ಪಣಜಿ: ಬಿಜೆಪಿ ನಾಯಕಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನಾಲಿ ಪೋಗಟ್ ಸಾವಿನ ಹಿಂದಿನ ಕಾರಣ ಬಯಲಾಗಿದ್ದು, ಆಕೆಗೆ ಬಲವಂತವಾಗಿ ಡ್ರಗ್ಸ್ ನೀಡಿ ಸಾಯಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಟ್ಯಾಟೂ ಪ್ರಿಯರೇ ಎಚ್ಚರ: ಟ್ಯಾಟೂ ಇಂಕ್‌ನಲ್ಲಿ ಕ್ಯಾನ್ಸರ್ ಅಂಶ ಪತ್ತೆ!
ಟಿಕ್ ಟಾಕ್ ಸ್ಟಾರ್ ಸೋನಾಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಈ ಮೊದಲು ವರದಿಯಾಗಿತ್ತು. ಆದರೆ ತನ್ನ ಸಹೋದರಿಯನ್ನು ಹತ್ಯೆಗೈಯಲಾಗಿದೆ ಎಂದು ಸಹೋದರ ರಿಂಕು ಧಾಕಾ ಆರೋಪಿಸಿದ್ದರು.
ಶುಕ್ರವಾರ(ಆಗಸ್ಟ್ 26) ಗೋವಾ ಇನ್ಸ್ ಪೆಕ್ಟರ್ ಜನರಲ್ ಓಂವೀರ್ ಸಿಂಗ್ ಬಿಷ್ಣೋಯಿ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ, ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಇಬ್ಬರು ಆರೋಪಿಗಳಲ್ಲಿ ಓರ್ವ ಸೋನಾಲಿಗೆ ಬಲವಂತವಾಗಿ ಡ್ರಗ್ಸ್ ನೀಡಿರುವುದನ್ನು ತಪ್ಪೊಪ್ಪಿಕೊಂಡಿದ್ದಾನೆ. ಆಕೆಗೆ ಡ್ರಗ್ಸ್ ನೀಡಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದಳು. ನಂತರ ಆಕೆಯನ್ನು ಇಬ್ಬರು ಆರೋಪಿಗಳು ಶೌಚಾಲಯಕ್ಕೆ ಕರೆದೊಯ್ದಿದ್ದರು. ಆದರೆ ಎರಡು ಗಂಟೆಗಳ ಕಾಲ ಟಾಯ್ಲೆಟ್ ನಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಆರೋಪಿಗಳು ಯಾವುದೇ ವಿವರ ನೀಡಿಲ್ಲ ಎಂದು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಧಿವಿಜ್ಞಾನ ತಜ್ಞರ ತಂಡ ಆರೋಪಿಗಳನ್ನು ಸ್ಥಳ ಪರಿಶೀಲನೆಗೆ ಕರೆದೊಯ್ದಿದ್ದರು. ಸೋನಾಲಿ ಅತೀಯಾದ ಡ್ರಗ್ಸ್ ನಿಂದಾಗಿ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾರೆ.
ಇಂದು ಸೋನಾಲಿ ಪೋಗಟ್ ಪಾರ್ಥಿವ ಶರೀರವನ್ನು ದೆಹಲಿಯ ರಿಷಿ ನಗರಕ್ಕೆ ತರಲಾಗಿದ್ದು, ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದ್ದರು. ಸೋನಾಲಿಯ ಪುಟ್ಟ ಮಗಳಾದ ಯಶೋಧರಾ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಜರಿದ್ದರು ಎಂದು ವರದಿ ತಿಳಿಸಿದೆ.