Advertisement

ಜಡೆ ಮಠದಿಂದ ಪ್ರವಾಹ ಸಂತ್ರಸ್ತರಿಗೆ ಸಾಂತ್ವನ

04:18 PM Aug 17, 2019 | Naveen |

ಸೊರಬ: ನಾಡಿನಲ್ಲಿ ಮೌನ ತಪಸ್ವಿಗಳು ಎಂದು ಖ್ಯಾತ ನಾಮರಾದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಗುರುದೇವ ಸೇವಾ ಸಂಸ್ಥೆ ವತಿಯಿಂದ ಹೊಸಕೊಪ್ಪ, ಬಂಕಸಾಣ, ಜಡೆ ಮುಂತಾದ ನೆರೆ ಸಂತ್ರಸ್ತರ ಕೇಂದ್ರಕ್ಕೆ ಗುರು ಬಂಧುಗಳು ಭೇಟಿ ನೀಡಿ ದಿನನಿತ್ಯದ ಚಾಪೆ, ಅಕ್ಕಿ, ಬಟ್ಟೆ ಮುಂತಾದ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಿ ಸಾಂತ್ವನ ಹೇಳಿದರು.

Advertisement

ಈ ಸಂದರ್ಭದಲ್ಲಿ ಜಡೆ ಹಿರೇಮಠದ ಷ.ಬ್ರ. ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗುರುದೇವ ಸೇವಾ ಸಂಸ್ಥೆ ಪರರ ಸಂಕಷ್ಟಕ್ಕೆ ಸದಾ ಸ್ಪಂದಿಸುತ್ತದೆ. ಇದು ಗುರುಗಳ ಆಶೀರ್ವಾದ. ಕೊಡುವ ವಸ್ತು ಸಣ್ಣದಿರಬಹುದು. ಆದರೆ ಕೊಡುವುದರ ಹಿಂದಿನ ಭಾವ ಅಮೂಲ್ಯವಾದದ್ದು. ನಾವೂ ಸಹ ನಿಮ್ಮ ಕಷ್ಟದಲ್ಲಿ ಭಾಗಿಯಾಗುವುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದರು.

ಹವಾಮಾನ ವೈಪರೀತ್ಯವೇ ಪ್ರಕೃತಿ ವಿಕೋಪಕ್ಕೆ ಕಾರಣವಾಗಿದೆ. ಹಿಂದಿನ ಕಾಲದಲ್ಲಿ ಮಳೆಯು ಈ ಭೂಮಿಯ ಅಗತ್ಯಕ್ಕನುಸಾರವಾಗಿ ಸುರಿಯುತ್ತಿತ್ತು. ಒಮ್ಮೆಲೇ ಸುರಿಯುತ್ತಿರಲಿಲ್ಲ. ಹಾಗಾಗಿ ಎಲ್ಲಾ ಕಡೆ ಸಮತೋಲನದಿಂದ ಮಳೆ ಬರುತಿತ್ತು. ಪ್ರಕೃತಿಯ ಈ ಸಮತೋಲನಕ್ಕೆ ಮರಗಳು ಬಹು ಪ್ರಧಾನ ಪಾತ್ರವನ್ನು ವಹಿಸುತ್ತಿದ್ದವು. ಆಯಾ ಪ್ರಾಂತ್ಯದ ಅಗತ್ಯಕ್ಕನುಸಾರವಾಗಿ ಮರಗಳು ಮೋಡವನ್ನು ಆಕರ್ಷಿಸಿ ಮಳೆ ಸುರಿಯುವಿಕೆಗೆ ಕಾರಣವಾಗುತ್ತಿದ್ದವು. ಆದರೆ ಇಂದು ಮರಗಳ ಕಡಿಯುವಿಕೆಯಿಂದ ನಿಸರ್ಗ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಇಂಥಹ ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಿದರು.

ಇನ್ನಾದರೂ ಮನುಷ್ಯ ನಿಸರ್ಗದ ರಕ್ಷಣೆಗೆ ಮುಂದಾಗಬೇಕು. ಗ್ರಾಮದ ವನ, ಜೊತೆಗೆ ಕೆರೆ, ರಸ್ತೆ, ಗ್ರಾಮಠಾಣಾಗಳಲ್ಲಿ ಮರಗಳ ಬೆಳೆಸುವಿಕೆಗೆ ಗ್ರಾಮ ಸಮಿತಿಯನ್ನು ಮಾಡಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಜಿಪಂ ಸದಸ್ಯ ಶಿವಲಿಂಗೇಗೌಡ, ಪಪಂ ಸದಸ್ಯ ನಟರಾಜ ಉಪ್ಪಿನ, ಮಲ್ಲನಗೌಡ್ರು ಕೋಟೆ, ಗಂಗಾಧರ ಚಗಟೂರು, ಮಲ್ಲಿಕಾರ್ಜುನ ಸಾಲಿಗೆ, ವೀರೇಶ ತುಮರಿಕೊಪ್ಪ, ನಿಜಗುಣ ಚಂದ್ರಶೇಖರ್‌, ಮಂಜಣ್ಣ ಹೊಸಕೊಪ್ಪ, ಡಾ| ವಿರೂಪಾಕ್ಷಪ್ಪ, ಗ್ರಾಮ ಸೇವಕಿ ಭಾರತಿ ಪಾಟೀಲ್, ಕೋಟೆ ಕಾನಳ್ಳಿ ಮಠದ ರುದ್ರಸ್ವಾಮಿ, ಶಿವಕುಮಾರಸ್ವಾಮಿ, ಅಶೋಕ ಪಾಟೀಲ್ ಸಾಲಿಗೆ ಹಾಗೂ ಸೊರಬ ಟೌನ್‌ ವೀರಶೈವ ಸಮಾಜ ಸಮಿತಿ, ಜಡೆ ಗ್ರಾಮದ ಯುವ ವೇದಿಕೆ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next