Advertisement

ಮಂಡಕ್ಕಿ ಭಟ್ಟಿಯಲ್ಲಿ ಸಮಸ್ಯೆಗಳ ಸರಮಾಲೆ!

01:33 PM Sep 07, 2019 | Naveen |

•ಎಚ್.ಕೆ.ಬಿ. ಸ್ವಾಮಿ
ಸೊರಬ:
ಸಾರ್ವಜನಿಕರಿಗೆ ಶುದ್ಧ ನೀರು, ಸಮರ್ಪಕ ಶೌಚಗೃಹ, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಸೇರಿ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ಆದರೆ, ಇಲ್ಲಿನ 11ನೇ ವಾರ್ಡ್‌ನ ಡಾ| ಬಿ.ಆರ್‌. ಅಂಬೇಡ್ಕರ್‌ ಬಡಾವಣೆಯ ಮಂಡಕ್ಕಿ ಬಟ್ಟಿ ಏರಿಯಾ (ಹಳೇ ಗೌರಿ ಶಂಕರ ಮಿಲ್ ಹಿಂಭಾಗ) ಒಂದು ಸುತ್ತು ಹಾಕಿದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಗೋಚರಿಸುತ್ತದೆ.

Advertisement

800 ಮತದಾರರಿರುವ ವಾರ್ಡ್‌ನಲ್ಲಿ ಸುಮಾರು 200 ಮಂದಿ ಇದೇ ಕೊಳಚೆ ಪ್ರದೇಶದಲ್ಲಿಯೇ ಅನೇಕ ಮೂಲ ಸೌಕರ್ಯಗಳ ಕೊರತೆ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಗಾರೆ ಕೆಲಸಗಾರರು, ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರು, ಕೂಲಿ ಕಾರ್ಮಿಕರೇ ವಾಸವಾಗಿರುವ ವಾರ್ಡ್‌ನಲ್ಲಿ ಈವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪಟ್ಟಣ ಪಂಚಾಯತ್‌ಗೆ ಸಾಧ್ಯವೇ ಆಗಿಲ್ಲ.

ಸರಾಗವಾಗಿ ಹರಿಯದ ಕೊಳಚೆ ನೀರು: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ನಿಂತಲ್ಲೇ ನಿಂತಿದೆ. ಹೀಗಾಗಿ ಇಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಜನತೆಗೆ ಸಾಂಕ್ರಾಮಿಕ ರೋಗಗಳ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಮಳೆ ಬಂತೆಂದರೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಪಟ್ಟಣ ಪ್ರದೇಶದಲ್ಲಿ ಯಾವುದೇ ಸೌಲಭ್ಯಗಳಲ್ಲಿದೇ ಆದಿವಾಸಿಗಳಂತೆ ಜನತೆ ಜೀವನ ಸಾಗಿಸುತ್ತಿದ್ದಾರೆ ಎಂದರೆ ನಿಜಕ್ಕೂ ವಿಪರ್ಯಾಸದ ಸಂಗತಿ.

ಬಯಲು ಶೌಚವೇ ಗತಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಇಲ್ಲಿ ಎಳ್ಳಷ್ಟೂ ಜಾರಿಯಾಗಿಲ್ಲ. ಸುಮಾರು 68 ಮನೆಗಳಿರುವ ವಾರ್ಡ್‌ನಲ್ಲಿ ಕೆಲವರು ಸ್ವಂತ ಖರ್ಚಿನಲ್ಲಿ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ಉಳಿದಂತೆ ಬಹುತೇಕರಿಗೆ ಬಯಲು ಶೌಚವೇ ಗತಿಯಾಗಿದೆ. ಕೇವಲ ಪ್ರಚಾರಕ್ಕಾಗಿ ಮಾತ್ರ ಅಭಿಯಾನ ಕೈಗೊಳ್ಳಲಾಗಿದೆಯೇ ಎಂಬ ಆರೋಪ ಸಾರ್ವಜನಿಕರದ್ದು, ಇಲ್ಲಿನ ನಿವಾಸಿಗಳಿಗೆ ಶೌಚಗೃಹ ನಿರ್ಮಿಸಿಕೊಳ್ಳಲು ತಾಂತ್ರಿಕ ಸಮಸ್ಯೆಗಳಿದ್ದರೆ, ಸಮುದಾಯ ಶೌಚಗೃಹವನ್ನಾದರೂ ಕಲ್ಪಿಸಬಹುದಾಗಿತ್ತು.

ನಿವೇಶನದ ಮಾಲೀಕತ್ವಕ್ಕಾಗಿ ಕಸರತ್ತು: ಬಹುತೇಕ ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಹಿಂದುಳಿದ ಸಮು ದಾಯದವರೇ ಹೆಚ್ಚಿರುವ ಇಲ್ಲಿನ ಪ್ರದೇಶದಲ್ಲಿ ಜನತೆ ನಿವೇಶನದ ಮಾಲೀಕತ್ವಕ್ಕಾಗಿ ಕಳೆದ ಮೂರು ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸುತ್ತಲೂ ಖಾಸಗಿ ಮಾಲೀಕತ್ವದ ಭೂಮಿ ಇದೆ. ಪಶ್ಚಿಮ ಭಾಗಕ್ಕೆ ಗೌರಿ ಶಂಕರ ಮಿಲ್ನವರು ಕಾಂಪೌಂಡ್‌ ಹಾಕಿದ್ದಾರೆ. ಪೂರ್ವ, ದಕ್ಷಿಣ ಮತ್ತು ಉತ್ತರ ಭಾಗಕ್ಕೆ ಖಾಸಗಿಯವರ ಭೂಮಿ ಇದ್ದು, ಇಲ್ಲಿನ ಜನತೆಗೆ ರಸ್ತೆ ಸಂಪರ್ಕವೂ ಇಲ್ಲ ಎಂಬುದು ಸೋಜಿಗದ ಸಂಗತಿ ಎನ್ನಬಹದು.

Advertisement

ನ್ಯಾಯಾಲಯದ ಮೊರೆ: ನಿವೇಶನದ ಮಾಲೀಕತ್ವ ದೊರೆತರೆ ಸರ್ಕಾರದಿಂದ ಸೌಲಭ್ಯ ಪಡೆಯಬಹುದು. ಭವಿಷ್ಯಕ್ಕೊಂದು ಭದ್ರ ಬುನಾದಿ ಹಾಕಿಕೊಳ್ಳಬಹುದು. ಸ್ವಂತಕ್ಕೊಂದು ಸೂರು ಕಲ್ಪಿಸಿಕೊಳ್ಳಬಹುದು ಎಂಬ ಉದ್ದೇಶ ಇಲ್ಲಿನ ನಿವಾಸಿಗಳದ್ದಾಗಿದೆ.

ಮತ್ತೂಂದಡೆ ಇಲ್ಲಿನ ನಿವೇಶನದ ಮೂಲ ಮಾಲೀಕರ ಬಗ್ಗೆ ಕೆಲ ಗೊಂದಲವಿದೆ ಎನ್ನಲಾಗುತ್ತಿದ್ದು, ಒಂದಡೆ ಗೌರಿ ಶಂಕರ ಮಿಲ್ನವರು ತಮಗೆ ಸೇರಿದ್ದೆಂದು, ಮತ್ತೂಂದೆಡೆ ಮಠವೊಂದರ ಆಸ್ತಿ, ಪಪಂ ದಾಖಲೆಗಳು ಮತ್ತು ಕಂದಾಯ ಇಲಾಖೆಯ ಸರ್ವೆ ಇಲಾಖೆಯ ದಾಖಲೆಗಳು ಹೊಂದಾಣಿಕೆಯಾಗುತ್ತಿಲ್ಲ. ಇವೆಲ್ಲದರ ನಡುವೆ ಹಿರೇಶಕುನ ಕೆರೆಯ ಕೋಡಿ ಜಾಗವೂ ಇದೇ ಪ್ರದೇಶದಲ್ಲಿ ಹಾದು ಹೋಗಿದೆ. ನಿವೇಶನದ ಕುರಿತು ಇರುವ ಸಮಸ್ಯೆಗಳ ತೊಡಕನ್ನು ನಿವಾರಿಸಿಕೊಡುವಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಚುನಾವಣೆಯ ಸರಕು..
ಸ್ಥಳೀಯ ಸಂಸ್ಥೆ ಚುನಾವಣೆಯಿಂದ ವಿಧಾನಸಭೆ, ಲೋಕಸಭೆ ಚುನಾವಣೆಗಳು ನಡೆದಾಗ ಇಲ್ಲಿನ ಜನರಿಗೆ ನಿವೇಶನ ಮಾಲೀಕತ್ವ ದೊರಕಿಸಿ ಕೊಡುವ ಭರವಸೆ ರಾಜಕೀಯ ಮುಖಂಡರಿಂದ ದೊರೆಯುತ್ತಿದೆ ವಿನಃ, ಕಾರ್ಯರೂಪಕ್ಕೆ ಬಂದಿಲ್ಲ. ಕೇವಲ ಮತಗಳಿಗೆ ಮಾತ್ರ ಇಲ್ಲಿನ ಜನತೆಯನ್ನು ಚುನಾವಣಾ ಸರಕುಗಳ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇವರ ಪರವಾಗಿ ಧ್ವನಿ ಎತ್ತಲು ಯಾವುದೇ ಮುಖಂಡರು ಮುಂದಾಗಿಲ್ಲ ಎಂಬ ಆರೋಪ ಸಹ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next