ನಟ ಸೂರಜ್‌ಗೌಡ “ಸಿಲಿಕಾನ್ ಸಿಟಿ’ ಚಿತ್ರದ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಇತ್ತು. ಅವರು ಸುಮ್ಮನೆಯಂತೂ ಕುಂತಿಲ್ಲ. ಅವರ ಕೈಯಲ್ಲೀಗ ಮೂರು ಚಿತ್ರಗಳಿವೆ. ಹೌದು, ಸದ್ದಿಲ್ಲದೆಯೇ ಅವರೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಜೀವನ್ ಸಾಥಿ ಕಾಲೋನಿ’ ಎಂಬ ಹೆಸರಿಡಲಾಗಿದೆ. ಸುಮನ್ ಜಾದುಗಾರ್ ಆ ಚಿತ್ರದ ನಿರ್ದೇಶಕರು. ಅವರಿಗೆ ಅದು ಮೊದಲ ಸಿನಿಮಾ.
ಈ ಹಿಂದೆ “ಸಿಲಿಕಾನ್ ಸಿಟಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಮುಂಬೈ ಮೂಲದ ಸಂಜಯ್ ಬಾಲ್ ಚಿತ್ರದ ನಿರ್ಮಾಪಕರು. ಸದ್ಯಕ್ಕೆ ನಾಯಕಿ ಸೇರಿದಂತೆ ಇತರೆ ಕಲಾವಿದರ ಆಯ್ಕೆಯಾಗಿಲ್ಲ. ಸೂರಜ್‌ಗೌಡ ಆ ಚಿತ್ರಕ್ಕೆ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳಬೇಕಿರುವುದರಿಂದ ಚಿತ್ರ ಶುರುವಿಗೆ ಇನ್ನೂ ಸಮಯವಿದೆ. ನವೆಂಬರ್‌ನಲ್ಲಿ “ಜೀವನ್ ಸಾಥಿ ಕಾಲೋನಿ’ಗೆ ಚಾಲನೆ ಸಿಗಬಹುದು. ಇದೊಂದು ಲಿವಿಂಗ್ ಟು ಗೆದರ್ ರಿಲೇಷನ್‌ಶಿಪ್ ಕಥೆ ಹೊಂದಿದೆ.
ಇನ್ನು, ಸದ್ದಿಲ್ಲದೆಯೇ ಸೂರಜ್‌ಗೌಡ ಅವರು “ಸ್ನೇಹವೇ ಪ್ರೀತಿ’ ಎಂಬ ಚಿತ್ರದಲ್ಲೂ ನಟಿಸಿದ್ದಾರೆ. ಅದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗಿದ್ದು, ಇಷ್ಟರಲ್ಲೇ ಹಾಡುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಚಿತ್ರತಂಡ. ಈ ಚಿತ್ರವನ್ನು ಜಿಎಲ್‌ಬಿ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಅನಂತ ಲಕ್ಷ್ಮೀ ಕ್ರಿಯೇಷನ್ಸ್ ಪ್ರೊಡಕ್ಷನ್‌ನಲ್ಲಿ ಚಿತ್ರ ತಯಾರಾಗಿದೆ. ಸಾಧುಕೋಕಿಲ ಮತ್ತು ಚಿತ್ರಾ ಶೆಣೈ ಸೇರಿದಂತೆ ಹಲವರು ಇದ್ದಾರೆ.
“ಲಕ್ಷ್ಮೀತನಯ’ ಎಂಬ ಚಿತ್ರದಲ್ಲೂ ಸೂರಜ್‌ಗೌಡ ನಟಿಸುತ್ತಿದ್ದು, ಮುಹೂರ್ತ ಕೂಡ ನೆರವೇರಿದೆ. ಮೊದಲ ಬಾರಿಗೆ ಪಕ್ಕಾ ಆ್ಯಕ್ಷನ್ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳುತ್ತಾರೆ ಸೂರಜ್‌ಗೌಡ. “ಲಕ್ಷ್ಮೀತನಯ’ ಚಿತ್ರ ಮನರಂಜನೆಯ ಜೊತೆಗೆ ಒಂದು ಸಂದೇಶವನ್ನೂ ನೀಡುವಂತಹ ಚಿತ್ರವಾಗಿದ್ದು, ಮಾಸ್ ಆಡಿಯನ್ಸ್‌ಗೆ ಬೇಕಾದ ಎಲ್ಲಾ ಅಂಶಗಳೂ ಚಿತ್ರದಲ್ಲಿರಲಿವೆ. ವೆಂಕಟೇಶ್ ಬಾಬು ಚಿತ್ರದ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ವಿಜಯ್ ಸಾಹಸ ನಿರ್ದೇಶಕರು.
ಸದ್ಯಕ್ಕೆ ಪೂಜೆ ನಡೆದಿದ್ದು, ಅಕ್ಟೋಬರ್‌ನಲ್ಲಿ ಶುರುವಾಗಲಿದೆ ಎಂಬ ವಿವರ ಕೊಡುತ್ತಾರೆ ಸೂರಜ್. ಇದಷ್ಟೇ ಅಲ್ಲ, ಸೂರಜ್‌ಗೌಡ ಇನ್ನೊಂದು ಚಿತ್ರದಲ್ಲೂ ನಟಿಸಲಿದ್ದಾರೆ. ಈ ಹಿಂದೆ “ಸಿಲಿಕಾನ್ ಸಿಟಿ’ ಚಿತ್ರ ನಿರ್ದೇಶನ ಮಾಡಿದ್ದ ಮುರಳಿ ಗುರಪ್ಪ ಅವರೊಂದಿಗೆ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿ ಕೂಡ ನಡೆಯುತ್ತಿದೆ ಎಂಬುದು ಸೂರಜ್ ಗೌಡ ಅವರ ಮಾತು.
ಇದರ ನಡುವೆಯೇ, ಸೂರಜ್ ಗೌಡ ಅವರು ಹರಿಪ್ರಿಯಾ ಅಭಿನಯದ “ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲೂ ನಟಿಸಿದ್ದಾರೆ. ಅದೊಂದು ವಿಶೇಷವಾಗಿರುವಂತಹ ಪಾತ್ರವಾಗಿದ್ದು, ಅದನ್ನು ಚಿತ್ರದಲ್ಲೇ ನೋಡಬೇಕೆಂಬುದು ಅವರ ಮಾತು. “ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ನಟಿಸಲು ಕಾರಣ, ಹರಿಪ್ರಿಯಾ ಅವರ 25 ನೇ ಚಿತ್ರ ಎಂಬುದು ಒಂದಾದರೆ, ಆ ಚಿತ್ರದ ವಿಶೇಷ ಪಾತ್ರ ಎಂಬುದು ಇನ್ನೊಂದು ಕಾರಣ ಎನ್ನುತ್ತಾರೆ.
ಎಲ್ಲಾ ಸರಿ, ಬೇರೆ ಭಾಷೆಯಿಂದ ಸಿನಿಮಾಗಳು ಬಂದಿಲ್ಲವೇ? ಈ ಪ್ರಶ್ನೆಗೆ ಉತ್ತರಿಸುವ ಸೂರಜ್‌ಗೌಡ, ಖಂಡಿತ ಇಲ್ಲ. ಬಂದರೂ ಹೋಗುವುದಿಲ್ಲ. ಯಾಕೆಂದರೆ, ಭಾಷೆಯ ಹಿಡಿತ ಇರದಿದ್ದರೆ, ಬೇರೆ ಭಾಷೆಯಲ್ಲಿ ಕೆಲಸ ಮಾಡುವುದು ಕಷ್ಟ. ನನಗೆ ಕನ್ನಡವೇ ಸಾಕು. ನನಗೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಈ ಮೂರು ಭಾಷೆ ಸುಲಲಿತ. ಈ ಮೂರು ಭಾಷೆಯ ಚಿತ್ರವಿದ್ದರೆ ಖಂಡಿತ ನಟಿಸುತ್ತೇನೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಸೂರಜ್‌ಗೌಡ.