Advertisement

ಸೌರಭ್‌ ವರ್ಮ ಪ್ರಶಸ್ತಿ ಸಂಭ್ರಮ

02:54 PM Jul 30, 2018 | Team Udayavani |

*ಜಪಾನಿನ ಕೋಕಿ ವಟಾನಬೆ ವಿರುದ್ಧ 19-21, 21-12, 21-17 ಜಯ

Advertisement

* ಮಿಕ್ಸೆಡ್‌ ಡಬಲ್ಸ್‌: ರೋಹನ್‌ ಕಪೂರ್‌-ಕುಹೂ ಗರ್ಗ್‌ ರನ್ನರ್ ಅಪ್‌

ವ್ಲಾದಿವೋಸ್ಟೋಕ್‌ (ರಶ್ಯ): ಮಾಜಿ ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ ವರ್ಮ 75 ಸಾವಿರ ಡಾಲರ್‌ ಬಹುಮಾನದ “ರಶ್ಯ ಓಪನ್‌ ಟೂರ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿ’ಯಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ಜಪಾನಿನ ಕೋಕಿ ವಟಾನಬೆ ವಿರುದ್ಧ ರವಿವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ಅವರು ಮೊದಲ ಗೇಮ್‌ ಹಿನ್ನಡೆಯ ಬಳಿಕ 19-21, 21-12, 21-17 ಅಂತರದಿಂದ ಜಯ ಸಾಧಿಸಿ ಸಂಭ್ರಮಿಸಿದರು.

ಇದೇ ವೇಳೆ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಭಾರತದ ದ್ವಿತೀಯ ಶ್ರೇಯಾಂಕದ ಜೋಡಿ ರೋಹನ್‌ ಕಪೂರ್‌-ಕುಹೂ ಗರ್ಗ್‌ ಪ್ರಶಸ್ತಿ ಸಮರದಲ್ಲಿ ಎಡವಿ ರನ್ನರ್ ಅಪ್‌ಗೆ ಸಮಾಧಾನಪಟ್ಟಿತು. ರಶ್ಯದ ವ್ಲಾದಿಮಿರ್‌ ಇವನೋವ್‌-ಕೊರಿಯಾದ ಮಿನ್‌ ಕ್ಯುಂಗ್‌ ಕಿಮ್‌ ಭಾರತೀಯರೆದುರಿನ ಪಂದ್ಯವನ್ನು 21-19, 21-17 ಅಂತರದಿಂದ ಗೆದ್ದರು.

ಸಾಹಸಮಯ ಪ್ರದರ್ಶನ
25ರ ಹರೆಯದ ಸೌರಭ್‌ ವರ್ಮ ಮತ್ತು ವಿಶ್ವದ 119ನೇ ರ್‍ಯಾಂಕಿಂಗ್‌ ಶಟ್ಲರ್‌ ವಟಾನಬೆ ನಡುವೆ “ನ್ಪೋರ್ಟ್‌ ಹಾಲ್‌ ಒಲಿಂಪಿಕ್‌’ನಲ್ಲಿ ನಡೆದ ಫೈನಲ್‌ ಹಣಾಹಣಿ ಸರಿಯಾಗಿ ಒಂದು ಗಂಟೆ ಕಾಲ ಸಾಗಿತು.  ಮೊದಲ ಗೇಮ್‌ನಲ್ಲಿ ಜಪಾನಿ ಆಟಗಾರನ ಕೈ ಮೇಲಾಯಿತು. ಇಲ್ಲಿ ವಟಾನಬೆಯನ್ನು ಬೆನ್ನು ಹಿಡಿಯುವುದೇ ಭಾರತೀಯನಿಗೆ ಸವಾಲಾಗಿ ಪರಿಣಮಿಸಿತು. 2-0 ಅಂಕಗಳ ಮುನ್ನಡೆ ಸಾಧಿಸಿದ ವಟಾನಬೆ, ವಿರಾಮದ ವೇಳೆ 11-5 ಅಂತರದ ಭರ್ಜರಿ ಮುನ್ನಡೆ ಯಲ್ಲಿದ್ದರು. ಬಳಿಕ ಸೌರಭ್‌ ಸಾಹಸಮಯ ಪ್ರದರ್ಶನವೊಂದಕ್ಕೆ ಸಾಕ್ಷಿಯಾದರು. ಸತತ ಅಂಕಗಳನ್ನು ಗಳಿಸುತ್ತ ಹೋಗಿ 11-12ರ ತನಕ ಬಂದರು. ಬಳಿಕ ವಟಾನಬೆ 18-13 ಅಂಕಗಳ ಜಿಗಿತ ಕಂಡರು. ಸತತ 5 ಅಂಕ ಗಳಿಸಿದ ಸೌರಭ್‌ ಸಮಬಲದ ಸಾಧನೆಗೈದರೂ ಕೇವಲ 2 ಅಂಕಗಳ ಹಿನ್ನಡೆಯಿಂದ ಮೊದಲ ಗೇಮ್‌ ಕಳೆದುಕೊಳ್ಳಬೇಕಾಯಿತು.

Advertisement

ದ್ವಿತೀಯ ಗೇಮ್‌ನಲ್ಲಿ ಸೌರಭ್‌ ವರ್ಮ ತಿರುಗಿ ಬಿದ್ದರು. ಆರಂಭದಲ್ಲೇ 7-3 ಮುನ್ನಡೆ ಸಾಧಿಸಿದರೆ, ಬ್ರೇಕ್‌ ವೇಳೆ 11-6ರ ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದರು. ವಿರಾಮದ ಬಳಿಕ ಸೌರಭ್‌ ಹಿಡಿತ ಇನ್ನಷ್ಟು ಬಿಗಿಯಾಗತೊಡಗಿತು. ಎದುರಾಳಿಯ ಅಂಕ 12ಕ್ಕೆ ಸೀಮಿತಗೊಂಡಿತು. ಸೌರಭ್‌ ದೊಡ್ಡ ಅಂತರದಿಂದ ಗೆದ್ದು ಹೋರಾಟವನ್ನು ಸಮಬಲಕ್ಕೆ ತಂದರು. ನಿರ್ಣಾಯಕ ಗೇಮ್‌ ಬಹಳ ಜೋಶ್‌ನಿಂದ ಕೂಡಿತ್ತು. ವಟಾನಬೆ 9-3ರ ಮುನ್ನಡೆ ಸಾಧಿಸಿದಾಗ, ವಿರಾಮದ ವೇಳೆ 11-7ರ ಲೀಡ್‌ನ‌ಲ್ಲಿದ್ದಾಗ ಪ್ರಶಸ್ತಿ ಭಾರತೀಯನ ಕೈಯಿಂದ ಜಾರಿತೆಂದೇ ಭಾವಿಸಲಾಯಿತು. ಆದರೆ ಅನಂತರ ಸೌರಭ್‌ ತಿರುಗಿ ಬಿದ್ದ ಪರಿ ಅಮೋಘ. ಪಂದ್ಯ 17-17ಕ್ಕೆ ಸಮಬಲಕ್ಕೆ ಬಂದ ಬಳಿಕ ವಟಾನಬೆಗೆ ಒಂದೂ ಅಂಕ ಗಳಿಸಲಾಗಲಿಲ್ಲ. ಸೌರಭ್‌ ವರ್ಮ ಗೆಲುವಿನ ಸಂಭ್ರಮ ಆಚರಿಸಿದರು.

ಏಶ್ಯಾಡ್‌ಗೆ ಹೊಸ ಸ್ಫೂರ್ತಿ
ಈ ಪ್ರಶಸ್ತಿ ಮುಂಬರುವ ಏಶ್ಯನ್‌ ಗೇಮ್ಸ್‌ ಹೋರಾಟಕ್ಕೆ ಹೊಸ ಸ್ಫೂರ್ತಿ ತುಂಬಲಿದೆ ಎಂಬುದಾಗಿ ಹೈದರಾಬಾದ್‌ ಮೂಲದ, ಪಿ. ಗೋಪಿಚಂದ್‌ ಅವರಿಂದ ತರಬೇತು ಪಡೆದಿರುವ ಸೌರಭ್‌ ವರ್ಮ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ “ಆಲ್‌ ಇಂಡಿಯಾ ಸೀನಿಯರ್‌ ರ್‍ಯಾಂಕಿಂಗ್‌ ಟೂರ್ನಮೆಂಟ್‌’ನಲ್ಲಿ ಜಯ ಸಾಧಿಸುವ ಮೂಲಕ ಸೌರಭ್‌ ಏಶ್ಯಾಡ್‌ ಅರ್ಹತೆ ಸಂಪಾದಿಸಿದ್ದರು. ಇದು ಸೌರಭ್‌ ವರ್ಮ ಗೆದ್ದ ವಿಶ್ವ ಮಟ್ಟದ ಕೇವಲ 2ನೇ ಪ್ರಶಸ್ತಿ. ಇದಕ್ಕೂ ಮುನ್ನ 2016ರಲ್ಲಿ ಚೈನೀಸ್‌ ತೈಪೆ ಮಾಸ್ಟರ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಆದರೆ ಇದು ಪರಿಪೂರ್ಣ ಗೆಲುವೇನೂ ಆಗಿರಲಿಲ್ಲ. ಅಲ್ಲಿ ಮಲೇಶ್ಯದ ಲ್ಯೂ ಡರೆನ್‌ ಪಂದ್ಯದ ನಡುವೆ ಗಾಯಾಳಾಗಿ ನಿವೃತ್ತರಾಗಿದ್ದರು. 
2014ರ ಮಲೇಶ್ಯ ಮಾಸ್ಟರ್ ಮತ್ತು 2016ರ ಬಿಟ್‌ಬರ್ಗರ್‌ ಓಪನ್‌ ಕೂಟದ ಫೈನಲ್‌ಗ‌ಳಲ್ಲಿ ಸೌರಭ್‌ ಸೋಲನುಭವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next