Advertisement

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಸಾರ್ವಜನಿಕರ ಪ್ರತಿಭಟನೆ

04:25 PM Oct 16, 2019 | Team Udayavani |

ಸೊರಬ: ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿಪಡಿಸಿ ಬಾಣಂತಿಯರಿಗೆ ಚಿಕಿತ್ಸೆಗೆ ಸಜ್ಜಾಗುವಂತೆ ಹಾಗೂ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ ವೈದ್ಯಾಧಿಕಾರಿಗಳು ಮಂಗಳವಾರ ಮಧ್ಯಾಹ್ನವಾದರೂ ಚಿಕಿತ್ಸೆಗೆ ಮುಂದಾಗದ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಬಾಣಂತಿಯರ
ಸಂಬಂಧಿ ಕರು ಮಂಗಳವಾರ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ
ನಡೆಸಿದರು.

Advertisement

ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 15ಕ್ಕೂ ಅಧಿಕ ಬಾಣಂತಿಯರು ಸಂತಾನ ನಿಯಂತ್ರಣ ಚಿಕಿತ್ಸೆಗೆ ಹಾಜರಾಗಿದ್ದರು. ಬಾಣಂತಿಯರಿಗೆ ಒಂದು ದಿನದ ಮೊದಲು ಬಿಪಿ, ಶುಗರ್‌ ತಪಾಸಣೆ ನಡೆಸಿ ಚಿಕಿತ್ಸೆಗೆ ಹಾಜರಾಗುವಂತೆ ಪೂರ್ವಭಾವಿ ಚಿಕಿತ್ಸೆ ನೀಡಿ ಉಪವಾಸ ಇರುವಂತೆ ವೈದ್ಯರು ಸೂಚಿಸಿದ್ದರು. ವೈದ್ಯರ ಸಲಹೆ ಮೇರೆಗೆ ಬಾಣಂತಿಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿದ್ದರಾಗಿ ಬಂದಿದ್ದರು. ಆದರೆ ಬೆಳಗ್ಗೆಯಿಂದ ವೈದ್ಯರ ಸುಳಿವೇ ಇರಲಿಲ್ಲ. ಈ ಬಗ್ಗೆ ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ವೈದ್ಯರನ್ನು ಹುಡುಕಿದರೂ ಯಾವ ವೈದ್ಯರೂ ಸಿಗಲಿಲ್ಲ. ವೈದ್ಯರು ಆಗ ಬರುತ್ತಾರೆ, ಈಗ ಬರುತ್ತಾರೆ ಎಂದು ಕಾದು ಕುಳಿತ ಬಾಣಂತಿಯರು ಮಧ್ಯಾಹ್ನದ ವೇಳೆ ನಿತ್ರಾಣಗೊಂಡ ಬಳಿಕ ಸಂಬಂಧಿ ಕರು ತಾಳ್ಮೆ ಕಳೆದುಕೊಂಡು ವೈದ್ಯರ ವಿರುದ್ಧ ಪ್ರತಿಭಟನೆಗೆ ಮುಂದಾದರು. ಅಲ್ಲದೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ತಾಲೂಕು ಕೇಂದ್ರದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಲವಾರು ವರ್ಷದಿಂದ ದೊರೆಯುತ್ತಿಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೂ ನೆರೆಯ ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಿಕೊಡುವುದು ಇಲ್ಲಿ ವಾಡಿಕೆ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮೌಲಾಲಿ ಸಾಬ್‌ ಜಂಗಿನಕೊಪ್ಪ, ಗಣಪತಿ ಹೆಸರಿ, ಗಾಯತ್ರಮ್ಮ, ಲಕ್ಷ್ಮೀ, ಸ್ವಾತಿ, ಸುಮಾ, ನಿರ್ಮಲಾ, ಮಂಜುನಾಥ್‌, ಮೇಘರಾಜ, ಶಿವಕುಮಾರ, ಗಿರಿಯಪ್ಪ ಹುಲ್ತಿಕೊಪ್ಪ, ಕಿರಣ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next