ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಕುರಿತ ಸಿಬಿಐ ತನಿಖೆಯ ಕಾರ್ಯವೈಖರಿಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸಿಬಿಐ ತನಿಖೆಯೂ ಅನುಮಾನಸ್ಪದವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಮರುತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸೌಜನ್ಯ ತಂದೆ ಚಂದ್ರಪ್ಪ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾ.ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠ, ಪ್ರಕರಣಕ್ಕೆ ನ್ಯಾಯ ಒದಗಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ನ್ಯಾಯಾಲಯವೇ ವಿಶೇಷ ತನಿಖಾ ತಂಡ ರಚಿಸಲಿದೆ ಎಂದು ಸಿಬಿಐಗೆ ಮೌಖೀಕ ಎಚ್ಚರಿಕೆ ನೀಡಿತು.
ವಿಚಾರಣೆ ವೇಳೆ ಚಂದ್ರಪ್ಪಗೌಡ ಪರ ವಕೀಲರು ವಾದಿಸಿ, ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೊದಲು ತನಿಖೆ ನಡೆಸಿದ್ದ ಬೆಳ್ತಂಗಡಿ ಠಾಣೆ ಪೊಲೀಸರು, ಪ್ರಕರಣಕ್ಕೆ ಅಗತ್ಯವಿದ್ದ ಹರೀಶ್ ಹಾಗೂ ಗೋಪಾಲ್ ಎಂಬುವವರ ಹೇಳಿಕೆ ದಾಖಲಿಸಿಕೊಂಡಿದ್ದರು. ಅದಾದ ಬಳಿಕ ಸಿಐಡಿ ತನಿಖೆ ನಡೆಸಿತ್ತು. ನಂತರ ಸಿಬಿಐ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಹರೀಶ್ ಹಾಗೂ ಗೋಪಾಲ್ ಅವರ ಹೇಳಿಕೆಗಳನ್ನು ಕೈಬಿಟ್ಟು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಿಂದ ಪ್ರಕರಣದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಸಿಬಿಐಗೆ ತನಿಖೆಗೆ ಒಪ್ಪಿಸಲಾಗಿದೆ. ಆದರೆ, ಸಿಬಿಐ ತನಿಖೆಯೂ ಸಾಕಷ್ಟು ಅನುಮಾನ ಮೂಡಿಸುವಂತಿದೆ. ನಿಸ್ಪಕ್ಷಪಾತ, ಪ್ರಕರಣಕ್ಕೆ ನ್ಯಾಯ ಒದಗಿಸಲು ನಿಮ್ಮಿಂದ ಆಗದಿದ್ದರೆ ನ್ಯಾಯಾಲಯವೇ ಎಸ್‌ಐಟಿ ರಚನೆ ಮಾಡುತ್ತದೆ ಎಂದು ಸಿಬಿಐಗೆ ಎಚ್ಚರಿಕೆ ನೀಡಿತು.
ನಂತರ ಅರ್ಜಿದಾರರು ಆಕ್ಷೇಪಿಸಿರುವಂತೆ ಯಾವ ಕಾರಣದಿಂದ ಇಬ್ಬರು ಸಾಕ್ಷಿಗಳನ್ನು ಆರೋಪಪಟ್ಟಿಯಿಂದ ಕೈ ಬಿಡಲಾಯಿತು ಎಂಬುದನ್ನು ತನಿಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಸಿಬಿಐ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಿತು.
ಪ್ರಕರಣ ಏನು?
ಉಜಿರೆ ಎಸ್‌ಡಿಎಂ ಕಾಲೇಜಿನ ದ್ವೀತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಮೃತದೇಹ 2012ರ ಅ. 9ರಂದು ಅವರ ಮನೆಯ ಸ್ವಲ್ಪ ದೂರದಲ್ಲಿಯೇ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿತ್ತು. ಈ ಸಂಬಂಧ ಆರಂಭದಲ್ಲಿ ತನಿಖೆ ನಡೆಸಿದ್ದ ಬೆಳ್ತಂಗಡಿ ಠಾಣೆ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿತ್ತು. ನಂತರ ಸಿಬಿಐಗೆ ವಹಿಸಲಾಯಿತು. ತನಿಖೆ ಪೂರ್ಣಗೊಳಿಸಿದ್ದ ಸಿಬಿಐ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.