ಹೊಸದಿಲ್ಲಿ: ಸೋಮವಾರ ಕಾಂಗ್ರೆಸ್‌ನ 136ನೇ ಸಂಸ್ಥಾಪನ ದಿನಾಚರಣೆ ನಡೆದಿದ್ದು, ಎಐಸಿಸಿ ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಗೈರು ಹಾಜರಾಗಿದ್ದಾರೆ. ಪಕ್ಷದ ಹಿರಿಯ ನಾಯಕ ಎ.ಕೆ. ಆ್ಯಂಟನಿ ಧ್ವಜಾರೋಹಣ ಮಾಡಿದ್ದಾರೆ.
ಸೋನಿಯಾ ಗೈರಿಗೆ ಅನಾರೋಗ್ಯ ಕಾರಣ ಎನ್ನಲಾಗುತ್ತಿದೆ. ಆದರೆ ರಾಹುಲ್ ಗಾಂಧಿ ಅವರು ಸಂಸ್ಥಾಪನ ದಿನಾಚರಣೆ ವೇಳೆಯಲ್ಲೂ ವಿದೇಶಕ್ಕೆ ತೆರಳಿರುವ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಕಾಂಗ್ರೆಸ್ ಸಂಸ್ಥಾಪನ ದಿನ ಆಚರಿಸುತ್ತಿದೆ. ಆದರೆ ಪಕ್ಷದ ಮುಖಂಡ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಹಿಂದೆ ಆ ಪಕ್ಷದ ಅಧ್ಯಕ್ಷರಾಗಿದ್ದವರು ಮತ್ತು ಮುಂದೆ ಮತ್ತೆ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗುತ್ತಿರುವವರು ಕಾಂಗ್ರೆಸ್ ಪಾಲಿಗೆ ದುರದೃಷ್ಟಕರ. ಅವರು ಎಲ್ಲಿದ್ದಾರೆ ಎಂಬುದೇ ಯಾರಿಗೂ ಗೊತ್ತಿಲ್ಲ. ಈ ಅನುಪಸ್ಥಿತಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಣದೀಪ್ ಸುಜೇವಾಲ, ರಾಹುಲ್ ಗಾಂಧಿಯವರ ನಿಕಟ ಬಂಧುವೊಬ್ಬರು ಇಟಲಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಅವರು ತೆರಳಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ರಾಹುಲ್ ಗಾಂಧಿ ತಮ್ಮ ಅಜ್ಜಿಯನ್ನು ನೋಡಲು ಹೋಗಿದ್ದಾರೆ, ಇದರಲ್ಲಿ ತಪ್ಪೇನಿದೆ? ಬಿಜೆಪಿ ಅತ್ಯಂತ ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದೆ’ ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.