Advertisement

ಪುತ್ರನ ಆರೋಗ್ಯ ಸ್ಥಿತಿ ಗಂಭೀರ; ಮಿದುಳು ನಿಷ್ಕ್ರಿಯ

01:18 AM Oct 07, 2021 | Team Udayavani |

ಮಂಗಳೂರು: ನಗರದ ಉದ್ಯಮಿ ರಾಜೇಶ್‌ ಪ್ರಭು ಪಿಸ್ತೂಲ್‌ನಿಂದ ಹಾರಿದ ಗುಂಡಿನಿಂದ ಗಂಭೀರವಾಗಿ ಗಾಯಗೊಂಡಿರುವ ಅವರ ಪುತ್ರ ಸುಧೀಂದ್ರ ಪ್ರಭು (16) ಅವರ ಸ್ಥಿತಿ ಚಿಂತಾಜನಕವಾಗಿದ್ದು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

Advertisement

ಗುಂಡು ಕಣ್ಣಿನ ಭಾಗದಿಂದ ತಲೆಯನ್ನು ಹೊಕ್ಕಿದ್ದು ಮಿದುಳಿನ ಮೂಲಕ ಹಾದು ಹೋಗಿದೆ. ಪರಿಣಾಮವಾಗಿ ಮಿದುಳು ಸಂಪೂರ್ಣ ಹಾನಿಯಾಗಿದ್ದು ಚೇತರಿಕೆ ಕಂಡಿಲ್ಲ ಎಂದು ಬುಧವಾರ ರಾತ್ರಿ ರಾಜೇಶ್‌ ಪ್ರಭು ಅವರ ಕುಟುಂಬ ವೈದ್ಯರು ತಿಳಿಸಿದ್ದಾರೆ.

ಮಿದುಳು ನಿಷ್ಕ್ರಿಯ ಸ್ಥಿತಿ ತಲುಪಿದ್ದರಿಂದ ಸುಧೀಂದ್ರ ಅವರ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಲಾಗಿತ್ತೆಂದು ತಿಳಿದುಬಂದಿದ್ದು ಇದನ್ನು ಕುಟುಂಬ ಮೂಲಗಳು ಖಚಿತಪಡಿಸಿಲ್ಲ.

ತಂದೆಯೂ ಆಸ್ಪತ್ರೆಗೆ ದಾಖಲು
ಆರೋಪಿಯಾಗಿರುವ ರಾಜೇಶ್‌ ಪ್ರಭುವನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಎದೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪೊಲೀಸ್‌ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುಂಡು ಹಾರಿದ್ದು ಹೇಗೆ ?
ರಾಜೇಶ್‌ ಪ್ರಭುವನ್ನು ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಗುಂಡು ಹಾರಾಟದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ರಾಜೇಶ್‌ ಪ್ರಭು ಅವರ ಸಂಸ್ಥೆಯ ಲಾರಿ ಚಾಲಕ ಮತ್ತು ಕ್ಲೀನರ್‌ ಅವರು ಮೋರ್ಗನ್ಸ್‌ಗೇಟ್ ನಲ್ಲಿರುವ ಕಚೇರಿಗೆ ಬಂದು ರಾಜೇಶ್‌ ಪ್ರಭು ಅವರ ಪತ್ನಿಯ ಬಳಿ ಸಂಬಳದ ವಿಚಾರವಾಗಿ ವಾಗ್ವಾದ ನಡೆಸಿ ಹೋಗಿದ್ದರು. ಈ ವಿಚಾರವನ್ನು ರಾಜೇಶ್‌ ಪ್ರಭು ಅವರ ಪತ್ನಿ ರಾಜೇಶ್‌ ಪ್ರಭು ಅವರಿಗೆ ತಿಳಿಸಿದರು. ಕಚೇರಿ ಬಳಿಯೇ ಇರುವ ಮನೆಯಲ್ಲಿದ್ದ ರಾಜೇಶ್‌ ಪ್ರಭು ಮತ್ತು ಅವರ ಪುತ್ರ ಸುಧೀಂದ್ರ ಸ್ಥಳಕ್ಕೆ ಆಗಮಿಸಿದರು. ರಾಜೇಶ್‌ ಪಿಸ್ತೂಲ್‌ ಹಿಡಿದುಕೊಂಡೇ ಬಂದಿದ್ದರು. ಆ ವೇಳೆ ಚಾಲಕ ಮತ್ತು ಕ್ಲೀನರ್‌ ಕಚೇರಿಯ ಹೊರಗಡೆ ಇದ್ದರು. ಅವರೊಂದಿಗೆ ರಾಜೇಶ್‌ ಪ್ರಭು ಮತ್ತು ಸುಧೀಂದ್ರ ವಾಗ್ವಾದ ನಡೆಸಿದರು. ಸುಧೀಂದ್ರ ಚಾಲಕ ಮತ್ತು ಕ್ಲೀನರ್‌ಗೆ ಕೈಯಿಂದ ಹೊಡೆದ. ಆಗ ಸಂಘರ್ಷದ ಸ್ಥಿತಿ ಉಂಟಾಯಿತು. ಈ ವೇಳೆ ರಾಜೇಶ್‌ ಪ್ರಭು ಅವರ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿ ಒಂದು ಗುಂಡು ಸುದೀಂಧ್ರ ಅವರ ತಲೆಗೆ ಹೊಕ್ಕಿತು. ಸುದೀಂಧ್ರ ಅಲ್ಲೇ ಕುಸಿದು ಬಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ,ಇನ್‌ಸ್ಟಾಗ್ರಾಂ ಸ್ಥಗಿತದಿಂದ  ಟೆಲಿಗ್ರಾಂಗೆ ಲಾಭ

ಹೇಗಾಯಿತೆಂಬುದೇ
ಗೊತ್ತಿಲ್ಲ ಎಂದ ಆರೋಪಿ !
“ಆರೋಪಿ ರಾಜೇಶ್‌ ಪ್ರಭುವನ್ನು ವಿಚಾರಿಸಿದಾಗ ಆತ ಘಟನೆ ಹೇಗೆ ಆಯಿತು ಎಂಬುದೇ ಗೊತ್ತಿಲ್ಲ ಎಂದು ಉತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಹೋದೆಡೆ ಪಿಸ್ತೂಲ್‌ ಒಯ್ಯುತ್ತಿದ್ದರು !
ರಾಜೇಶ್‌ ಪ್ರಭು ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಕೋಪದಿಂದ ವರ್ತಿಸಿದ್ದರು. ಅಲ್ಲದೆ ತಾನು ಹೋದ ಕಡೆಗೆಲ್ಲಾ ಪಿಸ್ತೂಲ್‌ನ್ನು ಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಸಿಸಿ ಕೆಮರಾದಲ್ಲಿ ದಾಖಲು ಲಾರಿ, ಚಾಲಕ ಕ್ಲೀನರ್‌ ಕಚೇರಿಯೊಳಗೆ ಬರುವುದು, ಅನಂತರ ಕಚೇರಿಯ ಹೊರಗೆ ಸಂಘರ್ಷ ನಡೆಯುವ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಪೊಲೀಸ್‌ ಕಣ್ಗಾವಲಿನಲ್ಲಿ ಚಿಕಿತ್ಸೆ
ರಾಜೇಶ್‌ ಪ್ರಭುವಿಗೆ ಹಿಂದೆ ಹೃದಯದಲ್ಲಿ ತೊಂದರೆ ಇದ್ದುದರಿಂದ ಸ್ಟಂಟ್‌ ಹಾಕಲಾಗಿತ್ತು. ಅವರನ್ನು ಘಟನೆ ನಡೆದ ಕೂಡಲೇ ವಶಕ್ಕೆ ಪಡೆಯಲಾಗಿತ್ತು. ಆಗ ಅವರಿಗೆ ಎದೆನೋವು ಇರುವುದಾಗಿ ತಿಳಿಸಿದ್ದರು. ವೈದ್ಯಕೀಯ ತಪಾಸಣೆಗೊಳಪಡಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಕಣ್ಗಾವಲಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆ ಪಡೆದು ಶೀಘ್ರ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಜೇಶ್‌ ಪ್ರಭು ಅವರ ಮ್ಯಾನೇಜರ್‌ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಧೀಂದ್ರ ದಾಖಲಾಗಿರುವ ಆಸ್ಪತ್ರೆಯಲ್ಲಿಯೇ ರಾಜೇಶ್‌ ಪ್ರಭು ಅವರನ್ನು ಕೂಡ ದಾಖಲಿಸಲಾಗಿದೆ. ಸುಧೀಂದ್ರ ಅವರ ಆರೋಗ್ಯ ಸ್ಥಿತಿ ಉಲ್ಬಣಗೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next