Advertisement

ಅಪ್ಪನ ಅಭಿನಯ ಮಗನ ನಿರ್ದೇಶನ

12:17 AM Aug 23, 2019 | Team Udayavani |

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡವರು ಮದನ್‌ ಪಟೇಲ್. ಇನ್ನು ಅವರ ಪುತ್ರ ಮಯೂರ್‌ ಪಟೇಲ್ ಕೂಡ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಮದನ್‌ ಪಟೇಲ್ ಮತ್ತು ಪುತ್ರ ಮಯೂರ್‌ ಪಟೇಲ್, ಶೀಘ್ರದಲ್ಲಿಯೇ ‘ತಮಟೆ’ ಎನ್ನುವ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

Advertisement

ಅಂದಹಾಗೆ, 2013ರಲ್ಲಿ ಮದನ್‌ ಪಟೇಲ್ ಅವರೇ ಬರೆದ ‘ತಮಟೆ’ ಕಾದಂಬರಿಯನ್ನು ಅವರ ಪುತ್ರ ಮಯೂರ್‌ ಪಟೇಲ್ ಚಿತ್ರರೂಪದಲ್ಲಿ ತೆರೆಮೇಲೆ ತರುತ್ತಿದ್ದಾರೆ. ಇನ್ನು ‘ತಮಟೆ’ ಕಾದಂಬರಿಯ ಲೇಖಕ ಮದನ್‌ ಪಟೇಲ್, ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಮುಹೂರ್ತ ನೆರವೇರಿಸಿ ಚಿತ್ರತಂಡ, ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಮದನ್‌ ಪಟೇಲ್, ‘ಬಿಡುಗಡೆಯಾದ ಒಂದೇ ವರ್ಷದಲ್ಲಿ ಸುಮಾರು 10 ಸಾವಿರ ಪ್ರತಿಗಳಷ್ಟು ಮಾರಾಟವಾಗಿರುವ ‘ತಮಟೆ’ ಕಾದಂಬರಿಯನ್ನು ಈ ಚಿತ್ರದ ಮೂಲಕ ತೆರೆಮೇಲೆ ತರಲಾಗುತ್ತಿದೆ. ‘ತಮಟೆ’ ವಾದ್ಯವನ್ನು ಬಾರಿಸುವ ಕುಲವಾಡಿ ಮುನಿಯ ಎನ್ನುವ ವಾದ್ಯಗಾರನ ಜೀವನ ಚಿತ್ರಣ ಇದರಲ್ಲಿದೆ. ವಾದ್ಯಗಾರನ ಶೋಷಣೆ, ಸಮಾಜ ಹೇಗೆ ಅವನನ್ನು ಬಳಸಿಕೊಳ್ಳುತ್ತದೆ, ಅದರ ವಿರುದ್ದ ಅವನು ಹೋರಾಡು­ತ್ತಾನಾ ಇಲ್ಲವಾ ಅನ್ನೋದೇ ಚಿತ್ರ. ಇದರಲ್ಲಿ ನಾನು ಮುನಿಯ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.

ಇನ್ನು ಚಿತ್ರದ ಬಗ್ಗೆ ಮಾತನಾಡುವ ಮಯೂರ್‌ ಪಟೇಲ್, ‘ಅಪ್ಪ ಬರೆದಿದ್ದ ಈ ಕಾದಂಬರಿಯನ್ನು ಓದಿದ ನಂತರ ಬಡ ಮುನಿಯನ ಪಾತ್ರ ತೀವ್ರವಾಗಿ ಕಾಡಿತ್ತು. ಅದನ್ನೇ ಆಧರಿಸಿ ಸಿನಿಮಾ ಮಾಡಲು ನಿರ್ಧರಿಸಿದೆ. ಮುನಿಯ ಪಾತ್ರಕ್ಕೆ ಯಾವ ಕಲಾವಿದ ಸೂಕ್ತ ಅಂತ ಯೋಚಿಸುತ್ತಿದ್ದಾಗ, ನನಗೆ ಮೊದಲು ಕಣ್ಮುಂದೆ ಬಂದಿದ್ದು, ನನ್ನ ತಂದೆ ಮದನ್‌ ಪಟೇಲ್. ಅವರು ಕೂಡ ಮೂಲತಃ ತಮಟೆ ವಾದ್ಯ ನುಡಿಸುತ್ತಾ ಬಂದವರಾಗಿದ್ದರಿಂದ, ಆ ಪಾತ್ರಕ್ಕೆ ಅವರೇ ಸೂಕ್ತ ಅಂತ ಹೇಳಿ, ನಿರ್ದೇಶನಕ್ಕೆ ಇಳಿಯುತ್ತಿದ್ದೇನೆ’ ಎನ್ನುತ್ತಾರೆ.

‘ತಮಟೆ’ ಕಾದಂಬರಿಯ ಎಳೆಯನ್ನ ಇಟ್ಟುಕೊಂಟು ಅದನ್ನು ಚಿತ್ರಕ್ಕೆ ತಕ್ಕಂತೆ ಸ್ವಲ್ಪ ಬದಲಾವಣೆ ಮಾಡಿಕೊಂಡು ಅದೇ ಹೆಸರಿನಲ್ಲಿ ತೆರೆಮೇಲೆ ತರುತ್ತಿದ್ದೇವೆ. ‘ತಮಟೆ’ ಬಾರಿಸುವುದನ್ನೇ ನಂಬಿಕೊಂಡು ಬದುಕುತ್ತಿದ್ದ ಮುನಿಯನ ಬದುಕಿಗೆ ಆಧುನಿಕತೆ ಹೇಗೆಲ್ಲ ಸವಾಲಾಯಿತು ಎನ್ನುವುದನ್ನು ಈ ಚಿತ್ರ ಹೇಳುತ್ತದೆ ಎನ್ನುತ್ತದೆ ಚಿತ್ರತಂಡ.

Advertisement

ಇನ್ನು ‘ತಮಟೆ’ ಚಿತ್ರವನ್ನು ನಿರ್ಮಾಪಕಿ ವಂದನಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಮದನ್‌ ಪಟೇಲ್ ಅವರೊಂದಿಗೆ ಐಶ್ವರ್ಯಾ, ವಿನಯಾ ಪ್ರಸಾದ್‌, ಟೆನ್ನಿಸ್‌ ಕೃಷ್ಣ, ಲಕ್ಷ್ಮಣ್‌ ಶಿವಶಂಕರ್‌, ಚಂದು, ಗಿರೀಶ್‌ ಜತ್ತಿ, ರಮೇಶ್‌ ಭಟ್, ರಮೇಶ್‌ ಪಂಡಿತ್‌, ಮೋಹನ್‌ ಜುನೇಜಾ, ವಾಣಿಶ್ರೀ, ಸುಂದರಶ್ರೀ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣದಲ್ಲಿ ನಿರತವಾಗಿರುವ ‘ತಮಟೆ’ ಸದ್ದು ಇದೇ ಅಕ್ಟೋಬರ್‌ ತಿಂಗಳ ಅಂತ್ಯಕ್ಕೆ ಥಿಯೇಟರ್‌ನಲ್ಲಿ ಕೇಳಬಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next