ಸಾಗರ: ಮೂರು ತಿಂಗಳ ಹಿಂದೆ ತನ್ನ ತಾಯಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದ ರಾಂಚಿಯ ಮಗನೊಬ್ಬ ಪೋಷಕರನ್ನು ಸೇರುವಲ್ಲಿ ಯಾವ ಸಿನೆಮಾಕ್ಕೂ ಕಡಿಮೆಯಿಲ್ಲದ ಘಟನೆಗಳು ನಡೆದು ಕೊನೆಗೂ ಇಲ್ಲಿನ ಆಟೋ ಚಾಲಕರು ಯುವಕನ ಪೋಷಕರಿಗೆ ಅವರ ಹುಡುಗನನ್ನು ಒಪ್ಪಿಸಿದ ಘಟನೆ ಸಾಗರದಲ್ಲಿ ನಡೆದಿದೆ.
ತುಸು ಮಾನಸಿಕ ಅಸ್ವಸ್ಥನಂತೆ ಕಂಡುಬಂದಯುವಕನೊಬ್ಬ ಕರ್ಕಿಕೊಪ್ಪದಲ್ಲಿ ಆಟೋಚಾಲಕ ಶೇಖರ್ ಬಳಿ ಒಂದು ದೂರವಾಣಿ ಕರೆ ಮಾಡಿಕೊಡುವಂತೆ ಕೋರಿಕೊಂಡಿದ್ದಾನೆ. ಭಾಷೆ ತೊಡಕಿನ ಕಾರಣ ಶೇಖರ್ ತಮ್ಮ ಸ್ನೇಹಿತ ಸುಧಾಕರ ಮೂಲಕ ಫೋನ್ ಮಾಡಿಸಿದ್ದಾರೆ.ಆದರೆ ಆ ಕರೆ ಸ್ವೀಕಾರ ಆಗಲಿಲ್ಲ. ಈ ನಡುವೆ ತನ್ನ ಹೆಸರು ಆಶು ಕುಮಾರ್ ಎಂದು ತಿಳಿಸಿದ್ದಯುವಕ, ನಾನು ತಾಯಿಯ ಜತೆ ಜಗಳ ಮಾಡಿಕೊಂಡು ಗೂಡ್ಸ್ ರೈಲು ಹತ್ತಿ ಊರು ಬಿಟ್ಟು ಬಂದಿದ್ದೇನೆ. ತನ್ನ ಪರ್ಸ್, ಮೊಬೈಲ್ ಫೋನ್ ಕಳೆದುಕೊಂಡು 15 ದಿನಗಳಮೇಲಾಗಿದೆ ಎಂದಿದ್ದಾನೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಯುವಕನನ್ನು ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಬಳಿ ಶೇಖರ್ ಮತ್ತವರ ಗೆಳೆಯರು ಬಿಟ್ಟು ಬಂದಿದ್ದಾರೆ.
ಇಷ್ಟೇ ಆಗಿದ್ದರೆ ಈ ಘಟನೆ ಸಿನಿಮೀಯ ಆಗುತ್ತಿರಲಿಲ್ಲ. ಎರಡು ದಿನಗಳ ನಂತರರಾಂಚಿಯಿಂದ ಸುಧಾಕರ್‌ಗೆ ಕರೆಬಂದಿದೆ. ರಾಂಚಿಯಿಂದ ಕರೆ ಮಾಡಿದ ವ್ಯಕ್ತಿ ರೋಷನ್ ಕುಮಾರ್ ಎಂದು ತಮ್ಮ ಪರಿಚಯ ಹೇಳಿಕೊಂಡಿದ್ದಾರೆ. ತಕ್ಷಣ ಶೇಖರ್‌ಗೆ ಹಾದಿಯಲ್ಲಿ ಸಿಕ್ಕ ಯುವಕನ ನೆನಪಾಗಿದೆ. ಮನೆ ಬಿಟ್ಟು ಬಂದ ಯುವಕನ ವಿವರವನ್ನು ರೋಷನ್ ಅವರಿಗೆ ಶೇಖರ್ ನೀಡಿದ್ದಾರೆ. ಬೆಂಗಳೂರು ಪೊೂಲೀಸ್ ಮೂಲಕ ಹಾಗೂ ಜೋಗದ ಪೊಲೀಸ್ ಅಧಿಕಾರಿ ನಿರ್ಮಲ ಮತ್ತು ಶೇಖರ್ ಸ್ನೇಹಿತರಾದ ಜನಾರ್ದನ್, ಕರ್ಕಿಕೊಪ್ಪದ ಚಂದ್ರು, ದೇವೇಂದ್ರ, ಗಣಪತಿ ಮತ್ತಿತರರು ಯುವಕನನ್ನು ಕುಟುಂಬದವರಿಗೆ ಒಪ್ಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
ಮಂಗಳವಾರ ರಾಂಚಿಯಿಂದ ಆಶುಕುಮಾರ್ ಸಂಬಂಧಿ ಮನೋಜ್ ಎಂಬಾತ ಸಾಗರಕ್ಕೆ ಬಂದು ಶೇಖರ್‌ಮತ್ತಿತರರನ್ನು ಸಂಪರ್ಕಿಸಿದ್ದಾರೆ. ಮತ್ತೆ ಆಶು ಕುಮಾರ್ ಶೋಧ ಕಾರ್ಯ ನಡೆದಿದೆ.ಅಗ್ರಹಾರದ ವೃತ್ತದ ಎಳನೀರು ಅಂಗಡಿಯಸಮೀಪ ಯುವಕ ಇರುವುದನ್ನು ಕರ್ಕಿಕೊಪ್ಪದ ಚಂದ್ರು ಗಮನಿಸಿದ್ದಾರೆ. ಇದರಿಂದ ಯುವಕನನ್ನು ಕುಟುಂಬದವರಿಗೆ ಒಪ್ಪಿಸಲು ಸಾಧ್ಯವಾಗಿದೆ. ಶೇಖರ್ ಮತ್ತು ಸ್ನೇಹಿತರ ಬಳಗವನ್ನು ಜೋಗ ಠಾಣೆಯ ಸಬ್ ಇನಸ್ಪೆಕ್ಟರ್ ನಿರ್ಮಲ ಅವರು ಶಿವಮೊಗ್ಗದ ಎಸ್‌ಪಿ ಕಚೇರಿಗೆ ಗುರುವಾರ ಕರೆದೊಯ್ದು ಶಾಂತರಾಜ್ ಅವರಿಂದ ಅಭಿನಂದಿಸುವ ಕಾರ್ಯ ಸಹ ಮಾಡಿದ್ದಾರೆ. ಆಶುಕುಮಾರ್ ರಾಂಚಿ ಸೇರಿದ ಮಾಹಿತಿ ಸಿಕ್ಕಿದೆ.