Advertisement

ಕೆಎಫ್‌ಡಿ ಮುಂಜಾಗ್ರತೆಗೆ ಆಗ್ರಹ

01:24 PM Mar 19, 2020 | Naveen |

ಸೊರಬ: ಕೊರೊನಾ ಹಾಗೂ ಮಂಗನ ಕಾಯಿಲೆ ಹರಡಿದ್ದು ಸಾರ್ವಜನಿಕರ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂಬ ಒಕ್ಕೂರಲಿನ ಧ್ವನಿ ಎಲ್ಲ ಸದಸ್ಯರಿಂದ ತಾಪಂ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿತು.

Advertisement

ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಸುನೀಲ್‌ ಗೌಡ ತಾಲೂಕಿನಲ್ಲಿ ಕೆಎಫ್‌ಡಿ ಸೋಂಕಿನಿಂದ ಕೊಡಂಬಿ ಗ್ರಾಮದ ವ್ಯಕ್ತಿ ಬಳಲುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದಾಗ ಸಭೆಯಲ್ಲಿದ್ದ ತಹಶೀಲ್ದಾರ್‌ ಪಟ್ಟರಾಜ ಗೌಡ ಪ್ರತಿಕ್ರಿಯಿಸಿ, ಕೆಎಫ್‌ಡಿ ಸೋಂಕಿಗೆ ಒಳಗಾದ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಸಿದ್ದಾಪುರ ತಹಶೀಲ್ದಾರ್‌ ಹಾಗೂ ವೈದ್ಯರ ಜೊತೆ ಸಂಪರ್ಕದಲ್ಲಿದ್ದು, ರೋಗಿಯು ಎರಡು ಬಾರಿ ಕೆಎಫ್‌ಡಿ ಸೋಂಕಿನ ಚುಚ್ಚುಮದ್ದು ಹಾಕಿಸಿಕೊಂಡಿರುವುದರಿಂದ ಚೇತರಿಕೆಯಲ್ಲಿದ್ದಾರೆ. ಈ ಬಗ್ಗೆ ಕಾರವಾರ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು ಸೋಂಕಿಗೆ ಒಳಗಾದ ವ್ಯಕ್ತಿಯ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಯ ಜನರಿಗೆ ವ್ಯಾಕ್ಸಿನ್‌ ಹಾಕಲು ಸೂಚಿಸಲಾಗಿದೆ ಎಂದರು.

ತಾಲೂಕಿನಲ್ಲಿ ಇದುವರೆಗೂ 17 ಮಂಗಗಳು ಸತ್ತಿದ್ದು 3 ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ಅವುಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮಂಗಗಳ ಉಣ್ಣೆಯನ್ನು ಸಂಗ್ರಹಿಸಿಸಲು ತಂಡ ರಚನೆ ಮಾಡಲಾಗಿದೆ. ಅಲ್ಲದೇ ಈ ಹಿಂದೆ ಕೊಡಂಬಿ ಗ್ರಾಮದಲ್ಲಿ ವ್ಯಾಕ್ಸಿನ್‌ ಮಾಡಲಾಗಿದ್ದು, ಜನರು ಸರಿಯಾಗಿ ಸ್ಪಂದನೆ ಮಾಡಿಲ್ಲ. ಕೇವಲ 38 ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.

ಪುನಃ ಈ ತಿಂಗಳ 20ರಂದು ಆ ವ್ಯಾಪ್ತಿಯಲ್ಲಿ ಮತ್ತೆ ವ್ಯಾಕ್ಸಿನ್‌ ಹಾಕಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಅಕ್ಷತಾ ಖಾನಾಪುರ ಮಾಹಿತಿ ನೀಡಿದರು.

ದೇಶ, ವಿದೇಶ, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರತಿಯೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಆರೋಗ್ಯ ಇಲಾಖೆಗೆ ನೀಡಬೇಕು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸದಾಗಿ ಬಂದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಧ್ಯಕ್ಷೆ ನಯನಾ ಹೆಗಡೆ ತಾಲೂಕು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಚಂದ್ರಗುತ್ತಿ ರೇಣುಕಾಂಬಾ ದೇವಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಆಗಮಿಸಿ ಪ್ರಾಣಿ ವಧೆ ಮಾಡಿ ಗುಂಪು ಗುಂಪಾಗಿ ಊಟ ಮಾಡುತ್ತಿದ್ದಾರೆ. ಇದರಿಂದ ಕೊರಾನಾ ವೈರಸ್‌ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನ ಹರಿಸಬೇಕಿದೆ ಎಂದು ಸದಸ್ಯ ಎನ್‌.ಜಿ.ನಾಗರಾಜ್‌ ಸಭೆಯ ಗಮನಕ್ಕೆ ತಂದಾಗ ಈಗಾಗಲೇ ಪೊಲೀಸ್‌ ಹಾಗೂ ಗ್ರಾಪಂ ಸಿಬ್ಬಂದಿ ನಿಯೋಜಿಸಲಾಗಿದೆ. ಯಾರೂ ಪ್ರಾಣಿವಧೆ ಮಾಡಬಾರದು ಮತ್ತು ಗುಂಪಾಗಿ ಸೇರಬಾರದು ಮತ್ತು ಈ ರೀತಿಯ ಸಂದಂರ್ಭದಲ್ಲಿ ರಾಣೆಬೆನ್ನೂರು, ಹಾವೇರಿ, ಹಿರೇಕೆರೂರು ಸೇರಿದಂತೆ ಆ ಭಾಗದ ಭಕ್ತರು ಆಗಮಿಸದಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು. ತಾಪಂ ಉಪಾಧ್ಯಕ್ಷ ಸುರೇಶ್‌ ಹಾವಣ್ಣನವರ್‌, ಇಒ ನಂದಿನಿ, ತಹಶೀಲ್ದಾರ್‌ ಪಟ್ಟರಾಜ ಗೌಡ, ಸಿಪಿಐ ಮರಳು ಸಿದ್ದಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next