ಕನ್ನಡದಲ್ಲಿ ಇತ್ತೀಚೆಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು. ಅಂದಹಾಗೆ, ಈ ವರ್ಷದ ಮೊದಲ ವಾರವೇ ಸೋನು ಅಭಿನಯದ “ಫಾರ್ಚೂನರ್’ ಚಿತ್ರ ತೆರೆಗೆ ಬರುತ್ತಿದೆ. ಈ ಖುಷಿಯಲ್ಲೇ ಮಾತಿಗೆ ಸಿಕ್ಕ ಸೋನುಗೌಡ, ಹೇಳಿದ್ದಿಷ್ಟು. “ಈ ವರ್ಷದ ಮೊದಲ ವಾರ ನನ್ನ ಚಿತ್ರ ರಿಲೀಸ್ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕಳೆದ ವರ್ಷ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಅದರಲ್ಲಿ ಕೆಲವು ರಿಲೀಸ್ ಆಗಿದ್ದವು. ಈ ವರ್ಷ ಇನ್ನಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಬೇಕು ಅಂದುಕೊಂಡಿದ್ದೇನೆ.
“ಫಾರ್ಚೂನರ್’ ನಂತರ “ಚಂಬಲ್’, “ಐ ಲವ್‌ಯು’ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಅದಾದ ಬಳಿಕ “ಶಾಲಿನಿ ಐಎಎಸ್’ ಮತ್ತು “ರೆಡ್’ ರಿಲೀಸ್ ಆಗುವ ಸಾಧ್ಯತೆ ಇದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಕೊನೆಯೊಳಗೆ ಐದಾರು ಸಿನಿಮಾಗಳು ರಿಲೀಸ್ ಅಗೋದಂತು ಗ್ಯಾರೆಂಟಿ’ ಎಂಬ ಖುಷಿ ಹೊರಹಾಕುತ್ತಾರೆ ಸೋನು.
ಈ ವರ್ಷ ನನ್ನ ಮೊದಲ ಆದ್ಯತೆ ಸಿನಿಮಾ ಮತ್ತು ಫಿಟ್‌ನೆಸ್ ಕಡೆಗೆ ಎಂದು ನಗುತ್ತಲೇ ಹೇಳಿಕೊಳ್ಳುವ ಅವರು, ಆದಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಫಿಟ್ ಆ್ಯಂಡ್ ಫೈನ್ ಆಗಬೇಕು ಅನ್ನೋದು ಪಾಲಿಸಿ. ಅದನ್ನು ಶಿರಸಾವಹಿಸಿ ಪಾಲಿಸುತ್ತೇನೆ. ಈವರೆಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಕೆಲವು ಸಿನಿಮಾಗಳು ಬಂದಿದ್ದು, ಹೋಗಿದ್ದು ಗೊತ್ತಾಗುತ್ತಿರಲಿಲ್ಲ. ನನ್ನ ಸಿನಿಮಾಗಳು ರಿಲೀಸ್ ಆಗುತ್ತಿದ್ದರೂ, ಎಷ್ಟೋ ವೇಳೆ ಇತ್ತೀಚೆಗೆ ಯಾವ ಸಿನಿಮಾ ಮಾಡಿದ್ರಿ ಅಂತ ಕೆಲವರು ಕೇಳ್ತಿದ್ದರು. ಅದಕ್ಕೆ ಕಾರಣ ನಾನು ಅಭಿನಯಿಸಿದ್ದ ಸಿನಿಮಾಗಳು ಅಂದುಕೊಂಡಂತೆ ಆಡಿಯನ್ಸ್‌ನ ತಲುಪದಿರುವುದು. ಆದ್ರೆ “ಗುಲ್ಟಾ’ ಸಿನಿಮಾದ ನಂತರ ನನಗೆ ಎಷ್ಟೇ ಒಳ್ಳೆಯ ಕಥೆಯಿದ್ರೂ, ಅದನ್ನು ಸರಿಯಾಗಿ ಆಡಿಯನ್ಸ್‌ಗೆ ತಲುಪಿಸಿದರೆ ಮಾತ್ರ ಅವರು ಸ್ವೀಕರಿಸುತ್ತಾರೆ ಅನ್ನೋದು ಅರ್ಥವಾಯ್ತು.
ನಿಜ ಹೇಳ್ಬೇಕು ಅಂದ್ರೆ ಗುಲ್ಟಾ ಸಿನಿಮಾ ನನ್ನ ಸಿನಿಮಾ ಕೆರಿಯರ್‌ಗೆ ಹೊಸ ತಿರುವು ಕೊಟ್ಟಿತು. ಅದಾದ ನಂತರ ಹೊಸ ಹೊಸ ಸಿನಿಮಾಗಳು ಸಿಗೋದಕ್ಕೆ ಶುರುವಾದವು’ ಎಂಬುದು ಅವರ ಮಾತು. ಸದ್ಯ ಕನ್ನಡದಲ್ಲಿ ಸೋನು ಅವರಿಗೆ ಕೈ ತುಂಬ ಕೆಲಸಗಳಿವೆ. ಹಾಗಾಗಿ ಅವರು ಬೇರೆ ಭಾಷೆಯತ್ತ ಮುಖ ಮಾಡುವ ಯೋಚನೆ ಮಾಡಿಲ್ಲ. ಕಥೆ ಮತ್ತು ಪಾತ್ರಗಳಿಗೆ ಹೆಚ್ಚು ಆದ್ಯತೆ ನೀಡುವುದಷ್ಟೇ ಅವರ ಕೆಲಸವಂತೆ.