ಚಿತ್ರರಂಗದಲ್ಲಿ ಹೊಸಬರು ಬರುತ್ತಲೇ ಇರುತ್ತಾರೆ. ಒಂದಲ್ಲ, ಒಂದು ಹೊಸ ಪ್ರಯೋಗ ಮಾಡುತ್ತಾ ಗೆಲ್ಲುವ ಕನಸು ಕಾಣುತ್ತಾರೆ. ಹೀಗೆ ಬಂದವರು ವಿಭಿನ್ನ ಟೈಟಲ್, ಹಾಡು, ಟ್ರೇಲರ್ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಈಗ ಈ ಸಾಲಿಗೆ ಚೆಕ್ ಮೇಟ್ ಕೂಡಾ ಒಂದು.
ಹೌದು, ದಿ ಚೆಕ್ ಮೇಟ್ ಎಂಬ ಸಿನಿಮಾವೊಂದು ತಯಾರಾಗಿದೆ. ಚೆಸ್ ಆಟದಲ್ಲಿ ಚೆಕ್ ಮೇಟ್ ಎಂಬ ಪದ ಬಳಕೆ ಇದೆ. ಈಗ ಅದೇ ಪದವನ್ನು ತಮ್ಮ ಸಿನಿಮಾಕ್ಕೆ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಕೂಡಾ ಈ ಹಾಡನ್ನು ಮೆಚ್ಚಿ ಚಿತ್ರತಂಡಕ್ಕೆ ಅಭಿನಂದಿಸಿದ್ದಾರೆ.
ಚಿತ್ರತಂಡ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಇದೊಂದು ಮಾಧುರ್ಯ ತುಂಬಿದ ಹಾಡು. ಬಿಡುಗಡೆ ಆದ ಕೆಲವು ಘಂಟೆಗಳಲ್ಲಿ ಸಾವಿರಾರು ವ್ಯಕ್ತಿಗಳು ಈ ಮಧುರ ಗೀತೆಯನ್ನು ಕೇಳಿದ್ದಾರೆ. ತಿರುಗಿ ತಿರುಗಿ ನೋಡು ಒಮ್ಮೆ ನನ್ನನ್ನು…. ಗೀತೆಯ ರಚನೆಕಾರ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಭಾರತೀಶ ವಸಿಷ್ಠ. ಈ ಗೀತೆಯನ್ನು ಜನಪ್ರಿಯ ಗಾಯಕ ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಈ ಚಿತ್ರಕ್ಕೆ ಅವರದೇ ಸಂಗೀತ ನಿರ್ದೇಶನವಿದೆ. ಇನ್ನೊಂದು ಥೀಮ್ ಗೀತೆಯನ್ನು ಕೂಡಾ ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಚಿತ್ರೀಕರಣ ಬೆಂಗಳೂರು ಸುತ್ತಮುತ್ತಲೇ ಮಾಡಿಕೊಂಡು, ಇತರೆ ಚಟುವಟಿಕೆ ಸಹ ಮುಗಿಸಿ ಸೆನ್ಸಾರ್ ಮುಂದೆ ಚಿತ್ರ ಬಂದಿದೆ.
ಈ ಚಿತ್ರವನ್ನು ರಂಜನ್ ಹಾಸನ್ ನಿರ್ಮಿಸಿ, ನಟಿಸಿದ್ದಾರೆ. ಈ ಚಿತ್ರಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ನಿರ್ದೇಶಕರುಗಳು 58 ದಿವಸಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನವನ್ನು ಈ ಎಸ್ ಈಶ್ವರ್ ನಿರ್ವಹಿಸಿದ್ದಾರೆ. ವಯಲೆಂಟ್ ವೇಲು ಸಾಹಸ, ಪ್ರಮೋದ್ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ. ಅಂದಹಾಗೆ, ಚೆಕ್ ಮೇಟ್ ಇಂದಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಕೂಡಾ ಚಿತ್ರತಂಡಕ್ಕಿದೆ. ಎಲ್ಲಾ ಓಕೆ ಕಥೆ ಏನು ಎಂದು ನೀವು ಕೇಳಿದರೆ ಅದು ಸಸ್ಪೆನ್ಸ್ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ರಂಜನ್ ಹಾಸನ್ ಜೊತೆ ನಾಯಕಿ ಆಗಿ ಪ್ರೀತು ಪೂಜಾ ಅಭಿನಯಿಸಿದ್ದಾರೆ. ಪೋಷಕ ಕಲಾವಿದರಲ್ಲಿ ಸರ್ದಾರ್ ಸತ್ಯ, ರಾಜಶೇಖರ್, ವಿಜಯ್ ಚೆಂಡುರ್, ನೀನಾಸಮ್ ಅಶ್ವಥ್, ಸುಧಿ ಕಾಕ್ರೋಚ್, ವಿಶ್ವ ವಿಜೇತ್, ಪ್ರದೀಪ್ ಪೂಜಾರಿ, ಮಜಾ ಟಾಕೀಸ್ ಹರಿ ಕಾರ್ತಿಕ್, ಕಿಲ್ಲರ್ ಮಂಜ ಹಾಗೂ ಇತರರು ಇದ್ದಾರೆ.