ಚೆನ್ನೈ: ಇನ್ನು ಕೆಲವೇ ತಿಂಗಳಲ್ಲಿ ಚೆನ್ನೈನಿಂದ ಬೆಂಗಳೂರಿಗೆ ರೈಲು ಪ್ರಯಾಣದ ಮೂಲಕ ಕೇವಲ ನಾಲ್ಕು ಗಂಟೆಗಳಲ್ಲಿ ತಲುಪಬಹುದಾಗಿದೆ. ಹೌದು ತಮಿಳುನಾಡಿನ ಅರಕ್ಕೋಣಂ ಮತ್ತು ಜೋಲಾರ್ ಪೇಟ್ ನಡುವೆ ಸಂಚರಿಸುವ ರೈಲುಗಳ ವೇಗ ಹೆಚ್ಚಳಕ್ಕೆ ರೈಲ್ವೇ ಇಲಾಖೆ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:GADAR 2: ಈ ವಿಚಾರದಲ್ಲಿ ಕೆಜಿಎಫ್ -2, ಪಠಾಣ್, ದಂಗಲ್.. ದಾಖಲೆಯನ್ನು ಮುರಿದ ʼಗದರ್-2
ಪ್ರಸ್ತುತ ಅರಕ್ಕೋಣಂನಿಂದ ಬೆಂಗಳೂರಿಗೆ ಆಗಮಿಸುವ ರೈಲುಗಳ ವೇಗದ ಮಿತಿ ಗಂಟೆಗೆ 110ಕಿ.ಮೀಟರ್ ನಿಂದ 130 ಕಿಲೋ ಮೀಟರ್ ನಷ್ಟಿದ್ದು, ಇನ್ಮುಂದೆ ಈ ವೇಗದ ಮಿತಿ 144 ಕಿಲೋ ಮೀಟರ್ ಗೆ ಹೆಚ್ಚಿಸಲಾಗುವುದು ಎಂದು ರೈಲ್ವೇ ಇಲಾಖೆ ವಿವರಿಸಿದೆ.
ರೈಲ್ವೆ ಹಳಿ ಮತ್ತು ಸಿಗ್ನಲ್ಸ್ ಗಳನ್ನು ಉನ್ನತೀಕರಿಸಿದ ನಂತರ ರೈಲ್ವೆ ಇಲಾಖೆ ವೇಗ ಮಿತಿ ಹೆಚ್ಚಳಕ್ಕೆ ಮುಂದಾಗಿರುವುದಾಗಿ ವರದಿ ತಿಳಿಸಿದೆ. ವೇಗದ ಮಿತಿ ಹೆಚ್ಚಿಸುವುದರಿಂದ ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣದ ಅವಧಿ ಇಳಿಕೆಯಾಗಲಿದೆ. ಅದೇ ರೀತಿ ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ದಿ ಅಥವಾ ಬೃಂದಾವನ್ ಎಕ್ಸ್ ಪ್ರೆಸ್ ರೈಲುಗಳು ಪ್ರಸ್ತುತ ಆರು ಗಂಟೆಗಳ ಪ್ರಯಾಣ ಅವಧಿ ಇದ್ದು, ಅದರ ಸಮಯ ಕೂಡಾ ಇಳಿಕೆಯಾಗಲಿದೆ.
ಬಹುತೇಕ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ವಾರದಿಂದ ಅರಕ್ಕೋಣಂ ಮತ್ತು ಜೋಲಾರ್ ಪೇಟ್ ನಡುವೆ 130 ಕಿಲೋ ಮೀಟರ್ ವೇಗದಲ್ಲಿ ರೈಲುಗಳು ಸಂಚರಿಸುವಂತೆ ಆದೇಶ ಹೊರಡಿಸಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
ಬೆಂಗಳೂರು ಮತ್ತು ಕೊಯಮತ್ತೂರಿನಿಂದ ಸಂಚರಿಸುವ ವಂದೇ ಭಾರತ್ ರೈಲುಗಳು ಚೆನ್ನೈ ಮತ್ತು ಅರಕ್ಕೋಣಂ ನಡುವೆ 130 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತಿದ್ದು, ಇದೀಗ ಜೋಲಾರ್ ಪೇಟ್ ರೈಲ್ವೇ ಮಾರ್ಗವನ್ನು ಅಪ್ ಗ್ರೇಡ್ ಮಾಡಿದ್ದು, ಇನ್ನುಳಿದ ರೈಲುಗಳು ಕೂಡಾ ವೇಗದಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದು ವರದಿ ಹೇಳಿದೆ.