ಬೆಂಗಳೂರು: ಅದು ಪಶ್ಚಿಮ ಬಂಗಾಳದ ಗ್ರಾಮ. ವರ್ಷದ ಹಿಂದೆ ಕಣ್ಣಾಮುಚ್ಚಾಲೆ ಆಡುವಾಗ ಗೂಡ್ಸ್ ರೈಲು ಹತ್ತಿ ಕಾಣಿಯಾಗಿದ್ದ ಬಾಲಕ ಪ್ರತ್ಯಕ್ಷವಾಗಿದ್ದು ಸಿಲಿಕಾನ್ ಸಿಟಿಯಲ್ಲಿ. ಇದೀಗ ಸ್ಥಳೀಯ ಯುವಕ ನಿತೀಶ್ ಎಂಬವರು ಫೇಸ್‌ಬಕ್‌ನ ಸಹಾಯದಿಂದ ಒಂದು ವರ್ಷದ ಬಳಿಕ ಬಾಲಕನನ್ನು ಪೋಷಕರ ಮಡಿಲು ಸೇರಿದ್ದಾರೆ.
ಮೂರು ವಾರಗಳ ಹಿಂದೆ ಬಿಟಿಎಂ ಲೇಔಟ್‌ನಲ್ಲಿ ಬಾಲಕ ಸುಹಾಸ್ ಹೊಟ್ಟೆ ಹಸಿವಿನಿಂದ ಓಡಾಡುತ್ತಿದ್ದ. ಆಗ ಬೇಕರಿ ಮಾಲೀಕ ರಾಜಣ್ಣ, ಯುವಕ ನಿತೀಶ್ ಮತ್ತು ಶ್ರೀಧರ್ ಎಂಬವರು ಬಾಲಕನನ್ನು ಕರೆದು ವಿಚಾರಣೆ ನಡೆಸಿದ್ದಾರೆ.
ಹಿಂದಿಯಲ್ಲಿ ಮಾತನಾಡುತ್ತಿದ್ದ ಬಾಲಕನಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದೆ ಅಳುತ್ತಿದ್ದ. ಬಳಿಕ ಆತನಿಗೆ ಸಮಾಧಾನ ಪಡಿಸಿ ವಿಚಾರಿಸಿದಾಗ ಒಂದು ವರ್ಷದ ಹಿಂದಿನ ಕಹಿಘಟನೆಯನ್ನು ವಿವರಿಸಿದ್ದಾನೆ. ಬಳಿಕ ಅದೇ ಬೇಕರಿಯಲ್ಲಿ ಉಳಿದುಕೊಳ್ಳಲು ಜಾಗ, ಕೆಲಸ ಕೊಟ್ಟು ಮಾಲೀಕ ರಾಜಣ್ಣ ಮಾನವೀಯತೆ ಮೆರೆದಿದ್ದರು.
ಫೇಸ್‌ಬುಕ್ ಮೂಲಕ ಪತ್ತೆ: ಈ ಮಧ್ಯೆ ಕೆಲ ದಿನಗಳ ಹಿಂದೆ ನಿತೀಶ್ ಅವರು ಬಾಲಕ ಸುಹಾಸ್ ಬಳಿ ಆತನ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಪಡೆದುಕೊಂಡು, ಆತನ ಸಹೋದರನ ಹೆಸರು ಹೇಳುತ್ತಿದ್ದಂತೆ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಶೋಧಿಸಿದಾಗ ಆತನ ಸಹೋದರನ ಫೋಟೋವನ್ನು ಸುಹಾಸ್ ಗುರುತಿಸಿದ್ದಾನೆ. ಕೂಡಲೇ ಮೆಸೆಂಜರ್ ಮೂಲಕ ಪಶ್ಚಿಮ ಬಂಗಾಳದಲ್ಲಿರುವ ಸಹೋದರನಿಗೆ ಮಾಹಿತಿ ನೀಡಿ, ಬೆಂಗಳೂರಿಗೆ ಕರೆಸಿಕೊಂಡು ಮಗನನ್ನು ಒಪ್ಪಿಸಿದ್ದಾರೆ. ಆದರೆ, ಇದುವರೆಗೂ ಬೇರೆ ಎಲ್ಲಿ ವಾಸವಾಗಿದ್ದ. ಏನು ಕೆಲಸ ಮಾಡುತ್ತಿದ್ದ ಎಂಬುದು ಗೊತ್ತಿಲ್ಲ ಎಂದು ನಿತೀಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಯಿ-ಮಗನ ಕಣ್ಣೀರು: ನಗರಕ್ಕೆ ಆಗಮಿಸಿದ ತಾಯಿಯನ್ನು ಕಂಡು ಸುಹಾಸ್ ಕಣ್ಣೀರು ಹಾಕಿದ್ದಾನೆ. ಅತ್ತ ತಾಯಿಯೂ ಕೂಡ ತಬ್ಬಿಕೊಂಡು ಮುದ್ದಾಡಿದ್ದಾರೆ. ಈ ವೇಳೆ ಒಂದು ವರ್ಷದ ಹಿಂದೆ ಆಟವಾಡುವಾಗ ನಾಪತ್ತೆಯಾಗಿದ್ದ. ಹುಡುಕಿಕೊಟ್ಟ ನಿತೀಶ್, ಬೇಕರಿ ಮಾಲೀಕ ರಾಜಣ್ಣ, ಶ್ರೀಧರ್ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.