ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿನಿಮಾಗಳ ಪ್ರೀ-ಪ್ರೊಡಕ್ಷನ್ ವರ್ಕ್, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ಸ್, ಪ್ರಮೋಶನ್ಸ್, ರಿಲೀಸ್ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಹೀಗಾಗಿ ಅನಿವಾರ್ಯವಾಗಿ ಸಿನಿಮಾದ ಕಲಾವಿದರು, ತಂತ್ರಜ್ಞರು ಕೂಡ ಬೇರೆ ವಿಧಿಯಿಲ್ಲದೆ ಮನೆಯಲ್ಲೇ ಲಾಕ್ ಆಗಬೇಕಿದೆ. ಅಂತೆಯೇ ಸ್ಯಾಂಡಲ್‌ವುಡ್‌ನ ಬಿಝಿ ನಾಯಕ ನಟಿಯರಲ್ಲಿ ಒಬ್ಬರಾಗಿರುವ ಸೋನಾಲ್ ಮಾಂತೆರೋ ಕೂಡ ಎಲ್ಲರಂತೆ ಮನೆಯಲ್ಲೇ ಲಾಕ್ ಆಗಿದ್ದಾರೆ.
“ಪಂಚತಂತ್ರ’ ಸಿನಿಮಾದ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸೋನಾಲ್ ಕೈಯಲ್ಲಿ ಸದ್ಯ ಐದಕ್ಕೂ ಹೆಚ್ಚು ಸಿನಿಮಾಗಳಿವೆ. ಕಳೆದ ಎರಡು – ಮೂರು ವರ್ಷಗಳಲ್ಲಿ ಬಿಡುವಿಲ್ಲದೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗಿರುವ ಸೋನಾಲ್, ಸಿನಿಮಾ ಕೆಲಸಗಳಿಲ್ಲದೆ ವಾರಗಳ ಕಾಲ ಮನೆಯಲ್ಲಿ ಕುಳಿತಿರುವುದು ಇದೇ ಮೊದಲು.
ಅವರೇ ಹೇಳುವಂತೆ, “ಎಲ್ಲರಿಗೂ ಗೊತ್ತಿರುವಂತೆ “ಪಂಚ ತಂತ್ರ’ ಸಿನಿಮಾದ ನಂತರ ನನಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಆಫರ್ ಬಂದವು. ಹಾಗೆ ಬಂದ ಆಫರ್ನಲ್ಲಿ ನನಗೆ ಇಷ್ಟವಾದಂತವುಗಳನ್ನ ಒಪ್ಪಿಕೊಳ್ಳುತ್ತಿದ್ದೇನೆ. ಅದರಲ್ಲಿ ಈಗಾಗಲೇ ಕೆಲವು ಸಿನಿಮಾಗಳು ರಿಲೀಸ್ ಆಗಿವೆ. ಇನ್ನೂಕೆಲವು ಸಿನಿಮಾಗಳ ಶೂಟಿಂಗ್ ಮುಗಿದಿದ್ದು, ರಿಲೀಸ್‌ಗೆ ರೆಡಿಯಿವೆ. ಇನ್ನುಕೆಲವು ಸಿನಿಮಾಗಳದ್ದು ಶೂಟಿಂಗ್ ನಡೆಯುತ್ತಿದೆ. ಸುಮಾರು ಮೂರು ವರ್ಷಗಳಿಂದ ಕಂಪ್ಲೀಟ್ ಸಿನಿಮಾದಲ್ಲೇ ಬಿಝಿಯಾಗಿದ್ದೇನೆ. ಕೆಲವೊಮ್ಮೆ ನನ್ನ ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವುದೇ ನನಗೆ ದೊಡ್ಡ ಚಾಲೆಂಜ್ ಆಗಿರುತ್ತಿತ್ತು. ಒಂದೇ ದಿನ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ಮಾಡಿದ್ದೂ ಇದೆ. ಫ್ರೆಂಡ್ಸ್, ಫ್ಯಾಮಿಲಿ ಜೊತೆ ಸಮಯಕಳೆಯಬೇಕು ಅಂದ್ರೂ ಸಾಧ್ಯವಾಗುತ್ತಿರಲಿಲ್ಲ. ನನಗೆ ನನ್ನ ವರ್ಕ್ ಬಿಟ್ಟು ಬೇರೇನೂ ಯೋಚಿಸದಂತಾಗಿದ್ದೆ.ಕಂಪ್ಲೀಟ್ ವರ್ಕೋಹಾಲಿಕ್ ಆಗಿದ್ದೆ. ಆದ್ರೆಕೋವಿಡ್ ಲಾಕ್ ಡೌನ್ ಇದ್ದಕ್ಕಿದ್ದಂತೆ ನನ್ನ ಎಲ್ಲ ಕೆಲಸಗಳಿಗೂ ಬ್ರೇಕ್ ಹಾಕಿದೆ. ಮೂರು ವರ್ಷಗಳಿಂದ ಯಾವತ್ತೂ ಇಷ್ಟೊಂದು ಫ್ರೀ ಆಗಿರಲಿಲ್ಲ. ಈಗ ಲಾಕ್‌ಡೌನ್ ಮುಗಿದು ಮತ್ತೆ ಸಿನಿಮಾ ವರ್ಕ್ ಶುರುವಾಗುವವರೆಗೆ ಹೇಗೆ ಸಮಯಕಳೆಯೋದು ಅಂತಾನೇ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ.
ಬೋರೋ ಬೋರು…
“ಲಾಕ್‌ಡೌನ್‌ನಿಂದ ಮನೆಯಲ್ಲಿರೋದು ಅಂದ್ರೆ, ತುಂಬಾನೇ ಬೋರ್. ಆದ್ರೆ ಸದ್ಯದ ಮಟ್ಟಿಗೆ ಮನೆಯಲ್ಲಿರದೆ ಬೇರೆ ದಾರಿಯಿಲ್ಲ. ಈ ಸಮಯವನ್ನ ಆದಷ್ಟುಕ್ರಿಯೆಟಿವ್ ಆಗಿ ಬಳಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ವಕೌìಟ್, ಪ್ರಾಕ್ಟೀಸ್, ಸಿನಿಮಾ ನೋಡುವುದು ಹೀಗೆ ದಿನಕಳೆಯುತ್ತಿದೆ. ತುಂಬ ಸಮಯದ ನಂತರ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹಾಗೆಯೇ ಕೆಲವೊಮ್ಮೆ ಎಂಗೇಜ್ ಆಗಿರುವಂಥ ವರ್ಕ್ ಇಲ್ಲವಲ್ಲ ಅಂಥ ಬೇಜಾರೂ ಆಗುತ್ತದೆ. ಆದ್ರೆ ಈಗಿನ ಪರಿಸ್ಥಿತಿಯಲ್ಲಿಕೋವಿಡ್ ಆತಂಕದಿಂದ ಎಲ್ಲರೂ ಹೊರಬರಬೇಕಾಗಿದೆ. ಹಾಗಾಗಿ ಅನಿವಾರ್ಯವಾದ್ರೂ ಎಲ್ಲರೂ ಮನೆಯಲ್ಲೇ ಇದ್ದು ಲಾಕ್‌ಡೌನ್ ಪಾಲಿಸೋದು ಒಳ್ಳೆಯದು’ ಎನ್ನುತ್ತಾರೆ ಸೋನಾಲ್.
ಜಿ.ಎಸ್.ಕಾರ್ತಿಕ ಸುಧನ್