ನವದೆಹಲಿ: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಆಘಾತಕ್ಕೊಳಗಾಗಿರುವ ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ ಮತ್ತೆ ಆಸರೆಯಾಗಿದ್ದಾರೆ. ಶನಿವಾರ ನಡೆದ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸಿಪಿಪಿ ನಾಯಕಿಯಾಗಿ ಆಯ್ಕೆಯಾದ ಸೋನಿಯಾ ಗಾಂಧಿ, ಪಕ್ಷವನ್ನು ಬಲಿಷ್ಠಗೊಳಿಸಲು ಹಲವು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ.
ಲೋಕಸಭೆಗೆ ಹೊಸದಾಗಿ ಆಯ್ಕೆಯಾದ 52 ಸಂಸದರು, ರಾಜ್ಯಸಭಾ ಸದಸ್ಯರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಇತರೆ ಹಿರಿಯ ನಾಯಕರು ಸಿಪಿಪಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ, ಲೋಕಸಭೆಯ ಕಾಂಗ್ರೆಸ್ ನಾಯಕನನ್ನು ಆಯ್ಕೆ ಮಾಡುವ ಹೊಣೆಯನ್ನು ಪಕ್ಷವು ಸೋನಿಯಾಗಾಂಧಿಯವರಿಗೇ ನೀಡಿದ್ದು, ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತಿಳಿಸುವುದಾಗಿ ಸೋನಿಯಾ ಹೇಳಿದ್ದಾರೆ.
ಬದಲಾವಣೆಯ ಗಾಳಿ: ಸಿಪಿಪಿ ನಾಯಕಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಸೋನಿಯಾ ಗಾಂಧಿ, ‘ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಹಲವಾರು ಸವಾಲುಗಳನ್ನು ಅರ್ಥಮಾಡಿಕೊಳ್ಳ ಬೇಕು. ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ, ಪಕ್ಷವನ್ನು ಬಲಿಷ್ಠ ಗೊಳಿಸಲು ಕೈಗೊಳ್ಳಬೇಕಾದ ಹಲವು ನಿರ್ಣಾಯಕ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ’ ಎಂದು ಹೇಳುವ ಮೂಲಕ ಪಕ್ಷದಲ್ಲಿ ಬದಲಾವಣೆಗೆ ಗಾಳಿ ಬೀಸುವ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿಯೇತರ ಕುಟುಂಬದ ವ್ಯಕ್ತಿಯ ನೇಮಕ, ಹೊಸ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡಲು ಹಿರಿಯ ನಾಯಕರ ಮಂಡಳಿ ರಚನೆ ಮತ್ತಿತರ ಅಂಶಗಳೂ ಈ ಬದಲಾವಣೆಗಳಲ್ಲಿ ಸೇರಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸುಧಾರಣಾ ಕ್ರಮಗಳಿಗೆ ಬೆಂಬಲ: ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳನ್ನು ಬೆಂಬಲಿಸುವಲ್ಲಿ ನಮ್ಮ ಪಕ್ಷವು ರಚನಾತ್ಮಕ ಪಾತ್ರ ವಹಿಸಬೇಕು. ಆದರೆ, ಕೇಂದ್ರದ ವಿಭಜನಾತ್ಮಕ ಹಾಗೂ ಆಕ್ರಮಣಕಾರಿ ಕ್ರಮಗಳನ್ನು ಖಡಾಖಂಡಿತವಾಗಿ ವಿರೋಧಿಸಬೇಕು ಎಂದು ಸೋನಿಯಾ ಕರೆ ನೀಡಿದ್ದಾರೆ. ಹಿಂದಿನ ಅವಧಿಯಲ್ಲೂ ನಮ್ಮ ಸಂಸದರು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಯಪಿಎಯ ಐತಿಹಾಸಿಕ ಕ್ರಮಗಳು ದುರ್ಬಲವಾಗದಂತೆ ನೋಡಿಕೊಂಡಿದ್ದಾರೆ. ಈ ಬಾರಿಯೂ ಅದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.
ರಾಹುಲ್ಗೆ ಮೆಚ್ಚುಗೆ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ 12.3 ಕೋಟಿ ಮತದಾರರಿಗೆ ಧನ್ಯವಾದಗಳನ್ನು ಹೇಳಿದ ಸೋನಿಯಾ, ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ವಹಿಸಿದ ಪಾತ್ರವನ್ನೂ ಶ್ಲಾಘಿಸಿದ್ದಾರೆ. ಚುನಾವಣೆ ವೇಳೆ ರಾಹುಲ್ ಅವಿರತವಾಗಿ ಹಾಗೂ ಧೈರ್ಯವಾಗಿ ಪ್ರಚಾರ ನಡೆಸಿದ್ದಾರೆ, ಸರ್ಕಾರದ ಅನ್ಯಾಯಗಳ ವಿರುದ್ಧ ಧ್ವನಿಯೆತ್ತಿದ್ದಾರೆ, ಪಕ್ಷಕ್ಕಾಗಿ ಹಗಲು ರಾತ್ರಿಯೆನ್ನದೆ ದುಡಿದಿದ್ದಾರೆ ಎಂದು ರಾಹುಲ್ ಹೊಗಳಿದ್ದಾರೆ.