ಸೊರಬ: ರಾಜ್ಯದ ಬಹುತೇಕ ಜಲ ಮೂಲ ಭರ್ತಿಯಾಗಿರುವುದು ಒಂದೆಡೆ ಸಂತಸವಾದರೆ, ಮತ್ತೂಂದಡೆ ಅತಿವೃಷ್ಟಿಯಿಂದ ಅನೇಕ ಅನಾನುಕೂಲಗಳಾಗಿದ್ದು, ನೆರೆ ಹಾವಳಿಗೆ ತುತ್ತಾದ ನಿರಾಶ್ರಿತರಿಗೆ ಹಾಗೂ ರೈತರ ಹಿತ ಕಾಯಲು ಸದಾ ಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ಅಗಸನಹಳ್ಳಿ ಗ್ರಾಮದ ಗ್ರಾಪಂ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ ಹಾಗೂ ಸಂತ್ರಸ್ತರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳು ಧರೆಗೆ ಉರುಳಿವೆ. ಜನತೆ ಜೀವ ರಕ್ಷಣೆಗಾಗಿ ಮನೆಯಿಂದ ಹೊರ ಬಂದು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ ಸೇರಿ ವಿವಿಧೆಡೆ ನೆರೆ ಹಾವಳಿಯಿಂದ ಆಗಿರುವ ಅನಾನುಕೂಲಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ನೆರವಿನ ಹಸ್ತ ದೊರೆಯಲಿದೆ ಎಂದರು.
ನೀರಾವರಿಗೆ ಆದ್ಯತೆ: ತಾಲೂಕಿನ ಬಹು ನಿರೀಕ್ಷಿತ ಮೂಡಿ ಹಾಗೂ ಮೂಗೂರು ಏತ ನೀರಾವರಿ ಯೋಜನೆಗಳಿಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ. ಮೂಡಿ ಏತ ನೀರಾವರಿಗೆ 105 ಕೋಟಿ ರೂ. ಮೂಗೂರು ಏತ ನೀರಾವರಿಗೆ 275 ಕೋಟಿ ರೂ. ಅನುದಾನ ನೀಡಲಾಗುವುದು. ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದ ಅವರು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಸಮರ್ಪಕ ರಸಗೊಬ್ಬರ ವಿತರಣೆಗೆ ಸಿದ್ಧರಾಗಿದ್ದೇವೆ ರೈತರು ದೃತಿಗೆಡಬಾರದು. ಅತಿವೃಷ್ಟಿಯಿಂದ ಹಾನಿಯಾದ ಬೆಳೆಯ ಕುರಿತು ಸರ್ವೇ ಕಾರ್ಯ ನಡೆಸಿ, ವಾಸ್ತವಿಕ ಸ್ಥಿತಿ ಆಧಾರದ ಮೇಲೆ ಪರಿಹಾರ ನೀಡುವ ಭರವಸೆ ನೀಡಿದರು.
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ತಾಲೂಕಿನಲ್ಲಿ ನೆರೆಗೆ ಸಾಕಷ್ಟು ಹಾನಿಯಾಗಿದೆ. ದೇವರ ದಯೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದು ಸಂತಸದ ವಿಷಯ. ಆದರೆ, ನೆರೆ ಹಾನಿಯಿಂದ ನಷ್ಟಕ್ಕೆ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದರು.
ಇದಕ್ಕೂ ಮೊದಲು ಗೊಂದಿ ವರದಾ ನದಿ ಪ್ರವಾಹದಿಂದ ಉಂಟಾದ ಹಾನಿಯನ್ನು ಬಿಎಸ್‌ವೈ ವೀಕ್ಷಿಸಿದರು. ಪ್ರಕೃತಿ ವಿಕೋಪದಡಿ ಹಾನಿಯಾದ ವಾಸದ ಮನೆಗಳನ್ನು ಕಳೆದುಕೊಂಡ ಐದು ಮಂದಿ ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.
ಸಂಸದರಾದ ಬಿ.ವೈ. ರಾಘವೇಂದ್ರ, ಶಿವಕುಮಾರ ಉದಾಸಿ, ಶಾಸಕ ಸಿ.ಎಂ. ಉದಾಸಿ, ಎಪಿಎಂಸಿ ಅಧ್ಯಕ್ಷ ಕಾಸರಗುಪ್ಪೆ ಅಜ್ಜಪ್ಪ, ಗ್ರಾಪಂ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಎ.ಎಲ್. ಅರವಿಂದ, ಚಿಕ್ಕಾವಲಿ ನಾಗರಾಜ ಗೌಡ, ತಹಶೀಲ್ದಾರ್ ಪಟ್ಟರಾಜ ಗೌಡ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.