Advertisement

ಆತ್ಮ ದರ್ಶನ : ಇಣುಕಿ ನೋಡುವುದು !

08:54 PM Apr 27, 2019 | mahesh |

ಇಣುಕುವುದು’ ಎಂಬ ಪದದಲ್ಲಿಯೇ ಕುತೂಹಲದ ಭಾವವಿದೆ. ಪ್ರಕೃತಿಯಲ್ಲಿ ಒಂದು ದೃಶ್ಯವನ್ನು ನೋಡಿರುತ್ತೀರಿ. ಅದೇನೂ ವಿಶೇಷ ಅನ್ನಿಸುವುದಿಲ್ಲ. ಆದರೆ, ಅದನ್ನು ಕೆಮರಾ ಕಣ್ಣಿನ ಮೂಲಕ “ಇಣುಕಿದರೆ’ ಅದ್ಭುತ ಅನ್ನಿಸುತ್ತದೆ. ಫೊಟೊ ನೋಡುವುದು ಕೂಡ ಒಂದು ಬಗೆಯ ಇಣುಕುನೋಟವೇ.

Advertisement

ಇಣುಕುವುದೆಂದರೆ ಒಂದು “ಚೌಕಟ್ಟಿನೊಳಗೆ’ ದೃಶ್ಯವನ್ನು ನೋಡುವುದು. ಚೌಕಟ್ಟು ಎಂಬುದು ಭೌತಿಕವಾದುದೂ ಹೌದು, ನೈತಿಕವಾದುದೂ ಹೌದು. ಸ್ನಾನದ ಮನೆಯ ಕಿಟಕಿಯ ಮೂಲಕ ನೋಡುವುದು ಅಸಾಧ್ಯ. ನೋಡುವುದಿದ್ದರೆ ಬಾಗಿಲಿನ ರಂಧ್ರದ ಮೂಲಕ ನೋಡಬೇಕು- ಅದು ಭೌತಿಕವಾದ ಚೌಕಟ್ಟು. ಹಾಗೆ, ನೋಡಬಾರದು ಎಂಬ ನಿಯಮವಿದೆಯಲ್ಲ- ನೈತಿಕವಾದ ಚೌಕಟ್ಟು !

“ಪೀಪಿಂಗ್‌ ಟಾಮ್‌’ ಎಂಬುದು ಕದ್ದು ನೋಡುವ ಕಾಮುಕರನ್ನು ಕರೆಯಲು ಬಳಸುವ ಪರಿಭಾಷೆ. ಅದನ್ನು ವ್ಯಂಗ್ಯಾರ್ಥಕ್ಕೆ ಬಳಸುವುದೂ ಇದೆ. ಈ ಪರಿಭಾಷೆ ವಾಡಿಕೆ ಬಂದ ಬಗ್ಗೆ ಒಂದು ಕತೆಯಿದೆ. ಗಾಡಿವಾ ಎಂಬವಳು ಇಂಗ್ಲೆಂಡ್‌ನ‌ ದೇವತೆ. ಮೂಲತಃ ಆಕೆ ಸಿರಿವಂತೆಯಾದ ಒಬ್ಟಾಕೆ ಮಹಿಳೆ. ಯಾವುದೋ ಪ್ರಾಯಶ್ಚಿತ್ತಕ್ಕಾಗಿ ಪೂರ್ಣ ನಗ್ನಳಾಗಿ, ತಲೆಗೂದಲನ್ನು ವಸ್ತ್ರದಂತೆ ಮುಚ್ಚಿಕೊಂಡು ಬೀದಿಯಲ್ಲಿ ಕುದುರೆಯ ಮೇಲೆ ಸಾಗುತ್ತಿದ್ದಳು. ಆ ದೃಶ್ಯವನ್ನು ನೋಡುವುದು ನಿಷಿದ್ಧವಿತ್ತು. ಆದರೆ, ಥಾಮಸ್‌ ಎಂಬವನು ನಿಯಮ ಮುರಿದ. “ಇಣುಕಿ’ ನೋಡಿದ. ಅವನ ದೃಷ್ಟಿಗಳು ಹೋದವು. ಆ ಬಳಿಕ “ಪೀಪಿಂಗ್‌ ಟಾಮ್‌’ ಪದಪುಂಜ ಜನಪ್ರಿಯವಾಯಿತಂತೆ.

ಬಾಗಿಲಿನ ರಂಧ್ರದೊಳಗೆ ಕಣ್ಣು ತೂರಿಸಿ ನೋಡಬಹುದು, ಮನಸ್ಸಿನೊಳಗೆ ಇಣುಕಿನೋಡುವುದು ಅಷ್ಟು ಸುಲಭವೆ?
ಶ್ರೀರಾಮ ವಸಿಷ್ಠರನ್ನು ನೋಡಲು ಆಶ್ರಮಕ್ಕೆ ಹೋಗುತ್ತಾನೆ. ನೋಡಿದ ಬಳಿಕ ಮರಳಲು ಅನುವಾಗುತ್ತಾನೆ. “ನೋಡಿದೆಯಾ?’ ಎಂದು ಕೇಳುತ್ತಾರೆ ವಸಿಷ್ಠರು. “ನೋಡಿದೆ, ಗುರುಗಳೇ’ ಎನ್ನುತ್ತಾನೆ.

“ಸಾಲದು, ಒಳಗೆ ಇಣುಕಿ ನೋಡು’ ಎನ್ನುತ್ತಾರೆ. ಅವರು, ಆತ್ಮದರ್ಶನದ ಕುರಿತೇ ಹೇಳುತ್ತಿದ್ದಾರೆ ಎಂದು ರಾಮನಿಗೆ ಅರಿವಾಗುತ್ತದೆ. ಆತ ಗುರುಗಳ ಮುಂದೆ ಬಾಗಿ ನಿಲ್ಲುತ್ತಾನೆ. ಗುರುಗಳು ಅವನಿಗೆ ಯೋಗರಹಸ್ಯವನ್ನು ಬೋಧಿಸಿದರು ಎಂಬುದು ಕತೆ.

Advertisement

“ಆತ್ಮದರ್ಶನ’ ಎಂಬುದು ಬಹಳ ಗಂಭೀರವಾದ ಪದ. “ಒಳಗೆ ಇಣುಕುವುದು’ ಎಂದರೆ ಸರಳವಾಗಿ ಅರ್ಥವಾಗಿಬಿಡುತ್ತದೆ.
ಒಳಗೆ ಇಣುಕಬೇಕಾದರೆ ಕಣ್ಣುಗಳನ್ನು ಒಳಮುಖಿಯಾಗಿಸಬೇಕು, ಅಂದರೆ ಮುಚ್ಚಿಕೊಳ್ಳಬೇಕು. ತೆರೆದರೆ ಹೊರಗಿನದ್ದು ತೋರುತ್ತದೆ, ಮುಚ್ಚಿದರೆ ಒಳಗಿನದ್ದು ಕಾಣಿಸುತ್ತದೆ. ದೇವರ ಗರ್ಭಗುಡಿಯ ಮುಂದೆ ನಿಂತು ಒಳಗೆ ಇಣುಕುವುದಲ್ಲ, ಕಣ್ಣು ಮುಚ್ಚಿ ತನ್ನೊಳಗನ್ನು ಇಣುಕಬೇಕು ಎಂಬುದು ನಿಜವಾದ ಸಂ-ದರ್ಶನ.

ಯಾವುದನ್ನಾದರೂ ಹೇಗೆ ನೋಡುತ್ತೀರಿ ಎಂಬುದು ಮುಖ್ಯ. ಚೆಂದವೆಂದು ಭಾವಿಸಿ ನೋಡಿದರೆ ಚೆಂದವೇ, ರುಚಿಯೆಂದು ಗ್ರಹಿಸಿ ಸೇವಿಸಿದರೆ ರುಚಿಯೇ, ಆನಂದಕರವೆಂದು ತಿಳಿದು ಆಲಿಸಿದರೆ ಆನಂದಕರವೇ.
ಸುಮ್ಮನೆ ಕುತೂಹಲದಲ್ಲಿ ಕೇಳಿಕೊಳ್ಳಿ : ಛಾವಣಿಯಲ್ಲಿ ಬೆನ್ನು ಕೆಳಗೆ ಮಾಡಿ ನಡೆಯುತ್ತಿರುವ ಹಲ್ಲಿಗೆ ಈ ಜಗತ್ತು ಹೇಗೆ ಕಂಡೀತು? ಮರದಲ್ಲಿ ತಲೆಕೆಳಗಾಗಿ ತೂಗುತ್ತಿರುವ ಬಾವಲಿಗೆ ಈ ಜಗತ್ತು ಹೇಗೆ ತೋರಿತು? ಎತ್ತರದ ಮರದ ಮೇಲೆ ಹತ್ತಿ ಸುತ್ತಮುತ್ತಲನ್ನು ನೋಡಿದರೆ ಬೇರೆಯೇ ಆಗಿ ಕಾಣಿಸುವುದಿಲ್ಲವೆ?

ವಿಮಾನದಲ್ಲಿ ಹೋದಾಗ ಕಿಟಕಿಯಿಂದ ಇಣುಕಿದರೆ ಕೆಳಗಿರುವುದು ನಮ್ಮದೇ ಊರಾದರೂ ಬೇರೆಯೇ ಆಗಿ ಕಾಣಿಸುತ್ತದೆ. ಹೀಗೆ ಬೇರೆಯಾಗಿ ನೋಡುವುದೊಂದು ನಿರ್ಮೋಹದ ಸ್ಥಿತಿ. “ನಾನೇ ಕಟ್ಟಿದ ದೊಡ್ಡ ಮನೆ’ ಎಂದು ಅಭಿಮಾನದಲ್ಲಿ ನೀವು ಹೇಳುವಿರಾದರೆ ಎತ್ತರದಿಂದ ನೋಡಿದರೆ ಅದು ಒಂದು ಬೆಂಕಿಪೊಟ್ಟಣದಷ್ಟು ದೊಡ್ಡ ವಸ್ತು ಮಾತ್ರ.

ಎತ್ತರ ಎತ್ತರ ಹೋದಂತೆ ನನ್ನ ಮನೆ, ನನ್ನ ಬೀದಿ, ನನ್ನ ಊರು ಎಲ್ಲವೂ ಅಣುಗಳಾಗಿ ಹೋಗುತ್ತಿದ್ದರೆ, “ನಾನು’ ಏನು? ಅಂದರೆ, ಇಡೀ ಜೀವಜಾಲದಲ್ಲಿ ನನ್ನ ಸ್ಥಾನವೇನು? ಇರುವೆ, ಹುಳ, ಹಕ್ಕಿ, ಮೀನು, ಮೊಲ, ಸಿಂಹ ಮುಂತಾದ ಜೀವಿಗಳಂತೆಯೇ ಮನುಷ್ಯನೂ ಒಂದು ಜೀವಿ. ಇರುವೆ ಹುಟ್ಟುತ್ತದೆ, ಸಾಯುತ್ತದೆ. ಅದರ ಬಗ್ಗೆ ಮನುಷ್ಯ ತಲೆಕೆಡಿಸಿಕೊಳ್ಳುತ್ತಾನೆಯೆ? ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ; ಅದರ ಬಗ್ಗೆ ಇರುವೆ ಚಿಂತಿಸುತ್ತದೆಯೆ?
ಜಗತ್ತನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುವುದನ್ನು ನಾವೀಗ ಮರೆತೇ
ಬಿಟ್ಟಿದ್ದೇವೆ. ಏಕೆಂದರೆ, ಕಣ್ಣುಗಳನ್ನು ಮೊಬೈಲ್‌ ಮೇಲೆಯೇ ನೆಟ್ಟಿದ್ದೇವೆ !

ಗಾರ್ಗಿ

Advertisement

Udayavani is now on Telegram. Click here to join our channel and stay updated with the latest news.

Next