Advertisement

ಮೆಚ್ಚುಗೆಗೆ ಪಾತ್ರವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

01:10 PM Nov 07, 2019 | Naveen |

ಸೊರಬ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತಕ ಶೈಕ್ಷಣಿಕ ಸಾಲಿನಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆಗೆ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪೋಷಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Advertisement

ಪ್ರಸಕ್ತ ಸಾಲಿನಲ್ಲಿ 1032 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಹೊಸದಾಗಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂ ವಿಭಾಗವನ್ನು ಪ್ರಾರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ 56ಕ್ಕೆ ಏರಿರುವುದು ಗಮನಾರ್ಹ.

ಕಾಮಗಾರಿ ಕೈಗೊಳ್ಳದ ಗೃಹ ಮಂಡಳಿ: ಇತ್ತೀಚೆಗೆ ಸ್ಥಳೀಯ ಸಂಘಟನೆಯೊಂದು ಕಾಲೇಜಿನಲ್ಲಿ 3.37 ಕೋಟಿ ಅನುದಾನ ಬಳಕೆಯಾಗದೆ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಎಂದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತ್ತು.

ಆದರೆ, 2018-19ನೇ ಸಾಲಿನ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರ್ಕಾರದಿಂದ ಸುಮಾರು 250 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಸ್ಥಳೀಯ ಕಾಲೇಜಿಗೆ 3.37 ಕೋಟಿ ರೂ. ಅನುದಾನ ದೊರೆತಿದೆ. ಆದರೆ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದ ಕರ್ನಾಟಕ ಗೃಹ ಮಂಡಳಿ ಇದುವರೆಗೂ ಯಾವುದೇ ಕಾಮಗಾರಿ ಕೈಗೆತ್ತಿಕೊಂಡಿಲ್ಲ.

ಪ್ರತಿಭಟನಾಕಾರರಿಗೆ ಮಾಹಿತಿ ಕೊರತೆ: ಕಾಲೇಜಿನಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸುವಂತೆ ಕೋರಿ ಕ್ರಿಯಾ ಯೋಜನೆ ತಯಾರಿಸಿ, ಗೃಹ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಕಾಲೇಜಿಗೆ ಅನುಕೂಲವಾಗುವಂತೆ 3 ಬೋಧನಾ ಕೊಠಡಿ, 2 ಪ್ರಯೋಗಾಲಯ ಕೊಠಡಿ, ತಲಾ ಒಂದು ಶೌಚಗೃಹ, ಗ್ರಂಥಾಲಯ ಕಟ್ಟಡ, ಆಡಿಟೋರಿಯಂ ಹಾಗೂ ಕಾಲೇಜ್‌ ಕ್ಯಾಂಟೀನ್‌ ನಿರ್ಮಾಣ ಮಾಡುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದ್ದು, ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ. ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರಿಗೆ ಸಮರ್ಪಕ ಮಾಹಿತಿಯ ಕೊರತೆಯಿಂದ ಕಾಲೇಜಿಗೆ ಮಸಿ ಬಳಿಯುವ ಯತ್ನ ನಡೆಸಲಾಗಿದೆ ಎನ್ನುವ ಆರೋಪ ಪೋಷಕರಿಂದಲೇ ಕೇಳಿಬರುತ್ತಿದೆ.

ವಿದ್ಯಾರ್ಥಿಗಳಲ್ಲಿ ಶಿಸ್ತು: ಕಳೆದ ಎರಡ್ಮೂರು ವರ್ಷಗಳಿಂದ ಕಾಲೇಜಿನಲ್ಲಿ ಆಡಳಿತ ಯಂತ್ರ ಕುಸಿಯುವ ಹಂತಕ್ಕೆ ತಲುಪಿತ್ತು. ನಿತ್ಯ ಒಂದಿಲ್ಲೊಂದು ಗೊಂದಲಗಳು. ಅತಿಥಿ ಉಪನ್ಯಾಸಕರ ಪ್ರತಿಭಟನೆಗಳು, ತರಗತಿಗಳ ಬಹಿಷ್ಕಾರ ಹೀಗೆ ಹಲವು ರೀತಿಯ ಸಮಸ್ಯೆಗಳು ಕಾಲೇಜಿನಲ್ಲಿ ಕಾಡುವ ಜೊತೆಗೆ ಸಂಪೂರ್ಣವಾಗಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ವಿನಯ ಶೀಲತೆಯೇ ಮಾಸುವ ಹಂತಕ್ಕೆ ತಲುಪಿತ್ತು.

ಇತ್ತೀಚೆಗೆ ಕಾಲೇಜು ಶಿಕ್ಷಣ ಇಲಾಖೆ ಸೀಮಾ ಕೌಸರ್‌ ಎಂಬುವವರನ್ನು ಪ್ರಭಾರಿ ಪ್ರಾಂಶುಪಾಲರಾಗಿ ಆಯ್ಕೆ ಮಾಡಿದ ನಂತರ ಕಾಲೇಜಿನಲ್ಲಿ ಶಿಸ್ತು ಮತ್ತು ಗಾಂಭೀರ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದ್ದು, ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣವೂ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಕಾಲಕಾಲಕ್ಕೆ ಪೋಷಕರ ಸಭೆಗಳನ್ನು ನಡೆಸಿ, ವಿದ್ಯಾರ್ಥಿಗಳ ನಡುವಳಿಕೆಗಳ ಕುರಿತು ಪೋಷಕರ ಗಮನ ಸೆಳೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

ಸ್ಥಳೀಯ ಶಾಸಕ ಹಾಗೂ ಕಾಲೇಜ್‌ ಆಡಳಿತ ಮಂಡಳಿ ಅಧ್ಯಕ್ಷ ಕುಮಾರ್‌ ಬಂಗಾರಪ್ಪ ಅವರ ಸಹಕಾರದೊಂದಿಗೆ ಕಾಲೇಜಿಗೆ ಪೂರ್ಣಾವಧಿ ಪ್ರಾಧ್ಯಾಪಕರನ್ನು ನಿಯೋಜನೆ ಮಾಡುವ ಯತ್ನಗಳು ನಡೆಯುತ್ತಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರ ವಿರುದ್ಧ ಕೆಲವು ಕಾಣದ ಕೈಗಳು ಕಾಲೇಜಿನ ಒಳ ಮತ್ತು ಹೊರ ಭಾಗದಲ್ಲಿ ಷಡ್ಯಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಹಲವು ವಿದ್ಯಾರ್ಥಿಗಳು ಕುವೆಂಪು ವಿವಿಯಲ್ಲಿ ರ್‍ಯಾಂಕ್‌ ಗಳಿಸಿದ್ದಾರೆ.

ಪಾರದರ್ಶಕ ಆಡಳಿತ: ಕಾಲೇಜಿನಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂ ಧಿಸಿದಂತೆ ಸರ್ಕಾರದ ಸುತ್ತೋಲೆ ಮೇರೆಗೆ ಪ್ರಾಂಶುಪಾಲರು ಮತ್ತು ಹಿರಿಯ ಪ್ರಾಧ್ಯಾಪಕರೊಬ್ಬರ ಹೆಸರಿನಲ್ಲಿ ಜಂಟಿ ಖಾತೆಗಳನ್ನು ಬ್ಯಾಂಕ್‌ನಲ್ಲಿ ತೆರೆಯಲಾಗಿದೆ.

ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌ ಸೇರಿ ಸುಮಾರು 5 ಖಾತೆಗಳು ಚಾಲ್ತಿಯಲ್ಲಿದ್ದು, ಕಾಲೇಜು ಆಡಳಿತ ಮಂಡಳಿಯ ಒಪ್ಪಿಗೆ ಸೂಚಿಸಿದ ಮೇಲೆಯೇ ಪ್ರತಿ ಖಾತೆಯ ನಿರ್ವಹಣೆ ನಡೆಯುತ್ತಿದೆ. ಪೂರ್ಣ ಪ್ರಮಾಣದ ಪಾರದರ್ಶಕ ಆಡಳಿತ ನಡೆಯುತ್ತಿರುವುದಕ್ಕೆ ಇದೇ ಸಾಕ್ಷಿ. ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ಚಲನವಲನಗಳ ಮೇಲೆ ನಿಗಾ ಇಡಲು ಕಾಲೇಜ್‌ನಲ್ಲಿ ಕಲರ್‌ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುವುದು ಗಮನಾರ್ಹ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next