Advertisement

ಅಕ್ರಮ ಮರಳು ಸಂಗ್ರಹ; ಅಧಿಕಾರಿಗಳ ಮೌನ

11:50 AM Jun 14, 2019 | Naveen |

ಸೊರಬ: ತಾಲೂಕಿನ ಐತಿಹಾಸಿಕ ಕ್ಷೇತ್ರ ಚಂದ್ರಗುತ್ತಿ ಸಮೀಪದ ವರದಾ ನದಿ ಪಾತ್ರದ ಅಂಕರವಳ್ಳಿ, ಹೊಳೆಜೋಳದಗುಡ್ಡೆ, ಗುಂಜನೂರು ಸಮೀಪ ಅಕ್ರಮವಾಗಿ ಮರಳು ಸಂಗ್ರಹ ಮತ್ತು ಸಾಗಾಟ ನಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

Advertisement

ಸರ್ಕಾರದ ಪರವಾನಗಿ ಇಲ್ಲ.. ಜಿಲ್ಲೆಯಲ್ಲಿ ಈಗಾಗಲೇ ಅಕ್ರಮ ಮರಳು ಗಣಿಗಾರಿಕೆ ಕುರಿತು ಜಿಲ್ಲಾಡಳಿತ ಎಚ್ಚೆತ್ತು ಹಲವು ಯೋಜನೆಗಳನ್ನು ರೂಪಿಸುವ ಜೊತೆಗೆ ಮರಳು ನೀತಿಯನ್ನು ಶಿಸ್ತುಬದ್ಧವಾಗಿ ಜಾರಿಗೆ ತರಲು ಯತ್ನಿಸುತ್ತಿದೆ. ಆದರೆ, ತಾಲೂಕಿನಲ್ಲಿ ಮಾತ್ರ ಇದ್ಯಾವುದರ ಪರಿವೇ ಇಲ್ಲದಂತೆ ನದಿ ಪಾತ್ರದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗುತ್ತಿದೆ. ಸರ್ಕಾರದಿಂದ ಯಾವುದೇ ಟೆಂಡರ್‌ ಆಗದೇ, ಸ್ಥಳೀಯವಾಗಿ ಹಲವರು ಮರಳು ಸಾಗಣೆಯನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಮರಳನ್ನು ಪಟ್ಟಣ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಪಾಸ್‌ ಇಲ್ಲ ಪರ್ಮಿಟ್ಟೂ ಇಲ್ಲ: ಮರಳು ಸಾಗಾಟ ಮತ್ತು ಸಂಗ್ರಹ ಮಾಡಲು ಕೆಲ ನಿರ್ಬಂಧಗಳಿವೆ. ಸ್ಟಾಕ್‌ ಯಾರ್ಡ್‌ ನಿರ್ಮಾಣ, ಸಿಸಿ ಟಿವಿ ಅಳವಡಿಕೆ ಸೇರಿ ಸರ್ಕಾರಕ್ಕೆ ರಾಜಧನ ಸಲ್ಲಿಸಬೇಕು. ಮರಳು ಸಾಗಿಸುವ ವಾಹನಗಳು ಜಿಪಿಆರ್‌ಎಸ್‌ ಹೊಂದಿರಬೇಕು. ಆದರೆ, ವರದಾ ನದಿ ಪಾತ್ರದಿಂದ ಸಾಗಾಟ ಮಾಡುತ್ತಿರುವ ಮರಳು ಸಾಗಿಸುವ ವಾಹನಗಳು ಯಾವುದೇ ಪಾಸ್‌ ಹಾಗೂ ಪರ್ಮಿಟ್ ಹೊಂದಿಲ್ಲ. ಇದರಿಂದ ಸರ್ಕಾರಕ್ಕೆ ಯಾವುದೇ ರಾಜಧನವೂ ಸಂದಾಯವಾಗುತ್ತಿಲ್ಲ. ಜೊತೆಗೆ ಸರ್ಕಾರಕ್ಕೂ ನಷ್ಟವಾಗುತ್ತಿದೆ. ಇದೆಲ್ಲದರ ಅರಿವಿದ್ದರೂ ಅಧಿಕಾರಿ ವರ್ಗದವರು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ನದಿ ಪಾತ್ರಕ್ಕೆ ಧಕ್ಕೆ: ಪರವಾನಗಿ ಪಡೆದ ಮರಳು ಸಾಗಾಟದಾರರಿಗೆ ನದಿಯಲ್ಲಿ ಯಂತ್ರಗಳನ್ನು ಬಳಸಲು ಅನುಮತಿ ನೀಡುವುದಿಲ್ಲ. ಆದರೆ, ಗುಂಜನೂರು ಸಮೀಪದಲ್ಲಿ ಯಂತ್ರಗಳನ್ನು ಬಳಸಿ ಮರಳು ಸಂಗ್ರಹಿಸಲಾಗುತ್ತಿದೆ. ಇದರಿಂದ ಪರಿಸರಕ್ಕೂ ಧಕ್ಕೆಯಾಗುತ್ತಿದೆ. ನದಿಯಲ್ಲಿ ಆಳವಾದ ಕಂದಕಗಳು ನಿರ್ಮಾಣವಾಗುತ್ತಿವೆೆ. ಇದರಿಂದ ನದಿಯ ಹರಿವಿಗೂ ತೊಂದರೆಯಾಗಲಿದೆ. ಅಳಿದುಳಿದ ನೀರು ಸಹ ಕಲುಷಿತವಾಗುತ್ತಿದೆ. ಪರಿಸರ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ಗಮನ ಹರಿಸಿಲ್ಲ. ನದಿ ಪಾತ್ರಕ್ಕೆ ಆಗುತ್ತಿರುವ ಧಕ್ಕೆಯನ್ನು ತಡೆಗಟ್ಟಲು ಯಾವುದೇ ಅಧಿಕಾರಿಗಳು ಮುಂದಾಗಿಲ್ಲ ಎನ್ನುತ್ತಾರೆ ಪರಿಸರ ಪ್ರೇಮಿಗಳು. ತಾಲೂಕಿನ ವರದಾ ನದಿ ತಡದಲ್ಲಿರುವ ಮರಳು ಮರಳೇ ಅಲ್ಲ. ಮಣ್ಣು ಮಿಶ್ರಿತ ಮರಳು. ಇದು ಕಟ್ಟಡ ನಿರ್ಮಿಸಲು ಯೋಗ್ಯವಲ್ಲ ಎನ್ನುವ ಸರ್ಟಿಫಿಕೇಟ್ನ್ನು ಶಾಸಕ ಕುಮಾರ್‌ ಬಂಗಾರಪ್ಪ ತಂದಿದ್ದಾರೆ. ಆದರೂ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಸಾಗಾಟ. ಸರ್ಟಿಫಿಕೇಟ್ ತಂದವರು ಸುಮ್ಮನೆ ಕಣ್ಮುಚ್ಚಿ ಕುಳಿತ್ತಿದ್ದಾರೆ ಎನ್ನುವ ದೂರು ಕೇಳಿ ಬರುತ್ತಿದೆ.

ಸೊರಬ ತಾಲೂಕಿನ ವರದಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾಗುತ್ತಿದ್ದು, ಮರಳು ಸಾಗಿಸುವ ವಾಹನಗಳು ಮಾಸಿಕ ಸುಮಾರು 3 ಸಾವಿರ ರೂ. ಮಾಮೂಲಿ ನೀಡಬೇಕಂತೆ. ಇದೆಲ್ಲದರ ವಿರುದ್ಧ ಶೀಘ್ರದಲ್ಲಿ ರೂಪುರೇಷೆ ರೂಪಿಸಿಕೊಂಡು ನದಿ ಪಾತ್ರದಲ್ಲಿಯೇ ಪ್ರತಿಭಟನೆ ನಡೆಸಲಾಗುವುದು.
ಜೆ.ಎಸ್‌. ಚಿದಾನಂದ ಗೌಡ,
ಅಧ್ಯಕ್ಷ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ.

Advertisement

ವರದಾ ನದಿ ಪಾತ್ರದಿಂದ ಸಾಕಷ್ಟು ಮರಳು ಸಾಗಾಟ ನಡೆಯುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪರಿಸರಕ್ಕೂ ಸಾಕಷ್ಟು ಧಕ್ಕೆಯಾಗುತ್ತಿದೆ. ಸರ್ಕಾರಕ್ಕೆ ಸಲ್ಲಿಸುವ ರಾಜಧನವೂ ಸಂಗ್ರಹವಾಗುತ್ತಿಲ್ಲ. ಎಲ್ಲಡೆಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸ್ಥಳೀಯ ಪ್ರಭಾವಿ ಜನಪ್ರತಿನಿಧಿಯೊಬ್ಬರು ಇಲ್ಲಿನ ಮರಳನ್ನು ಮರಳೇ ಅಲ್ಲ, ಮಣ್ಣು ಮಿಶ್ರಿತ ಮರಳು ಎಂದು ಪ್ರಮಾಣ ಪತ್ರ ಕೊಡಿಸಿರುವುದು ದುರ್ದೈವ.
ಡಿ.ಕೆ. ವೀರಭದ್ರಪ್ಪ,
ಮಾಹಿತಿ ಹಕ್ಕು ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next