Advertisement

ಸೊರಬ: ಹರ್ಷ ಹತ್ಯೆ ಖಂಡಿಸಿ ಕರೆ ನೀಡಿದ್ದ ಬಂದ್ ಗೆ ಉತ್ತಮ ಪ್ರತಿಕ್ರಿಯೆ

07:27 PM Feb 23, 2022 | Suhan S |

ಸೊರಬ: ಶಿವಮೊಗ್ಗದಲ್ಲಿ ಬಜರಂಗದಳದ ಯುವ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆಗೈದಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಸ್ವಯಂಪ್ರೇರಿತ ಪಟ್ಟಣ ಬಂದ್‍ಗೆ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

Advertisement

ಬೆಳಗ್ಗೆಯಿಂದಲೇ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಬೆಂಬಲ ಸೂಚಿಸಿದರು. ಬಟ್ಟೆ, ಕಿರಾಣಿ, ಹಾರ್ಡ್‍ವೇರ್, ತರಕಾರಿ, ಹೊಟೇಲ್‍ಗಳು ಸೇರಿದಂತೆ ಮುಖ್ಯ ರಸ್ತೆ, ಸಾಗರ ರಸ್ತೆ, ಹೊಸಪೇಟೆ ಬಡಾವಣೆಯಲ್ಲಿ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು. ಆದರೆ, ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವು. ವಿವಿಧ ಹಿಂದೂ ಪರ ಸಂಘಟಕರು ಬೆಳಗ್ಗೆ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಜಮಾವಣೆಗೊಂಡು ಪ್ರತಿಭಟನಾ ಸಭೆ ನಡೆಸಿ, ಹರ್ಷ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ವ್ಯವಸ್ಥೆಯಲ್ಲಿ ಸಹಜ ಸ್ಥಿತಿ :

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಘಟಕರು ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡುವುದು ಬೇಡ ಎಂದು ತೀರ್ಮಾನ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಮತ್ತು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ. ಖಾಸಗಿ ಮತ್ತು ಸರ್ಕಾರಿ ಬಸ್‍ಗಳು ರಸ್ತೆಗೆ ಇಳಿದರೂ ಸಹ ಪ್ರಯಾಣಿಕರು ವಿರಳವಾಗಿದ್ದರು. ಪಟ್ಟಣ ಮುಖ್ಯ ರಸ್ತೆಯಲ್ಲಿ ಬಿಕೋ ಎನ್ನುವ ವಾತಾವರಣ ಸೃಷ್ಠಿಯಾಗಿತ್ತು.

Advertisement

ಪೊಲೀಸ್ ಬಂದೋ ಬಸ್ತ್ :

ಸಿಪಿಐ ಎಲ್. ರಾಜಶೇಖರ್, ಪಿಎಸ್‍ಐ ದೇವರಾಯ ಹಾಗೂ ಆನವಟ್ಟಿ ಪಿಎಸ್‍ಐ ರಾಜು ರೆಡ್ಡಿ ನೇತೃತ್ವದಲ್ಲಿ ಪಟ್ಟಣದ ಆಯ ಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಖಾಸಗಿ ಬಸ್ ನಿಲ್ದಾಣ ವೃತ್ತ, ಆಂಜನೇಯ ದೇವಸ್ಥಾನ ವೃತ್ತ, ಮಾರ್ಕೆಟ್ ರಸ್ತೆ, ಕಾನುಕೇರಿ, ಹೊಸಪೇಟೆ ಬಡಾವಣೆ ಹಾಗೂ ಶಾಲಾ-ಕಾಲೇಜುಗಳ ಸುತ್ತ ಪೊಲೀಸ್ ಭದ್ರತೆ ವಹಿಸಲಾಗಿತ್ತು. ಹಿಂದೂ ಪರ ಸಂಘಟನೆಯವರು ಜಮಾವಣೆಗೊಂಡ ಶ್ರೀ ರಂಗನಾಥ ದೇವಸ್ಥಾನದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಮೂಲಭೂತವಾದಿ ಜಿಹಾದಿಗಳು ದಾಳಿ ನಡೆಸುತ್ತಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು. ಹಿಂದೂ ಸಮಾಜ ಒಗ್ಗಾಟ್ಟಾಗಿದೆ ಎಂಬುದನ್ನು ತಿಳಿಸಲು ಬಂದ್‍ಗೆ ಕರೆ ನೀಡಲಾಗಿತ್ತು. ವರ್ತಕರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಬಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತೇವೆ. – ಎಂ.ಎಸ್. ಕಾಳಿಂಗರಾಜ್, ತಾಲೂಕು ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್

 ಹರ್ಷ ಅವರ ಹತ್ಯೆ ಕೇವಲ ವ್ಯಕ್ತಿಯ ಕೊಲೆಯಲ್ಲ. ವಿಚಾರದ ಹಾಗೂ ಹಿಂದುತ್ವದ ಹತ್ಯೆ ಎಂದು ಹಿಂದೂ ಸಮಾಜ ಭಾವಿಸಿದೆ. ರಾಜ್ಯದಲ್ಲಿ ಹಾಗೂ ಶಿವಮೊಗ್ಗದ ಸಂಪರ್ಕ ಇರುವಲ್ಲಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಪರ ಸಂಘಟನೆಗಳ ಶಕ್ತಿ ಮತ್ತು ಹಿಂದುತ್ವದ ಶಕ್ತಿ ಏನು ಎಂಬುದನ್ನು ತೋರಿಸಲಾಗಿದೆ. ಹಿಂದೂ ಸಮಾಜ ಒಗ್ಗಟ್ಟಾಗಬೇಕು. -ಪ್ರಕಾಶ್ ತಲಕಾಲಕೊಪ್ಪ, ತಾಲೂಕು ಅಧ್ಯಕ್ಷರು, ಬಿಜೆಪಿ.

Advertisement

Udayavani is now on Telegram. Click here to join our channel and stay updated with the latest news.

Next