ಮುಂಬಯಿ: ನಗರದ ‘ಬೆಸ್ಟ್’ ಬಸ್ ನಿರ್ವಾಹಕಿಯೊಬ್ಬರ ಪುತ್ರ ದೇಶದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ‘ಜಂಟ್ಲಮನ್ ಗೇಮ್’ ಸಾಮಾನ್ಯರಿಗೂ ಬಾಗಿಲು ತೆರೆಯುತ್ತದೆ ಎಂಬುದಕ್ಕೆ ಸಾಕ್ಷಿಯಿದು. ಈ ಪ್ರತಿಭಾನ್ವಿತನ ಹೆಸರು ಅಥರ್ವ ಅಂಕೋಲೆಕರ್.
ಶ್ರೀಲಂಕಾದಲ್ಲಿ ಸೆ.3ರಿಂದ ಆರಂಭ ವಾಗುವ ಯೂತ್ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ ತಂಡದಲ್ಲಿ ಅಥರ್ವ ಸ್ಥಾನ ಪಡೆದಿದ್ದಾನೆ.
ಅಥರ್ವನಿಗೆ ಆಸಕ್ತಿಯೇ ಬದುಕಾಯಿತು
18ರ ಹರೆಯದ ಅಥರ್ವನ ತಾಯಿ ವೈದೇಹಿ ಅಂಕೋಲೆಕರ್. ಇವರು ಬೆಸ್ಟ್ ಬಸ್ ನಿರ್ವಾಹಕಿ. ಪತಿ ವಿನೋದ್ ಅಂಕೋಲೆಕರ್ ಕೂಡ ಇದೇ ವೃತ್ತಿಯಲ್ಲಿ ದ್ದರು, 9 ವರ್ಷಗಳ ಹಿಂದೆ ಅವರು ನಿಧನ ಹೊಂದಿದ ಬಳಿಕ ಈ ಉದ್ಯೋಗ ವೈದೇಹಿ ಯವರಿಗೆ ಲಭಿಸಿತ್ತು. ಆಗ ಅಥರ್ವ 9ರ ಬಾಲಕ.
Related Articles
ಬಾಲ್ಯದಿಂದಲೇ ವಿಪರೀತ ಕ್ರಿಕೆಟ್ ಆಸಕ್ತಿ ಹೊಂದಿದ್ದ ಅಥರ್ವನಿಗೆ ತಂದೆ ದೊಡ್ಡ ಮಟ್ಟ ದಲ್ಲಿ ಪ್ರೋತ್ಸಾಹ ನೀಡಿದ್ದರು. ಶಾಲಾ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದಾಗಲೆಲ್ಲ ಅಪ್ಪನಿಂದ ಬಹುಮಾನವಾಗಿ ಸಿಗುತ್ತಿದ್ದುದು ಬ್ಯಾಟ್, ಗ್ಲೌಸ್, ಹೆಲ್ಮೆಟ್ ಇತ್ಯಾದಿ.
ಪತಿಯ ನಿಧನದ ಬಳಿಕ ವೈದೇಹಿ ಪುತ್ರನ ಕ್ರಿಕೆಟ್ ಆಸಕ್ತಿಗೆ ಇನ್ನಷ್ಟು ನೀರೆರೆದು ಪೋಷಿಸಿದರು. ಉತ್ತಮ ಕೋಚ್‌ಗಳ ಮಾರ್ಗ ದರ್ಶನವೂ ಲಭಿಸಿತು. ಪರಿಣಾಮವಾಗಿ ಅಥರ್ವ ಒಂದೊಂದೇ ಮೆಟ್ಟಿಲನ್ನು ಏರುತ್ತ ಹೋದ. ಇಂದು ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಸಹಜವಾಗಿಯೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾನೆ.
ಸಚಿನ್ ವಿಕೆಟ್ ಕಿತ್ತ ಪುಟಾಣಿ !
ಅಥರ್ವನ ಸ್ಮರಣೀಯ ಸಾಧನೆಯೊಂದು 2010ರಲ್ಲಿ ದಾಖಲಾಗಿತ್ತು. ಅಂದಿನ ಅಭ್ಯಾಸ ಪಂದ್ಯವೊಂದರಲ್ಲಿ ಹತ್ತರ ಹರೆಯದ ಪುಟಾಣಿ ಅಥರ್ವನಿಗೆ ಬಹುಮೂಲ್ಯ ವಿಕೆಟ್ ಲಭಿಸಿತ್ತು. ಆ ವಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರದು! ಈ ಕಿರಿಯನ ಸಾಧನೆಗೆ ಬೆರಗಾದ ಸಚಿನ್ ತಮ್ಮ ಹಸ್ತಾಕ್ಷರವುಳ್ಳ ಒಂದು ಜತೆ ಗ್ಲೌಸನ್ನು ಉಡುಗೊರೆ ನೀಡಿದ್ದರು.