Advertisement

ಇನ್ನೂ ಪತ್ತೆಯಾಗದ ಕೋವಿಡ್-19 ಸೋಂಕಿನ ಮೂಲ

05:04 PM Apr 17, 2020 | mahesh |

ಮೈಸೂರು: ಜಿಲ್ಲೆಯಲ್ಲಿ ಹೆಚ್ಚು ಕೋವಿಡ್‌-19 ಪ್ರಕರಣಗಳು ಕಂಡುಬಂದಿರುವ ನಂಜನಗೂಡು ಜ್ಯುಬಿಲಿಯಂಟ್‌ ಕಾರ್ಖಾನೆ ನೌಕರರಿಗೆ ತಗಲಿರುವ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲವಾದರೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯವನ್ನೇ ತಲ್ಲಣಗೊಳಿಸಿರುವ 2 ಪ್ರಕರಣಗಳಲ್ಲಿ ಜ್ಯುಬಿಲಿಯಂಟ್‌ ಕಾರ್ಖಾನೆ ಪ್ರಕರಣವೂ ಒಂದು. ಕಾರ್ಖಾನೆ ನೌಕರರಿಗೆ ಕೋವಿಡ್-19 ಹೇಗೆ ತಗುಲಿತು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಜಿಲ್ಲೆಯ 61 ಸೋಂಕು ಹರಡಿರುವವರ ಪೈಕಿ 49 ಪ್ರಕರಣ ಜ್ಯುಬಿಲಿಯಂಟ್‌ನದ್ದೇ ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಆವರಿಸಿದ್ದರೂ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ದಿನದಿಂದ ದಿನಕ್ಕೆ ಅನುಮಾನ ವ್ಯಕ್ತವಾಗುತ್ತಿದೆ.

Advertisement

ಯುಎಸ್‌ಎ ಪ್ರವಾಸಿಗರಿಂದ ಹರಡಿತೆ?:
ಜ್ಯುಬಿಲಿಯಂಟ್‌ಗೆ ಯುಎಸ್‌ಎಯಿಂದ 20 ಮಂದಿ ಫೆ.13ರಂದು ಆಗಮಿಸಿ ಬಳಿಕ ನಂಜನಗೂಡಲ್ಲಿ ಓಡಾಡಿ, ಫೆ.18ರಂದು ವಾಪಸ್‌ ಆಗಿದ್ದಾರೆ. ಯುಎಸ್‌ಎಯಿಂದ ಬಂದವರು ಶ್ರೀಕಂಠೇಶ್ವರ ದೇಗುಲ ಸೇರಿ ಹಲವು ಸ್ಥಳಗಳಿಗೆ ಭೇಟಿಕೊಟ್ಟಿದ್ದು, ಇವರ ಜೊತೆ ಮೊದಲ ಸೋಂಕಿತ ಪಿ-52
ಮಾರ್ಗದರ್ಶಕನಾಗಿ ಓಡಾಡಿದ್ದಾನೆ. ಯುಎಸ್‌ಎನಿಂದ ಬಂದ 20 ಮಂದಿ ಜೊತೆ ನೇರ ಸಂಪರ್ಕದಲ್ಲಿ ಪಿ-52 ಇರುವುದರಿಂದಲೇ ಆತನಿಗೆ ಮೊದಲು ಸೋಂಕು
ಕಾಣಿಸಿಕೊಂಡಿದೆ ಎಂಬ ಬಗ್ಗೆ ಕಾರ್ಖಾನೆ ವಲಯದಲ್ಲಿ ಚರ್ಚೆಯಾಗುತ್ತಿದೆ.

ಚೀನಾ ಪ್ರವಾಸ ಮಾಡಿದ್ದನೆ?: ಜ್ಯುಬಿಲಿಯಂಟ್‌ ಮೊದಲ ಸೋಂಕಿತ ಪಿ-52 ವ್ಯಕ್ತಿ ಕಾರ್ಖಾನೆ ಕೆಲಸದ ನಿಮಿತ್ತ ಚೀನಾಕ್ಕೆ ಫೆಬ್ರವರಿ ಅಂತ್ಯದಲ್ಲಿ ತೆರಳಿದ್ದ ಎಂಬ ವದಂತಿಗಳೂ ಕೇಳಿಬರುತ್ತಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಕಾರ್ಖಾನೆಯೂ ಪಿ-52 ಚೀನಾ ಪ್ರವಾಸವನ್ನು ತಳ್ಳಿಹಾಕಿದೆ.

ವಿದೇಶಿ ಸಂಪರ್ಕವೇ ಕಾರಣ?:
ಕಾರ್ಖಾನೆಗೆ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಆಡಿಟ್‌ಗಾಗಿ ವಿದೇಶದಿಂದ ಹಲವರು ಬಂದಿದ್ದು, ಕಾರ್ಖಾನೆ ಮುಂಜಾಗ್ರತೆ ಕ್ರಮವಹಿಸದ ಕಾರಣ ಅವರಿಂದ ನೌಕರರಿಗೆ ಸೋಂಕು ತಗುಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಾರೆ ಜ್ಯುಬಿಲಿಯಂಟ್‌ ಸೋಂಕಿನ ಮೂಲದ ಸುತ್ತ ಅನುಮಾನದ ಹುತ್ತವೇ ಮೂಡಿದೆ.

ಪ್ರಕರಣ ಹೈಕೋರ್ಟ್‌ಗೆ
ಬೆಂಗಳೂರು: ದೊಡ್ಡ ಸಂಖ್ಯೆಯಲ್ಲಿ ಕೋವಿಡ್-19 ಸೋಂಕು ವರದಿಯಾಗಿರುವ ನಂಜನಗೂಡಿನ ಜ್ಯುಬಿಲಿಯಂಟ್‌ ಜನೆರಿಕ್‌ ಕಂಪೆನಿಯ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ಈ ಕುರಿತು “ಸೇವ್‌ ನಂಜನಗೂಡು ಫೋರಂ’ ಸಂಚಾಲಕ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ಅರ್ಜಿಯನ್ನಾಗಿ ಪರಿವರ್ತಿಸಿಕೊಂಡು ಏ.21ರಂದು ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next