲು ಕಾರ್ಯೋನ್ಮುಖವಾಗಿದೆ.

ಸುಮಾರು 15 ಲಕ್ಷ ಮಂದಿ ಕಾರ್ಮಿಕರು ಕೆಲಸಕ್ಕೆ ಮರಳಲಿದ್ದು, ಕಠಿನ ಆರೋಗ್ಯ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ದ.ಆಫ್ರಿಕಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಇಬ್ರಾಹಿಂ ಪಟೇಲ್‌ ತಿಳಿಸಿದ್ದಾರೆ.

ಚಳಿಗಾಲದ ಉಡುಪುಗಳು, ಬಟ್ಟೆ ಹಾಗೂ ಪ್ಯಾಕೇಜಿಂಗ್‌ ಸಾಂಗ್ರಿ ತಯಾರಿಕೆ ಸಹಿತ ಹಲವು ಉದ್ಯಮಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರೆಸ್ಟೋರೆಂಟ್‌ಗಳು ಬಾಗಿಲು ತೆರೆಯಲಿದ್ದರೂ ಪಾರ್ಸೆಲ್‌ ಸೇವೆಗಳಿಗೆ ಮಾತ್ರ ಅವಕಾಶವಿದೆ. ಆದರೆ ಮದ್ಯ ಹಾಗೂ ಸಿಗರೇಟ್‌ ಮಾರಾಟದ ಮೇಲಿನ ನಿಷೇಧ ಈಗಿನಂತೆಯೇ ಮುಂದುವರಿಯಲಿದೆ.

ಸೈಕ್ಲಿಂಗ್‌, ನಡಿಗೆ, ಓಟದಂತಹ ಹೊರಾಂಗಣ ಚಟುವಟಿಕೆಗೆ ಬೆಳಗ್ಗಿನ ಮೂರು ಗಂಟೆಗಳಷ್ಟು ಕಾಲ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯ.

Advertisement

ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳನ್ನು ಮುಚ್ಚಿಸುವುದಾಗಿ ಸಹಕಾರ ಆಡಳಿತ ಸಚಿವ ಎನ್‌ಕೊಸಾಝಾನಾ ಡ್ಲಾಮಿನಿ ಝುಮಾ ಎಚ್ಚರಿಸಿದ್ದಾರೆ.

“ನಮ್ಮ ಜನರು ಬದುಕಬೇಕಲ್ಲವೇ?’
ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಆರ್ಥಿಕತೆಯ ನಡುವೆ ಸಮತೋಲನ ಸಾಧಿಸಲು ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆಯನ್ನು ತರುವ ನಿರ್ಧಾರ ಅನಿವಾರ್ಯ ಎಂದಿದ್ದಾರೆ ದ. ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಮಫೋಸಾ.

ನಮ್ಮ ಜನರು ಊಟ ಮಾಡಬೇಕಲ್ಲವೇ? ಅದಕ್ಕಾಗಿ ಅವರು ಸಂಪಾದನೆ ಮಾಡಬೇಕಿದೆ. ಕಂಪೆನಿಗಳು ಉತ್ಪಾದನೆ ಹಾಗೂ ವಹಿವಾಟು ನಡೆಸುವಂತಾಗಬೇಕು. ನೌಕರರನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ಅವು ಆದಾಯ ಸೃಷ್ಟಿಸಬೇಕಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಕೋವಿಡ್ ವೈರಸ್‌ ಹರಡುವುದಕ್ಕಿಂತಲೂ ಮೊದಲೇ ಅಲ್ಲಿನ ಕೈಗಾರಿಕೆಗಳು ಆರ್ಥಿಕ ಹಿಂಜರಿತ ಅನುಭವಿಸಿದ್ದವು. ಬೆಳವಣಿಗೆ ಕುಂಠಿತವಾಗಿ ಸಾಕಷ್ಟು ಸಾಲದ ಹೊರೆಯೂ ಇತ್ತು. ಕಳೆದ ವಾರ ಅಧ್ಯಕ್ಷ ಸಿರಿಲ್‌ ಅವರು 26.9 ಬಿಲಿಯನ್‌ ಡಾಲರ್‌ಗಳ ಪುನಶ್ಚೇತನ ಪ್ಯಾಕೇಜ್‌ ಪ್ರಕಟಿಸಿದ್ದರು. ಅದು ದೇಶದ ಒಟ್ಟು ಜಿಡಿಪಿಯ ಶೇ. 10ರಷ್ಟಾಗಿತ್ತೆಂಬುದು ಉಲ್ಲೇಖನೀಯ.

ಐಎಂಎಫ್ ಹಾಗೂ ವಿಶ್ವ ಬ್ಯಾಂಕ್‌ನಿಂದ ದ. ಆಫ್ರಿಕಾವು 4.2 ಬಿಲಿಯನ್‌ ಡಾಲರ್‌ಗಳಷ್ಟು ಕೋವಿಡ್ ಪರಿಹಾರ ನಿಧಿಯನ್ನು ಕೇಳುವುದಾಗಿ ಹಣಕಾಸು ಸಚಿವ ಟಿಟೊ ಎಂಬೊವೆನಿ ತಿಳಿಸಿದ್ದಾರೆ.

ಲಾಕ್‌ಡೌನ್‌ ಆರ್ಥಿಕತೆಯ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದ್ದರೂ, ಕೋವಿಡ್ ವೈರಸ್‌ ಹಬ್ಬುವುದನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಮಾ. 5ರಂದು ಮೊದಲ ಕೋವಿಡ್ ಪ್ರಕರಣ ಪತ್ತೆಯಾದ ಬಳಿಕ ದೇಶದಲ್ಲಿ ಒಟ್ಟು 5,647 ಜನರು ಸೋಂಕು ಪೀಡಿತರಾಗಿದ್ದಾರೆ. 103 ಜನರು ಬಲಿಯಾಗಿದ್ದಾರೆ.

ಆಫ್ರಿಕನ್‌ ರಾಷ್ಟ್ರಗಳ ಹಲವೆಡೆ ಸೋಂಕು ವ್ಯಾಪಿಸುತ್ತಿದ್ದು, ಬಹುತೇಕ ಕಡೆ ದುರ್ಬಲ ಆರೋಗ್ಯ ವ್ಯವಸ್ಥೆ ಆತಂಕವನ್ನು ಸೃಷ್ಟಿಸಿದೆ. ಹಲವು ರಾಷ್ಟ್ರಗಳು ಲಾಕ್‌ಡೌನ್‌ ಜಾರಿಗೊಳಿಸಿವೆ. ನೈಜೀರಿಯಾ ಸಹ ಮೇ 4 ರ ಬಳಿಕ ಲಾಕ್‌ಡೌನ್‌ ಸಡಿಲಿಕೆ ಮಾಡಲು ಯೋಚಿಸುತ್ತಿದೆ. ಘಾನಾದಲ್ಲೂ ಸ್ವದೇಶಿ ವಿಮಾನ ಯಾನ ಸಂಚಾರ ಆರಂಭಿಸಲು ಆಲೋಚಿಸುತ್ತಿದೆ. ಜಿಂಬಾಬ್ವೆಯಲ್ಲಿ ಈಗಾಗಲೇ ಲಾಕ್‌ಡೌನ್‌ ಸಡಿಲಿಕೆ ಮಾಡಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಬಹುತೇಕ ಆಫ್ರಿಕನ್‌ ರಾಷ್ಟ್ರಗಳಲ್ಲಿ ಕುಸಿಯುತ್ತಿರುವ ಆರ್ಥಿಕತೆ ಆನಿವಾರ್ಯವಾಗಿ ಲಾಕ್‌ಡೌನ್‌ ಹಿಂಪಡೆಯುವ ಸ್ಥಿತಿಯನ್ನು ನಿರ್ಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next