Advertisement

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

10:35 AM Mar 15, 2024 | Team Udayavani |

ಕನ್ನಡ ಚಿತ್ರರಂಗಕ್ಕೆ ಬರುವ ಹೊಸಬರು ಹೊಸದನ್ನು ಪ್ರಯತ್ನಿಸುವ ಜೊತೆಗೆ ಒಂದು ಊರಿನ ಆಚಾರ-ವಿಚಾರ, ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ರೆಗ್ಯುಲರ್‌ ಕಮರ್ಷಿಯಲ್‌ ಶೈಲಿಯನ್ನು ಬ್ರೇಕ್‌ ಮಾಡಿ, ಹೊಸದೇನನ್ನೋ ಪ್ರೇಕ್ಷಕರಿಗೆ ನೀಡುವ ಪ್ರಯತ್ನವಂತೂ ಆಗುತ್ತಿದೆ. ಇಂತಹ ಪ್ರಯತ್ನಗಳು ಕಂಟೆಂಟ್‌ ಮೂಲಕವೂ ಗಮನ ಸೆಳೆಯುತ್ತಿವೆ. “ನಿಮ್ಮ ಊರನ್ನು ನಾವು ನೋಡುತ್ತೇವೆ, ನಮ್ಮ ಊರಿನ ಚೆಂದವನ್ನು ನೀವು ಆಸ್ವಾಧಿಸಿ’ ಎಂಬಂತೆ ಆಯಾ ನೆಲದ ಸಾಕಷ್ಟು ಸಿನಿಮಾಗಳು ತಯಾರಾಗುತ್ತಿರುವುದು ಖುಷಿಯ ವಿಚಾರವೇ. ಅದರಲ್ಲೂ “ಕಾಂತಾರ’ ಚಿತ್ರದ ನಂತರ ಇಂತಹ ಪ್ರಯತ್ನಗಳು ಹೆಚ್ಚಿವೆ ಎಂದರೆ ತಪ್ಪಲ್ಲ.

Advertisement

ಈ ವಾರ ಎರಡು ವಿಭಿನ್ನ ಸಂಸ್ಕೃತಿಯ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು ಉತ್ತರ ಕರ್ನಾಟಕ ಸೊಬಗನ್ನು ತುಂಬಿಕೊಂಡ “ಸೋಮು ಸೌಂಡ್‌ ಇಂಜಿನಿಯರ್‌’, ಮತ್ತೂಂದು ಮಲೆನಾಡ ಸಂಸ್ಕೃತಿಯನ್ನು ಇಡೀ ಕರ್ನಾಟಕಕ್ಕೆ ತೋರಿಸುವ ಇರಾದೆಯಿಂದ “ಕೆರೆಬೇಟೆ’ ಚಿತ್ರ ತಯಾರಾಗಿದೆ. ಎರಡೂ ಸಿನಿಮಾಗಳದ್ದು ವಿಭಿನ್ನ ಸಂಸ್ಕೃತಿ. ಆಯಾ ಮಣ್ಣಿನ ಸೊಬಗು, ಸೊಗಡಿನ ಜೊತೆಗೆ ತಯಾರಾದ ಈ ಚಿತ್ರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ..

ಸೋಮು ಅಧ್ಯಾಯ ಶುರು

ಕ ನ್ನಡ ಚಿತ್ರರಂಗಕ್ಕೆ ಬರುವ ಒಂದಷ್ಟು ಹೊಸ ನಿರ್ದೇಶಕರು ತಮ್ಮ ಸಿನಿಮಾಗಳ ಟೈಟಲ್‌ ಅನ್ನು ಭಿನ್ನವಾಗಿ ಇಡುವ ಮೂಲಕ ಆರಂಭದಿಂದಲೇ ಸಿನಿಮಾದ ಕುತೂಹಲಕ್ಕೆ ಕಾರಣವಾಗುತ್ತಾರೆ. ಈಗ ಅದೇ ರೀತಿ ವಿಭಿನ್ನ ಟೈಟಲ್‌ ಗಮನ ಸೆಳೆಯುತ್ತಿದೆ. ಅದು “ಸೋಮು ಸೌಂಡ್‌ ಇಂಜಿನಿಯರ್‌’. ಹೀಗೊಂದು ವಿಭಿನ್ನ ಟೈಟಲ್‌ ಸಿನಿಮಾ ಇಂದು ತೆರೆಕಾಣುತ್ತಿದೆ.

ಅಂದಹಾಗೆ, “ಸೋಮು ಸೌಂಡ್‌ ಇಂಜಿನಿಯರ್‌’ ಚಿತ್ರದ ಮೂಲಕ ಅಭಿ ನಿರ್ದೇಶಕರಾಗುತ್ತಿದ್ದಾರೆ. ನಿರ್ದೇಶಕ ಸೂರಿ ಜೊತೆ ಒಂಬತ್ತು ವರ್ಷಗಳ ಕಾಲ ಹಲವಾರು ಸಿನಿಮಾಗಳಿಗೆ ಕೆಲಸ ಮಾಡಿ, ಅನುಭವವಿರುವ ಅಭಿ ಈಗ “ಸೋಮು ಸೌಂಡ್‌ ಇಂಜಿನಿಯರ್‌’ ಮೂಲಕ ಹೊಸ ಕನಸು ಕಾಣುತ್ತಿದ್ದಾರೆ. ಅಂದಹಾಗೆ, ಇದು ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವಾಗಿದ್ದು, ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ಸಾಗುತ್ತದೆ. ಕಥೆಯಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ ಯಂತೆ. ಕ್ರಿಸ್ಟೋಫ‌ರ್‌ ಕಿಣಿ ಈ ಚಿತ್ರದ ನಿರ್ಮಾಪಕರು.

Advertisement

ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ತಮ್ಮ ವಿಭಿನ್ನ ಸಂಭಾಷಣೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಸಂಭಾಷಣೆಕಾರ ಎನಿಸಿರುವ ಮಾಸ್ತಿ ಅವರು “ಸೋಮು ಸೌಂಡ್‌ ಇಂಜಿನಿಯರ್‌’ಗೆ ಡೈಲಾಗ್‌ ಬರೆದಿದ್ದಾರೆ.  ದುನಿಯಾ ವಿಜಯ್‌ ನಿರ್ದೇಶನದ “ಸಲಗ’ ಸಿನಿಮಾದಲ್ಲಿ “ಕೆಂಡ’ ಪಾತ್ರದಲ್ಲಿ ಮಿಂಚಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕನಾಗಿ¨ªಾನೆ. ಬೆಳಗಾವಿ ಚೆಲುವೆ ನಿವಿಷ್ಕಾ ಪಾಟೀಲ್‌ ನಾಯಕಿ.

“ಸೋಮು ಸೌಂಡ್‌ ಇಂಜಿನಿಯರ್‌’ ಪಕ್ಕಾ ಹಳ್ಳಿ ಕಥೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.ಈಗಾಗಲೇ ಸಿನಿಮಾ ನೋಡಿರುವ ಜಯಣ್ಣ ಹಾಗೂ ಸೂರಿ ಅವರು ತುಂಬಾ ಖುಷಿ ಪಟ್ಟಿದ್ದಾರೆ. ಕ್ಷಮೆಯೇ ಶಾಂತಿಯ ಮೂಲ ಸೆಳೆ ಎಂಬುದನ್ನು ಹೇಳಲು ಹೊರಟಿದ್ದೇವೆ. ನಮ್ಮ ಸಿನಿಮಾದಲ್ಲಿ ಸೋಮು ಸೌಂಡ್‌ ಇಂಜಿನಿಯರ್‌ ಅಲ್ಲ. ಆದರೆ, ಆ ಟೈಟಲ್‌ ಯಾಕೆ ಇಟ್ಟಿದ್ದಾರೆ ಎಂಬುದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಪಾತ್ರಗಳು ನೈಜವಾಗಿ ಇರಲಿ ಎಂಬ ಕಾರಣಕ್ಕೆ ಸ್ಥಳೀಯ ಕಲಾವಿದರನ್ನೇ ಬಳಸಿದ್ದೇವೆ. ಉತ್ತರ ಕರ್ನಾಟಕದ ಸಿನಿಮಾ ಬಂದಿದೆ. ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳು ಹೆಚ್ಚಿವೆ’ ಎನ್ನುತ್ತಾರೆ ನಿರ್ದೇಶಕ ಅಭಿ.

ಮಲೆನಾಡ ಸಂಸ್ಕೃತಿ ಸುತ್ತ ಕೆರೆಬೇಟೆ

ಮಲೆನಾಡ ಸಂಸ್ಕೃತಿಯನ್ನು ಮೂಲವಾಗಿಟ್ಟುಕೊಂಡು ಬರುತ್ತಿರುವ ಚಿತ್ರ “ಕೆರೆಬೇಟೆ’.”ಜನಮನ ಸಿನಿಮಾಸ್‌’ ಬ್ಯಾನರ್‌ನಲ್ಲಿ ಜೈ ಶಂಕರ್‌ ಪಟೇಲ್‌ ನಿರ್ಮಾಣದಲ್ಲಿ ಮೂಡಿಬಂದಿರುವ “ಕೆರೆಬೇಟೆ’ ಸಿನಿಮಾಕ್ಕೆ ರಾಜಗುರು ಬಿ. ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗೌರಿ ಶಂಕರ್‌ ಈ ಚಿತ್ರದ ನಾಯಕ.

2008ರಿಂದ ಅನೇಕ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ಕೆಲಸ ಕಲಿತ ರಾಜ್‌ಗುರು ಅವರ ಚೊಚ್ಚಲ ಸಿನಿಮಾ “ಕೆರೆಬೇಟೆ’. ಈಗಾಗಲೇ ಪ್ರೀಮಿಯರ್‌ ಶೋ ನೋಡಿದವರಿಂದ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದು ಕಂಟೆಂಟ್‌ ಸಿನಿಮಾವಾಗಿ “ಕೆರೆಬೇಟೆ’ ಜನರನ್ನು ಸೆಳೆಯುವ ಲಕ್ಷಣ ಕಾಣುತ್ತಿದೆ.

ತಮ್ಮ ಸಿನಿಮಾ ಕುರಿತು ಮಾತನಾಡುವ ರಾಜ್‌ಗುರು, “ನಾನು ಮಲೆನಾಡಿನ ಹುಡುಗ. ಚಿಕ್ಕಂದಿನಿಂದ ನೋಡಿಕೊಂಡು ಬಂದ ಸಂಸ್ಕೃತಿಯನ್ನು ತೆರೆಮೇಲೆ ತರಬೇಕೆಂಬ ಕನಸಿತ್ತು. ನಮ್ಮ ಊರಿನ ಆಚರಣೆ, ಕೆರೆಬೇಟೆ ಎಲ್ಲವನ್ನು ನಾನು ಕ್ಯಾಮರಾ ಕಣ್ಣಲ್ಲಿ ನೋಡುತ್ತಿದ್ದೆ. ಆ ಸಮಯದ ಜನರ ಹಾವ-ಭಾವ ಬೇರೆ ತರಹ ಇರುತ್ತಿತ್ತು. ಅದನ್ನು ಈಗ ಸಿನಿಮಾ ಮಾಡಿದ್ದೇನೆ. ಪ್ರೀಮಿಯರ್‌ ಶೋಗಿಂತ ಮುಂಚೆ ಭಯ ಇತ್ತು. ಆದರೆ, ಈಗ ವಿಶ್ವಾಸ ಬಂದಿದೆ. ಸಿನಿಮಾ ನೋಡಿದವರಿಂದ ತುಂಬಾ ಒಳ್ಳೆಯ ರೆಸ್ಪಾನ್ಸ್‌ ಬಂದಿದೆ. ನಾನು ಕೂಡಾ ಬೇರೆ ಬೇರೆ ಭಾಷೆಗಳ ತುಂಬಾ ಕಾಡುವ ಸಿನಿಮಾಗಳನ್ನು ನೋಡುತ್ತಿದ್ದೆ. ನನಗೂ ಅಂತಹ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಪರಿಣಾಮವಾಗಿ ಇವತ್ತು “ಕೆರೆಬೇಟೆ’ ಮೂಡಿಬಂದಿದೆ’ ಎನ್ನುತ್ತಾರೆ ರಾಜ್‌ಗುರು.

“ಮಲೆನಾಡು ಭಾಗದಲ್ಲಿ “ಕೆರೆಬೇಟೆ’ ಎಂಬುದು ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ಮೀನು ಹಿಡಿಯುವ ಸಾಂಪ್ರದಾಯಿಕ ವಿಧಾನ. ಬೇಸಿಗೆಯ ಸಮಯದಲ್ಲಿ ಬತ್ತಿದ ಕೆರೆಯಲ್ಲಿ ಕೂಣಿ ಮತ್ತು ಜರಡಿ ಬಲೆ ಎಂಬ ಸಾಧನಗಳನ್ನು ಹಿಡಿದು ಸಾವಿರಾರು ಜನರು ನಡೆಸುವ “ಕೆರೆಬೇಟೆ’ ನೋಡಲು ರೋಚಕವಾಗಿರುತ್ತದೆ. ಅಲ್ಲಿ ಹುರುಪು, ಕೋಪ-ತಾಪ, ಹತಾಶೆ ಎಲ್ಲವೂ ಮೇಳೈಸಿರುತ್ತದೆ. ಅದನ್ನು ಅಷ್ಟೇ ರೋಚಕವಾಗಿ ಒಂದಷ್ಟು ವಿಷಯಗಳ ಮೂಲಕ “ಕೆರೆಬೇಟೆ’ ಸಿನಿಮಾದಲ್ಲೂ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ’ಎಂಬುದು ಅವರ ಮಾತು.

“ಮಲೆನಾಡು ಅಂದ್ರೆ ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಸಿನಿಮಾವಲ್ಲ ಎಂಬುದನ್ನು “ಕೆರೆಬೇಟೆ’ಯಲ್ಲಿ ಹೇಳುವ ಕೆಲಸ ಮಾಡಿದ್ದೇವೆ. ಇಲ್ಲಿ ಮಲೆನಾಡಿನ ಸಂಸ್ಕೃತಿ, ಜೀವನ ಶೈಲಿ ಎಲ್ಲವನ್ನೂ ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಇದು ಸಂಪೂರ್ಣ ಮಲೆನಾಡಿನ ಸೊಗಡು, ಸೊಬಗು ಎರಡೂ ಇರುವ ಸಿನಿಮಾ’ ಎನ್ನುತ್ತಾರೆ. ಸುಮಾರು 70 ದಿನಗಳ ಕಾಲ ಸೊರಬ, ಸಿಗಂದೂರು ಸುತ್ತಮುತ್ತ ಮಲೆನಾಡಿನ ಹೃದಯ ಭಾಗದಲ್ಲೇ ಸಂಪೂರ್ಣ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಕೀರ್ತನ್‌ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್‌ ಸಂಕಲನವಿದೆ. “ಕೆರೆಬೇಟೆ’ಯಲ್ಲಿ ಗೌರಿಶಂಕರ್‌ಗೆ ಬಿಂದು ಶಿವರಾಮ್‌ ನಾಯಕಿಯಾಗಿದ್ದು, ಗೋಪಾಲ ದೇಶಪಾಂಡೆ, ಹರಿಣಿ, ಸಂಪತ್‌ ಕುಮಾರ್‌, ರಘು ರಾಜನಂದ, ರಾಮದಾಸ್‌, ರಾಕೇಶ್‌ ಪೂಜಾರಿ, ವರ್ಧನ್‌ ತೀರ್ಥಹಳ್ಳಿ ಮತ್ತು ಮಲೆನಾಡಿನ ಅನೇಕ ಕಲಾವಿದರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರವಿ ಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next