Advertisement

ಸದ್ದು ಮಾಡೀರಿ ಜೋಕೆ!

06:45 AM Dec 22, 2017 | Harsha Rao |

“ಇದು ಕನ್ನಡ ಸಿನಿಮಾ ಅಂತಾನೇ ಅನಿಸುವುದಿಲ್ಲ. ಸಿನಿಮಾ ನೋಡ್ತಾ ಇದ್ದರೆ, ಹಾಲಿವುಡ್‌ ಸಿನಿಮಾ ನೋಡಿದ ಫೀಲ್‌ ಆಗುತ್ತೆ …’

Advertisement

ಅರುಣ್‌ ಅವರ ಆತ್ಮವಿಶ್ವಾಸ ಸ್ವಲ್ಪ ಓವರ್‌ ಆಯಿತು ಅಂತನಿಸಬಹುದು. ಆದರೂ ಅರುಣ್‌ ತಮ್ಮ ಮೊದಲ ಚಿತ್ರದ ಬಗ್ಗೆ ಸಖತ್‌ ವಿಶ್ವಾಸದಿಂದ ಇದ್ದಾರೆ. “ಸದ್ದು’ ಚಿತ್ರವು ಪ್ರೇಕ್ಷಕರ ವಲಯದಲ್ಲಿ ಸದ್ದು ಮಾಡುವುದಷ್ಟೇ ಅಲ್ಲ, ಚಿತ್ರವು ಹಾಲಿವುಡ್‌ ಶೈಲಿಯಲ್ಲಿ ಮೂಡಿಬಂದಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜನ ತಮ್ಮ ಮಾತು ನಂಬದಿರಬಹುದು ಎಂಬ ಕಾರಣಕ್ಕೆ ಒಂದು ಟ್ರೇಲರ್‌ ಕಟ್‌ ಮಾಡಿ ಬಿಡುಗಡೆ ಮಾಡಿದ್ದಾರೆ. ಆ ಟ್ರೇಲರ್‌ ಬಿಡುಗಡೆ ಮಾಡುವ ಸಂದರ್ಭದಲ್ಲೇ ಅರುಣ್‌ ತಮ್ಮ ಚಿತ್ರದ ಬಗ್ಗೆ ವಿಶ್ವಾಸದಿಂದ ಮಾತನಾಡಿದ್ದಾರೆ.

ಅಂದು “ಸದ್ದು’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವುದಷ್ಟೇ ಅಲ್ಲ, ಚಿತ್ರದ ಬಗ್ಗೆ ಮಾತನಾಡುವುದಕ್ಕೆ ತಮ್ಮ ತಂಡದವರೊಂದಿಗೆ ಬಂದಿದ್ದರು. ಹೆಸರು, ಡಿಸೈನ್‌ ಮತ್ತು ಟ್ರೇಲರ್‌ ನೋಡುತ್ತಿದ್ದರೆ, ಇದೊಂದು ಹಾರರ್‌ ಚಿತ್ರ ಎಂದನಿಸಬಹುದು. ಆದರೆ, ಇದು ಹಾರರ್‌ ಚಿತ್ರವಲ್ಲ, ಆ್ಯಕ್ಷನ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಎನ್ನುತ್ತಾರೆ ಅವರು. “ಕಾಡುಪ್ರಾಣಿಗಳ ಕುರಿತ ಸಿನಿಮಾಗಳು ಬಂದಿವೆ. ಹಾಗಾಗಿ ಪ್ರಾಣಿಗಳನ್ನು ಉಳಿಸಿ, ಕಾಡನ್ನು ಸಂರಕ್ಷಿಸಿ, ಪರಿಸರವನ್ನು ಹಾಳು ಮಾಡಬೇಡಿ ಎಂಬ ವಿಷಯವನ್ನಿಟ್ಟುಕೊಂಡು ಥ್ರಿಲ್ಲರ್‌ ಚಿತ್ರವನ್ನು ಮಾಡಿದ್ದೇವೆ. ಚಿತ್ರದಲ್ಲಿ ನಿಖೀತಾ ಸ್ವಾಮಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಬಹಳ ಧೈರ್ಯ ಅವರಿಗೆ. ಅವರಿಗಿಂಥ ಅವರಮ್ಮಂಗೆ ಧೈರ್ಯ ಜಾಸ್ತಿ. ಟ್ರೇಲರ್‌ನಲ್ಲಿ ನಿಖೀತಾ ಅಭಿನಯದ ಒಂದು ದೃಶ್ಯ ನೋಡಿದ್ರಲ್ಲಾ? ಆ ದೃಶ್ಯವನ್ನು ಹೇಗೆ ಮಾಡೋದು ಅಂತ ನಮಗೇ ಭಯ ಇತ್ತು. ಆದರೆ, ಅವರಮ್ಮನೇ,

“ನನ್ನ ಮಗಳಿಗೆ ಏನೂ ಆಗಲ್ಲ’ ಅಂತ ಧೈರ್ಯ ತುಂಬುತಿದ್ದರು’ ಎಂದು ನೆನಪಿಸಿಕೊಂಡರು ಅರುಣ್‌. ಈಗಾಗಲೇ ಅವರು ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಜನವರಿ ಮೂರನೆಯ ವಾರದಲ್ಲಿ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ.

ಈ ಚಿತ್ರದ ನಿರ್ಮಾಪಕರ ಹೆಸರು ಕೃಷ್ಣಚೈತನ್ಯ. ಅವರು ನಿರ್ದೇಶಕರು ಜಿಮ್‌ ಸ್ನೇಹಿತರು. ಒಮ್ಮೆ ಕೃಷ್ಣಚೈತನ್ಯ ಜಿಮ್‌ಗೆ ಹೋಗಿದ್ದಾಗ ನಿರ್ದೇಶಕರ ಪರಿಚಯವಾಯಿತಂತೆ. ಅಲ್ಲಿ ಚಿತ್ರ ಮಾಡುವ ಐಡಿಯಾ ಹೊಳೆದಿದೆ. “ನಾನೇನೂ ದೊಡ್ಡ ನಿರ್ಮಾಪಕನಲ್ಲ. ಒಂದು ಇನ್ಶೂರೆನ್ಸ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿತ್ರ ಮಾಡುವುದಕ್ಕೆ ಮುಂದೆ ಬಂದಿರೋದು, ನಿರ್ದೇಶಕರು ಹೇಳಿದ ಕಾನ್ಸೆಪ್ಟ್ನಿಂದ. ಅವರ ಪರಿಕಲ್ಪನೆ ಬಹಳ ಚೆನ್ನಾಗಿತ್ತು. ಅದೇ ಕಾರಣಕ್ಕೆ ನಿರ್ಮಾಣ ಮಾಡಿದೆ.

Advertisement

ತುಂಬಾ ಸರ್‌ಪ್ರೈಸ್‌ಗಳಿರುವ ಸಿನಿಮಾ ಇದು. ಮನರಂಜನೆ, ಎಮೋಷನ್‌ ಜೊತೆಗೆ ಒಂದು ಸಂದೇಶ ಸಹ ಇದೆ. ಎಲ್ಲಾ ಕಮರ್ಷಿಯಲ್‌ ಅಂಶಗಳಿರುವ ಚಿತ್ರ ಇದು. ಸರಿಯಾಗಿ ಹೇಳಬೇಕೆಂದರೆ, ಇದೊಂದು ಪೈಸಾ ವಸೂಲ್‌ ಸಿನಿಮಾ’ ಎನ್ನುತ್ತಾರೆ ಅವರು. ಚಿತ್ರದಲ್ಲಿ ನಿಖೀತಾ ಸ್ವಾಮಿ, ಭರತ್‌, ಭಾಗ್ಯ, ಹರೀಶ್‌, ಆನಂದ್‌, ವಿಷ್ಣು, ಆಶ್ರಿತ ಮುಂತಾದವರು ನಟಿಸಿದ್ದಾರೆ. ವೈಭವ್‌ ಭಟ್‌ ಎನ್ನುವವರು ಸಂಗೀತ ಸಂಯೋಜಿಸಿದರೆ, ವೀರೇಶ್‌ ಛಾಯಾಗ್ರಹಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next