ಮೂಡಲಗಿ: ಹದಗೆಟ್ಟಿರುವ ಯಾದವಾಡ-ಕುಲಗೋಡ ಹಾಗೂ ಯಾದವಾಡ-ವಂಟಗೂಡಿ ರಸ್ತೆ ದುರಸ್ತಿ ಕಾಮಗಾರಿಯನ್ನು ವಾರದೊಳಗೆ 62 ಲಕ್ಷ ರೂ.ಗಳ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ವಾರದೊಳಗೆ ಎರಡೂ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸುವ ಭರವಸೆ ನೀಡಿದರು.
ಯಾದವಾಡ ಗ್ರಾಮದ ಪ್ರಗತಿಗಾಗಿ ಈಗಾಗಲೇ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಬಳಕೆ ಮಾಡಲಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಪ್ರಗತಿಪರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಗ್ರಾಮದ ಈಶ್ವರ (ಲಿಂಗನಗುಡಿ) ದೇವಸ್ಥಾನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಯಾದವಾಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಬಿ.ಎಚ್. ಪಾಟೀಲ, ಪರ್ವತಗೌಡ ಪಾಟೀಲ, ರಂಗಪ್ಪ ಇಟ್ಟನ್ನವರ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಶಂಕರ ಬೆಳಗಲಿ, ಗೌಡಪ್ಪ ಗುರಡ್ಡಿ, ಹಣಮಂತ ಹುಚರಡ್ಡಿ, ಸುರೇಶ ಸಾವಳಗಿ, ಲಕ್ಷ್ಮಣ ಯರಗಟ್ಟಿ, ಬಸು ಕೇರಿ, ಶಿವಪ್ಪಗೌಡ ನ್ಯಾಮಗೌಡ ಇದ್ದರು.