Advertisement

ಭಾರತೀಯರಿಂದ ಸಂಸ್ಕೃತಿ ಪುನರುತ್ಥಾನ

03:37 PM Apr 05, 2019 | Naveen |

ಸೊರಬ: ಸರ್ವಧರ್ಮವನ್ನು ಪ್ರೀತಿಸುವ ಮನೋಭಾವ ಭಾರತೀಯರಲ್ಲಿರುವುದರಿಂದ ಸಂಸ್ಕೃತಿ- ಸಂಸ್ಕಾರ ಮತ್ತು ಮೌಲ್ಯಗಳ ಪುನರುತ್ಥಾನ ಮತ್ತೆ ಮತ್ತೆ ನೆಲೆಗೊಳ್ಳುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಶಾಂತಪುರ ಗ್ರಾಮದ ಹಿರೇಮಠದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ 17ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮದ ಹೆಸರಿನಲ್ಲಿ ಮೌಡ್ಯ ರಾರಾಜಿಸಬಾರದು. ಎಲ್ಲ ಧರ್ಮಗಳನ್ನು ಗೌರವಿಸುವ ಗುಣ ಭಾರತೀಯರಲ್ಲಿದೆ. ಆಧ್ಯಾತ್ಮದ ಅರಿವಿನ ಭಾವ ಶ್ರೀಮಂತಿಕೆ ಇದ್ದರೆ ಸನ್ಮಾರ್ಗದ ದಾರಿ ಅತ್ಯಂತ
ಸಮೀಪವಾಗುತ್ತದೆ. ಪ್ರಾಣ, ಯೌವ್ವನ ಮತ್ತು ಕಾಲ ಯಾರನ್ನೂ ಕಾಯುವುದಿಲ್ಲ. ಸ್ನೇಹ, ವಿದ್ಯೆ ಮತ್ತು ಸಂಬಂಧಗಳನ್ನು ಸಂಪಾದಿಸಿ ಬಾಳಿದರೆ ಜೀವನಕ್ಕೆ ಹೆಚ್ಚು ಮೌಲ್ಯ ಬರುತ್ತದೆ ಎಂದು ಪ್ರತಿಪಾದಿಸಿದರು.

ಉಸಿರು ಇರುವಾಗ ಹೆಸರು ಉಳಿಯುವ ಕೆಲಸ ಮಾಡಬೇಕು. ಧರ್ಮದ ದಶವಿಧ ಸೂತ್ರಗಳನ್ನು ಪರಿಪಾಲಿಸಿ ಜೀವನ ಸಾರ್ಥಕಪಡಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಕಾರ್ಯಗಳು ಸಿದ್ಧಿಸುತ್ತವೆ ಎಂದು
ಹಿರಿಯರು ಹೇಳಿರುವುದನ್ನು ಮರೆಯಬಾರದು ಎಂದ ಅವರು, ಶಾಂತಪುರ ಶಿವಾನಂದ ಶ್ರೀಗಳು ಕಳೆದ 17 ವರ್ಷಗಳಿಂದ ಜಾತ್ರಾ ಮಹೋತ್ಸವ ಹಾಗೂ ಜಗದ್ಗುರು ರೇಣುಕಾಚಾರ್ಯ ಜಯಂತಿ
ಯುಗಮಾನೋತ್ಸವ ಸಮಾರಂಭ ಸಂಘಟಿಸಿ ಮಾಡುತ್ತಿರುವ ಧಾರ್ಮಿಕ ಕಾರ್ಯಗಳು ಭಕ್ತ ಸಂಕುಲಕ್ಕೆ ಹರುಷ ತಂದಿದೆ ಎಂದರು.

ಮಳಲಿ ಸಂಸ್ಥಾನ ಮಠದ ಡಾ| ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಡಾ| ಮಹಾಂತ ಸ್ವಾಮೀಜಿ, ಹಾರನಹಳ್ಳಿ ರಾಮಲಿಂಗೇಶ್ವರ ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ಸ್ವಾಮೀಜಿ, ಮೂಲೆಗದ್ದೆಮಠದ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು ಪಾಲ್ಗೊಂಡು ವೀರಶೈವ ಧರ್ಮ ಸಂಸ್ಕೃತಿ ಮತ್ತು ಗುರು ಪರಂಪರೆಯ ಬಗ್ಗೆ ಮಾತನಾಡಿದರು. ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಂಘಟನೆ ಮತ್ತು ಸತ್ಕಾರ್ಯಗಳನ್ನು
ಹೆಚ್ಚು ಬೆಳೆಸಬೇಕಾಗಿದೆ. ಗುರುವಿನ ಅರಿವು ಆದರ್ಶದ ಬೋಧನೆ ಜೀವನ ಉನ್ನತಿಗೆ ಅವಶ್ಯಕ. ಶಾಂತಪುರ ಶ್ರೀಗಳ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

Advertisement

ಶಾಂತಪುರ ಹಿರೇಮಠದ ಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರು ಬಲ ಮತ್ತು ದೈವ ಬಲ ಒಂದಿದ್ದರೆ ಏನೆಲ್ಲ ಮಾಡಲು ಸಾಧ್ಯ ಎಂಬುದಕ್ಕೆ ಜಾತ್ರಾ ಮಹೋತ್ಸವ ಧರ್ಮ ಸಮಾರಂಭಗಳೇ ಸಾಕ್ಷಿ. ಮಲೆನಾಡಿನ ಭಕ್ತರ ಸಹಕಾರ ಮತ್ತು ಮಹಾ ಗುರುವಿನ ಕೃಪಾ ಕಟಾಕ್ಷ ಇಷ್ಟೆಲ್ಲ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆಯಿತ್ತು ಹಾರೈಸಿದರು. ಶಿರಗೋಡದ ಕಂಬಾಳಿಮಠ ಮತ್ತು ಕಾಳಂಗಿ ಭಜನಾ ಸಂಘ, ಅಗಸನಹಳ್ಳಿ ಕಲ್ಲೇಶ್ವರ ಭಜನಾ ಸಂಘದವರಿಂದ ಸಂಗೀತ ಜರುಗಿತು.
ಬಂಕವಳ್ಳಿ ವೀರೇಂದ್ರ ಪಾಟೀಲ್‌, ನಿವೃತ್ತ ಪ್ರಾಂಶುಪಾಲ ಪಂಚಾಕ್ಷರಯ್ಯ, ತಾಪಂ ಸದಸ್ಯೆ ಅಂಜಲಿ ಸಂಜೀವ್‌ ಲಕ್ಕವಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next