Advertisement

ಶೀಘ್ರದಲ್ಲೇ ಕೆಂಪೇಗೌಡ ಬಡಾವಣೆ ರೈತರ ಸಮಸ್ಯೆಗೆ ಪರಿಹಾರ: ಎಸ್.ಆರ್.ವಿಶ್ವನಾಥ್

08:10 PM Oct 04, 2021 | Team Udayavani |

ಬೆಂಗಳೂರು: ಉದ್ದೇಶಿತ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರಿಗೆ ಪ್ರೋತ್ಸಾಹ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವುದು ಸೇರಿದಂತೆ ಅವರಿಗೆ ಸಂಬಂಧಿಸಿದ ಇನ್ನಿತರೆ ಕೆಲಸಗಳನ್ನು ಹಂತಹಂತವಾಗಿ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭರವಸೆ ನೀಡಿದ್ದಾರೆ.

Advertisement

ಯಶವಂತಪುರ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿರುವ ರೈತರೊಂದಿಗೆ ಬಿಡಿಎ ಕಚೇರಿಯಲ್ಲಿ ಸಭೆ ನಡೆಸಿ ಹಲವಾರು ವಿಚಾರಗಳನ್ನು ಚರ್ಚಿಸಿದರು.

ನಿವೇಶನ ಹಂಚಿಕೆ ಮಾಡುವುದು, ಕಡತಗಳಿಗೆ ಅಲೆದಾಡಿಸುವುದು ಸೇರಿದಂತೆ ಇನ್ನಿತರೆ ವಿಚಾರಗಳಲ್ಲಿ ಕೆಲವು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಹೇಳಿಕೊಂಡರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, “ನನ್ನ ಮತಕ್ಷೇತ್ರದ 14 ಗ್ರಾಮಗಳ ರೈತರು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಭೂಮಿಯನ್ನು ನೀಡಿದ್ದಾರೆ. ನಾಲ್ಕಾರು ವರ್ಷಗಳಾದರೂ ಅವರಿಗೆ ಪ್ರೋತ್ಸಾಹ ಯೋಜನೆಯಡಿ ನಿವೇಶನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಬಗೆಹರಿಸಬೇಕು. ರೈತರಿಗೆ ಯಾವುದೇ ತೊಂದರೆಗಳನ್ನು ನೀಡದೇ ಅವರ ಕೆಲಸಗಳನ್ನು ಮುಗಿಸಿಕೊಡಬೇಕು, ರೈತರಿಗೆ ಗೌರವ ನೀಡಬೇಕು, ಅವರಿಗೆ ಅಗೌರವ ತೋರುವುದನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ತಿಂಗಳೊಳಗೆ ರೈತರ ಕೆಲಸ

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ರೈತರು ನೀಡಿರುವ ತಮ್ಮ ಜಮೀನಿನಲ್ಲಿಯೇ ಲಭ್ಯತೆ ಆಧಾರದಲ್ಲಿ ಅವರಿಗೆ ಪ್ರೋತ್ಸಾಹಕ ಯೋಜನೆಯಡಿ ನಿವೇಶನ ನೀಡಲಾಗುತ್ತದೆ. ಒಂದು ವೇಳೆ ಆ ಜಮೀನಿನಲ್ಲಿ ನಿವೇಶನ ಲಭ್ಯವಿಲ್ಲದಿದ್ದರೆ ಅದರ ಸನಿಹದಲ್ಲಿಯೇ ನಿವೇಶನ ಹಂಚಿಕೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಯಾವುದೇ ಕಾನೂನು ತೊಡಕುಗಳು ಇಲ್ಲದಿರುವ ಪ್ರಕರಣಗಳನ್ನು ತಿಂಗಳೊಳಗೆ ಪರಿಶೀಲನೆ ನಡೆಸಿ ಹಂತಹಂತವಾಗಿ ಪೂರ್ಣಗೊಳಿಸಲಾಗುತ್ತದೆ, ಮುಂದಿನ ತಿಂಗಳು ನಾಲ್ಕರೊಳಗೆ ಗರಿಷ್ಠ ಮಟ್ಟದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೂಡಲೇ ಲಭ್ಯವಿರುವ ನಿವೇಶನಗಳನ್ನು ಸಿದ್ಧಪಡಿಸಬೇಕು, ಇದರ ಜವಾಬ್ದಾರಿಯನ್ನು ಕೆಳ ಹಂತದ ಅಧಿಕಾರಿಗಳು ವಹಿಸಿಕೊಳ್ಳಬೇಕು. ಎಲ್ಲಿಯೂ ಲೋಪವಾಗದ ರೀತಿಯಲ್ಲಿ ನಿಯಮಾನುಸಾರ ಕ್ರಮಗಳನ್ನು ಕೈಗೊಂಡು ರೈತರ ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next