Advertisement

ವಿಷುವಿಗಾಗಿ ವಿಶೇಷ ಅಡುಗೆ

01:24 AM Apr 13, 2019 | Team Udayavani |

ಕರಾವಳಿ ಭಾಗದ ಜನರಿಗೆ ಸೌರಮಾನ ಯುಗಾದಿ (ವಿಷು)ಎಂದರೆ ಹೊಸ ವರ್ಷದ ಸಂಭ್ರಮ. ಬೇಸಾಯ ಮುಗಿದ ಈ ಸಮಯದಲ್ಲಿ ಕೃಷಿ ಉತ್ಪನನ್ನಗಳನ್ನು ದೇವರಿಗೆ ಕಣಿ ಇಟ್ಟು ಪೂಜಿಸಿ ಹಬ್ಬ ಆಚರಿಸಲಾಗುತ್ತದೆ. ಸಿಹಿ ತಿಂಡಿಗಳೇ ವಿಷುವಿನ ಆಕರ್ಷಣೆ. ಈ ಬಾರಿಯ ವಿಷುವಿಗೆ ಹೊಸ ರುಚಿ ಮಾಡಬೇಕೆಂದಿದ್ದರೆ ಇಲ್ಲಿರುವ ಕೆಲವು ರೆಸಿಪಿಗಳನ್ನು ಟ್ರೈ ಮಾಡಿ ನೋಡಬಹುದು.

Advertisement

ಗುಳಿಯಪ್ಪ
ಬೇಕಾಗುವ ಸಾಮಗ್ರಿಗಳು
– ಬೆಳ್ತಿಗೆ ಅಕ್ಕಿ: 1 ಕೆ.ಜಿ.
– ಬೆಲ್ಲ: 1/2 ಕೆ.ಜಿ.
– ಬಾಳೆಹಣ್ಣು (ಕದಳಿ ಅಥವಾ ಮೈಸೂರು): 1/2 ಕೆ.ಜಿ.
– ಗೋಡಂಬಿ, ದ್ರಾಕ್ಷಿ, ಏಲಕ್ಕಿ: ಸ್ವಲ್ಪ
– ಹುರಿದ ಎಳ್ಳು: ಸ್ವಲ್ಪ
– ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಅಕ್ಕಿ, ಬೆಲ್ಲ, ಬಾಳೆ ಹಣ್ಣುಗಳನ್ನು ಒಟ್ಟಿಗೆ ಸೇರಿಸಿ ರುಬ್ಬಿಕೊಳ್ಳಬೇಕು. ಹಿಟ್ಟು ಹದ ಗಟ್ಟಿಯಾಗಿರಲಿ. ಕೊನೆಯಲ್ಲಿ ಗೋಡಂಬಿ, ದ್ರಾಕ್ಷಿ, ಎಲಕ್ಕಿ, ಎಳ್ಳು, ಉಪ್ಪು ಹಾಕಬೇಕು. ಅನಂತರ ಗುಳಿ ಪಾತ್ರೆ ಸ್ಟೌ ಮೇಲಿಟ್ಟು ಪೂರ್ತಿ ತೆಂಗಿನ ಎಣ್ಣೆ ಹಾಕಿ ಜಾಸ್ತಿ ಕರಿಯದ ಹಾಗೆ ಬೇಯಿಸಬೇಕು. ಆಗ ರುಚಿಯಾದ ಗುಳಿಯಪ್ಪ ತಿನ್ನಲು ಸಿದ್ಧವಾಗುತ್ತದೆ.

ಹಾಲು ಹೋಳಿಗೆ
ಬೇಕಾಗುವ ಸಾಮಗ್ರಿಗಳು
– ಗಸಗಸೆ: 2 ಚಮಚ
– ಸಕ್ಕರೆ: 1/4 ಕಪ್‌
– ತುರಿದ ತೆಂಗಿನಕಾಯಿ: 1/4 ಕಪ್‌
– ಗೋಡಂಬಿ, ದ್ರಾಕ್ಷಿ: ಸ್ವಲ್ಪ
– ಕೇಸರಿ: ಚಿಟಿಕರ
– ಹಾಲು: 1ಕಪ್‌
– ನೀರು: 1/2ಕಪ್‌
– ಮೈದಾ: 1/2ಕಪ್‌
– ತುಪ್ಪ: 1 ಚಮಚ
– ಉಪ್ಪು: ಸ್ವಲ್ಪ

ಮಾಡುವ ವಿಧಾನ
ಮೊದಲು ಒಂದು ಪ್ಯಾನ್‌ನಲ್ಲಿ ಗೋಡಂಬಿ, ದ್ರಾಕ್ಷಿ, ಬಾದಮ್‌ ಅನ್ನು ಹುರಿದುಕೊಳ್ಳಬೇಕು. ಅದೇ ಪ್ಯಾನ್‌ನಲ್ಲಿ ಗಸಗಸೆಯನ್ನು ಕೆಂಬಣ್ಣ ಬರುವವವರೆಗೆ ಹುರಿಯಬೇಕು. ಆರಿದ ಬಳಿಕ ಈ ಗಸಗಸೆ, ಗೋಡಂಬಿ, ದ್ರಾಕ್ಷಿ, ಬಾದಾಮ್‌ ಅನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ತೆಂಗಿನ ತುರಿಯನ್ನು ಸೇರಿಸಿ ಚೆನ್ನಾಗಿ ಅರೆಯಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸಕ್ಕರೆ, ಹಾಲು ಹಾಕಿ ಚೆನ್ನಾಗಿ ಕುದಿಸಬೇಕು. ಕೇಸರಿಯನ್ನು ಸೇರಿಸಬೇಕು. ಚೆನ್ನಾಗಿ ಕುದಿದ ಬಳಿಕ ಅದನ್ನು ತೆಗೆದು ಕೆಳಗಿಡಬೇಕು. ಒಂದು ಪಾತ್ರೆಯಲ್ಲಿ ಮೈದಾ ತೆಗೆದುಕೊಂಡುಅದಕ್ಕೆ ತುಪ್ಪ, ಉಪ್ಪು, ನೀಈರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಹಿಟ್ಟು ತಯಾರಿಸಬೇಕು. ಇದನನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿ ಎಣ್ಣೆಯಲ್ಲಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ಈ ಪೂರಿಗೆ ಕುದಿಸಿದ ಹಾಲನ್ನು ಹಾಕಿ ಕೊಟ್ಟರೆ ಹಾಲು ಹೋಳಿಗೆ ಸವಿಯಲು ಸಿದ್ಧ.

Advertisement

ಬಾದಾಮ್‌ ಪೂರಿ
ಬೇಕಾಗುವ ಸಾಮಗ್ರಿಗಳು
– ಮೈದಾ: 1ಕಪ್‌
– ತುಪ್ಪ: 3 ಚಮಚ
– ಸಕ್ಕರೆ:1 ಕಪ್‌
– ಬೇಕಿಂಗ್‌ ಸೋಡಾ: ಸ್ವಲ್ಪ
– ಹಾಲು: 4 ಚಮಚ
– ಎಲಕ್ಕಿ: ಸ್ವಲ್ಪ
– ಎಣ್ಣೆ: ಕರಿಯಲು
– ನಿಂಬೆ ರಸ : ಸ್ವಲ್ಪ
– ಕಲರ್‌: ಸ್ವಲ್ಪ

ಮಾಡುವ ವಿಧಾನ
ಮೊದಲ ಒಂದು ಪಾತ್ರೆಗೆ ಮೈದಾ ಹಾಗೂ ಒಂದು ಚಮಚ ಸಕ್ಕರೆ, ಬೇಕಿಂಗ್‌ ಸೋಡಾ, 3ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಮಾಡಬೇಕು. ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ 10 ನಿಮಿಷ ಬಿಡಬೇಕು. ಒಂದು ಪಾತ್ರೆಗೆ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ ಒಂದೆಳೆ ಪಾಕ ತಯಾರಿಸಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ ಹುಡಿ, ಕಲರ್‌ ಹುಡಿ ಹಾಕಬೇಕು. ಎಣ್ಣೆ ಕುದಿಸಿ ಹಿಟ್ಟನ್ನು ಪೂರಿ ಆಕಾರಕ್ಕೆ ಲಟ್ಟಿಸಿ ಅದರ ಮೇಲೆ ತುಪ್ಪ ಹಾಕಿ ಅದನ್ನು ಮಡುಚಬೇಕು. ಅದರ ಮೇಲೆ ಮತ್ತೂಂದು ಸಲ ತುಪ್ಪ ಸವರಿ ಮಡುಚಬೇಕು. ಹೋಗೆ 4 ಮಡಿಕೆ ಮಡುಚಿ ಎಣ್ಣೆಯಲ್ಲಿ ಕರಿಯಬೇಕು. ಕಡಿಮೆ ಉರಿಯಲ್ಲಿ ಬೇಯಿಸಬೇಕು. ಇದನ್ನು ಕೆಂಬಣ್ಣ ಬರುವವರೆಗೆ ಹುರಿದು ಸಕ್ಕರೆ ಪಾಕಕ್ಕೆ ಹಾಕಿದಾಗ ಬಾದಮ್‌ ಪೂರಿ ಸವಿಯಲು ಸಿದ್ಧವಾಗುತ್ತದೆ.

ಸೋರೆಕಾಯಿ ಹೋಳಿಗೆ
ಬೇಕಾಗುವ ಸಾಮಗ್ರಿಗಳು
– ಕಣಕಕ್ಕೆ: ಮೈದಾ ಹಿಟ್ಟು- 3 ಕಪ್‌
– ನೀರು- 1 ಕಪ್‌
– ಅಡುಗೆ ಎಣ್ಣೆ – 1/4 ಕಪ್‌
– ರುಚಿಗೆ ತಕ್ಕಷ್ಟು ಉಪ್ಪು
– ಚಿಟಿಕೆ ಅರಿಸಿನ ಪುಡಿ
– ಹೂರಣಕ್ಕೆ: ಸೋರೆಕಾಯಿ ತುರಿ- 3 ಕಪ್‌,
– ಬೆಲ್ಲ- 1 ಕಪ್‌
– ತುಪ್ಪ- 2 ಚಮಚ
– ಏಲಕ್ಕಿ- 4
– ಚಿರೋಟಿ ರವೆ- 2 ಚಮಚ (ಬೇಕಿದ್ದರೆ)

ಮಾಡುವ ವಿಧಾನ
ಮೈದಾ ಹಿಟ್ಟನ್ನು ಪಾತ್ರೆಗೆ ಹಾಕಿ, ನೀರು, ಉಪ್ಪು, ಅರಿಸಿನ ಪುಡಿ ಹಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿ. ಅದನ್ನು ಒಂದು ಗಂಟೆಯ ಕಾಲ ಮುಚ್ಚಿಡಿ. ಸೋರೆಕಾಯಿಯ ಸಿಪ್ಪೆ ತೆಗೆದು, ತಿರುಳು- ಬೀಜಗಳನ್ನು ಬೇರ್ಪಡಿಸಿ, ಬಿಳಿ ಭಾಗವನ್ನು ತುರಿದಿಟ್ಟುಕೊಳ್ಳಿ. ಆ ತುರಿಯನ್ನು ಬಾಣಲೆಗೆ ಹಾಕಿ, ಬೆಲ್ಲ ಸೇರಿಸಿ, ತುಪ್ಪ ಹಾಕಿ, ಆಗಾಗ ಸೌಟಿನಿಂದ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ ಬೇಯಿಸಿ. ತಳ ಬಿಟ್ಟು ಬರುವಾಗ ಕೆಳಗಿಳಿಸಿ. ಏಲಕ್ಕಿ ಪುಡಿ ಬೆರೆಸಿ ಹೂರಣ ಸಿದ್ಧಪಡಿಸಿ. ಬಿಸಿ ಆರಿದ ಮೇಲೆ ಲಿಂಬೆಯ ಗಾತ್ರದ ಉಂಡೆಗಳನ್ನು ತಯಾರಿಸಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಲಿಂಬೆ ಗಾತ್ರದ ಕಣಕದ ಉಂಡೆಯನ್ನು ಸ್ವಲ್ಪ ತಟ್ಟಿ, ಅದರ ಒಳಗೆ ಹೂರಣದ ಉಂಡೆಯನ್ನು ಇಟ್ಟು ಸಂಪೂರ್ಣವಾಗಿ ಕಣಕದಿಂದ ಮುಚ್ಚಿ ಉಂಡೆ ಕಟ್ಟಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್‌ ಶೀಟ್‌ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ಅಥವಾ ಚಪಾತಿಯಂತೆ ಮೈದಾ/ ಗೋಧಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಿಸಿ. ತವಾದಲ್ಲಿ ಬೇಯಿಸಿ. ಸೋರೆಕಾಯಿ ಹೋಳಿಗೆಯನ್ನು ಕಾಯಿ ಹಾಲಿನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಖರ್ಜೂರ ಪಾಯಸ
ಬೇಕಾಗುವ ಸಾಮಗ್ರಿಗಳು
– ಸಿಪ್ಪೆ ಮತ್ತು ಬೀಜ ತೆಗೆದ ಖರ್ಜೂರ: 200 ಗ್ರಾಂ
– ಬೆಲ್ಲ: ಸಿಹಿ
– ತೆಂಗಿನ ತುರಿ: 1 ಕಪ್‌
– ಸಕ್ಕರೆ: 4 ಚಮಚ

ಮಾಡುವ ವಿಧಾನ
ಮೊದಲು ಕುದಿಯುವ ನೀರಿಗೆ ಖರ್ಜೂರವನ್ನು ಹಾಕಿ ಒಂದು ನಿಮಿಷ ಕುದಿಸಿ ಮುಚ್ಚಿಡಬೇಕು. ಅನಂತರ ಸ್ವಲ್ಪ ಹೊತ್ತು ಬಿಟ್ಟು ಖರ್ಜೂರವನ್ನು ಹಾಕಿ ಅದರ ಕುದಿಸಿದ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಅರೆದು ಹಾಲು ತಯಾರಿಸಿಕೊಳ್ಳಬೇಕು. ಅನಂತರ ಖಜೂರದ ಪೇಸ್ಟ್‌ನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ತೆಂಗಿನ ಹಾಲು, ಬೆಲ್ಲ ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದಿಯುತ್ತಾ ಇರುವಾಗ ಹಾಲನ್ನು ಸೇರಿಸಬೇಕು. ಚೆನ್ನಾಗಿ ಕುದಿದ ಅನಂತರ ದಕ್ಕೆ ಬಾದಾಮಿ ಸೇರಿಸಬೇಕು. ರುಚಿ ರುಚಿಯಾದ ಖರ್ಜೂರ ಪಾಯಸ ಸವಿಯಲು ಸಿದ್ಧವಾಗುತ್ತದೆ.

– ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next