Advertisement

ಶಾಶ್ವತ ನೀರಾವರಿ ಯೋಜನೆ ಅಗತ್ಯ

07:55 PM Nov 09, 2019 | Naveen |

ಸೊರಬ: ಶಾಶ್ವತ ನೀರಾವರಿ ಕಲ್ಪಿಸುವ ಮೂಲಕ ಕೃಷಿಗೆ ಆದ್ಯತೆ ನೀಡಿ ಯುವಕರಿಗೆ ಉದ್ಯೋಗ ಸೃಷ್ಟಿಸಿದಲ್ಲಿ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಸಾಧ್ಯ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

Advertisement

ಪಟ್ಟಣದ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಳೆಹಾನಿಗೆ ಒಳಗಾದ ಕೆರೆ, ಕಾಲುವೆ, ಒಡ್ಡುಗಳ ಫೋಟೋಗಳನ್ನು ಪ್ರೊಜೆಕ್ಟರ್‌ನಲ್ಲಿ ವೀಕ್ಷಿಸಿ ನಂತರ ಅವರು ಮಾತನಾಡಿದರು.

ಪ್ರತಿ ತಾಲೂಕಿನಲ್ಲಿ ಶಾಶ್ವತ ನೀರಾವರಿ ಕಲ್ಪಿಸಿದಲ್ಲಿ ರೈತರ ಹಾಗೂ ಗ್ರಾಮೀಣರ ಬದುಕು ಗಟ್ಟಿಗೊಳ್ಳುತ್ತದೆ. ವೈವಿಧ್ಯಮಯ ಕೃಷಿಯನ್ನು ಹಮ್ಮಿಕೊಂಡು ಆರ್ಥಿಕ ಸ್ವಾವಲಂಬನೆ ಹೊಂದಲು ಅನುಕೂಲವಾಗುತ್ತದೆ.

ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಜತೆಗೆ ಅಂತರ್ಜಲ ಅಭಿವೃದ್ಧಿ ಮಾಡುವ ಚಿಂತನೆ ಮಾಡಿದ್ದೇವೆ. ಜನರು ಕೂಡ ನೀರಿನ ಮಿತ ಬಳಕೆಗೆ ಮುಂದಾಗಬೇಕು. ಏತ ನೀರಾವರಿ ಯೋಜನೆಗಳಿಂದ ಬೋರ್‌ವೆಲ್‌ ಗಳು ರೀಚಾರ್ಜ್‌ ಆಗಲು ಅನುಕೂಲವಾಗುತ್ತದೆ. ಪಂಪ್‌ಸೆಟ್‌ಗಳಿಗೆ ಸೋಲಾರ್‌ ಪವರ್‌ ಕೊಡುವ ಚಿಂತನೆ ಮಾಡಿದ್ದೇವೆ. 7 ಸಾವಿರ ಕೋಟಿ ಹಣವನ್ನು ಮಳೆಹಾನಿಗೆ ಬಳಸಬೇಕಾಗಿದ್ದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು.

ಈ ವರ್ಷ 800 ಟಿ.ಎಂ.ಸಿ. ನೀರು ರಾಜ್ಯದಿಂದ ಹೊರ ಹೋಗಿದೆ. ಈ ನೀರನ್ನು ಮುಂದಿನ ದಿನಗಳಲ್ಲಿ ಹೊರ ಹೋಗದಂತೆ ತಡೆಯುವ ಶಾಶ್ವತ ಯೋಜನೆಗಳನ್ನು ರೂಪಿಸುವ ಚಿಂತೆ ನಡೆದಿದೆ. 454 ಕೋಟಿ ಹಣವನ್ನು ಮಳೆ ಹಾನಿ ದುರಸ್ತಿಗೆ ಮೀಸಲಿಟ್ಟಿದ್ದು ಅದಕ್ಕೆ ಇನ್ನಷ್ಟು ದುರಸ್ತಿ ಕಾಮಗಾರಿಗಳನ್ನು ಸೇರಿಸಬೇಕಿದೆ. ಮಾನವ ಹಾಗೂ ಪ್ರಕೃತಿ ನಿರ್ಮಿತ ಪ್ರವಾಹಗಳಿದ್ದು, ಮನುಷ್ಯನ ದುರಾಸೆಯಿಂದ ಭೂಮಿ ಕಬಳಿಕೆಯಾಗಿ ಕಟ್ಟಡ, ರಸ್ತೆ ನಿರ್ಮಿಸಿ ನೀರು ಇಂಗದಂತೆ ಮಾಡಿದ್ದರಿಂದ ಮಹಾನಗರಗಳಲ್ಲಿ ಪ್ರವಾಹವಾಗುತ್ತಿದೆ.

Advertisement

ಬೆಂಗಳೂರಿನಲ್ಲಿ 106 ಕೆರೆಗಳು ನಮ್ಮ ವ್ಯಾಪ್ತಿಯಲ್ಲಿದ್ದು ಅವುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಹೊಸಕೋಟೆ ಹಾಗೂ ಕೋಲಾರದಲ್ಲಿ ಹರಿದು ಹೋಗುವ ನೀರನ್ನು 36 ಕೆರೆಗಳಿಗೆ ತುಂಬಿಸುವ ಯೋಜನೆ ರೂಪಿಸಿದ್ದೇವೆ. ಕೊಳಚೆ ನೀರನ್ನು ನಿಲ್ಲಿಸಿ ಅಂತರ್ಜಲ ವೃದ್ಧಿಸುವ ಚಿಂತನೆ ಮಾಡಲಾಗುತ್ತಿದೆ ಎಂದರು.

ಶಾಸಕ ಕುಮಾರ್‌ ಬಂಗಾರಪ್ಪ ಮಾತನಾಡಿ, ತಾಲೂಕಿನಲ್ಲಿ 46 ಬ್ಯಾರೇಜ್‌ ಗಳನ್ನು ಇದುವರೆಗೂ ನಿರ್ಮಿಸಲಾಗಿದೆ. ಮೂಡಿ, ಮುಗೂರು ಏತ ನೀರಾವರಿ ಯೋಜನೆಗಳ ಕಾಮಗಾರಿಗೆ ಟೆಂಡರ್‌ ಮಾಡಲಾಗಿದ್ದು ಮುಖ್ಯಮಂತ್ರಿಗಳು ಸದ್ಯದಲ್ಲಿ ಅಡಿಗಲ್ಲು ಹಾಕಲಿದ್ದಾರೆ ಎಂದರು.

ತಹಶೀಲ್ದಾರ್‌ ಪಟ್ಟರಾಜ ಗೌಡ, ಇಒ ನಂದಿನಿ, ಸಾಗರ ಇಒ ಮಂಜುನಾಥಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ರವೀಂದ್ರಪ್ಪ, ಪುರುಷೋತ್ತಮ್‌, ಪಪಂ ಸದಸ್ಯರಾದ ಎಂ.ಡಿ. ಉಮೇಶ್‌, ಈರೇಶ್‌ ಮೇಸ್ತ್ರಿ, ಪ್ರಭು ಮತ್ತಿತರ ಅಧಿಕಾರಿಗಳಿದ್ದರು.

ಸಭೆಗೂ ಮೊದಲು ಸಚಿವರು ಮೂಗೂರು, ಮೂಡಿ, ಗೋಂದಿ ಬ್ಯಾರೇಜ್‌ಗಳನ್ನು ವೀಕ್ಷಿಸಿ, ನ್ಯಾಯಾಲಯ ಹಾಗೂ ಪಕ್ಷದ ಕಚೇರಿಗೆ ಭೇಟಿ ನೀಡಿ, ನಂತರ ರಂಗಮಂದಿರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next