Advertisement

Somu Sound Engineer: ಸೆಂಟಿಮೆಂಟ್‌ ಹಾದಿಯಲ್ಲಿ ಸೋಮು ಹೆಜ್ಜೆಗುರುತು

10:59 AM Mar 16, 2024 | Team Udayavani |

ಆತ ಸೋಮು. ಸಖತ್‌ ಖಡಕ್‌ ಹುಡುಗ. ಜಗಳ ಎಂದರೆ ಎಲ್ಲರಿಗಿಂತ ಮುಂದು.. ಆದರೆ ಕೆಟ್ಟವ ಅಲ್ಲ… ಈತನಿಗೊಂದು ಒಳ್ಳೆಯ ಫ್ಯಾಮಿಲಿ ಇದೆ. ಊರೇ ಕೊಂಡಾಡುವ ದೇವರಂಥ ಅಪ್ಪ, ಮಗನ ಬಗ್ಗೆ ಕಾಳಜಿ ವಹಿಸುವ ತಾಯಿ, ಅಕ್ಕ… ಇಂತಹ ಹುಡುಗ ಎದೆಯಲ್ಲೊಂದು ಪ್ರೀತಿಯರಸಿಯೂ ಇದ್ದಾಳೆ… ಹೀಗೆ ಎಲ್ಲವೂ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎನ್ನುವಷ್ಟರಲ್ಲಿ “ದಾರಿ’ಗೊಂದು “ಲಾರಿ’ ಅಡ್ಡಬರುತ್ತದೆ. ಅಲ್ಲಿಂದ ಬದುಕು ಬದಲಾಗುತ್ತದೆ.. ಅಷ್ಟಕ್ಕೂ ಆ ದಾರಿ-ಲಾರಿ ಕಥೆ ಏನು ಎಂಬುದನ್ನು ನೀವು ತೆರೆಮೇಲೆಯೇ ನೋಡಬೇಕು.

Advertisement

ಈ ವಾರ ತೆರೆಕಂಡಿರುವ “ಸೋಮು ಸೌಂಡ್‌ ಇಂಜಿನಿಯರ್‌’ ಚಿತ್ರ ಒಬ್ಬ ಯುವಕನ ಸುತ್ತ ನಡೆಯುವ ಕಥೆಯನ್ನು ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಲ್ಲಿ ಸೋಮು ಎಂಬ ಯುವಕ ಹಾಗೂ ಆತನ ಸುತ್ತಲೂ ನಡೆಯುವ ಘಟನಾವಳಿಗಳನ್ನಿಟ್ಟು ಕೊಂಡು ನಿರ್ದೇಶಕ ಅಭಿ ಈ ಸಿನಿಮಾ ಮಾಡಿದ್ದಾರೆ. ಅಭಿ ಇಡೀ ಸಿನಿಮಾವನ್ನು ನೈಜವಾಗಿ ಹಾಗೂ ಒಂದು ಭಾಗದ ಕಥೆಯಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಸಿನಿಮಾ ಉತ್ತರ ಕರ್ನಾಟಕದ ಹಳ್ಳಿಗಳ ಸುತ್ತವೇ ನಡೆದಿದ್ದು, ಸಿಟಿ ಸಹವಾಸದಿಂದ ಮುಕ್ತ ಮುಕ್ತ… ಇಲ್ಲಿ ಕಥೆಗಿಂತ ಹೆಚ್ಚಾಗಿ ಒಂದಷ್ಟು ಸನ್ನಿವೇಶಗಳನ್ನಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಈ ಹಾದಿಯಲ್ಲಿ ಪ್ರೀತಿ, ದ್ವೇಷ, ಅಹಂಕಾರ, ಉಡಾಫೆ ಎಲ್ಲವೂ ಬಂದು ಹೋಗುತ್ತದೆ. ಆದರೆ, ಅಂತಿಮವಾಗಿ ಪ್ರೇಕ್ಷಕರನ್ನು ಕಾಡುವುದು ಸಿನಿಮಾದಲ್ಲಿ ಸೆಂಟಿಮೆಂಟ್‌ ಅಂಶಗಳು. ಇಲ್ಲಿ ಅಪ್ಪ-ಮಗ, ತಾಯಿ-ಮಗ, ಅಕ್ಕ-ತಮ್ಮ, ಪ್ರೀತಿಸಿದ ಹುಡುಗ-ಹುಡುಗಿ… ಹೀಗೆ ಹಲವು ಸಂಬಂಧಗಳು ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಹೆಚ್ಚು ಗಂಭೀರವಾಗಿದ್ದು, ಕಾಡುವ ಅಂಶಗಳೊಂದಿಗೆ ಸಾಗುತ್ತದೆ. ಬೇರೆ ಭಾಷೆಯ “ನೈಜತೆ’ಯನ್ನು ಬಾಯ್ತುಂಬ ಹೊಗಳುವ ಮಂದಿಗೆ “ಸೋಮ’ನಲ್ಲಿನ ನೈಜತೆ ಇಷ್ಟವಾಗಬಹುದು. ಇಲ್ಲಿನ ಸಂಭಾಷಣೆ ಕೂಡಾ ನೈಜ ಹಾಗೂ ತೂಕವಾಗಿದ್ದು, ಸಂಭಾಷಣೆಕಾರ ಮಾಸ್ತಿ ಬರವಣಿಗೆ ಎದ್ದು ಕಾಣುತ್ತದೆ..

ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಶ್ರೇಷ್ಠ ನೈಜವಾಗಿ ನಟಿಸಲು ಪ್ರಯತ್ನಿಸಿದ್ದಾರೆ. ಸೆಂಟಿಮೆಂಟ್‌ ದೃಶ್ಯಗಳಿಗಿಂತ ಇತರ ರಗಡ್‌ ದೃಶ್ಯಗಳಲ್ಲಿ ಅವರು ಗಮನ ಸೆಳೆಯುತ್ತಾರೆ. ನಾಯಕಿ ನಿವಿಷ್ಕಾಗೆ ಇಲ್ಲಿ ಹೆಚ್ಚೇನು ಕೆಲಸವಿಲ್ಲ. ಉಳಿದಂತೆ ಜಹಾಂಗೀರ್‌, ಅಪೂರ್ವ,

ಯಶ್‌ ಶೆಟ್ಟಿ ಸೇರಿದಂತೆ ಇತರರು ನಟಿಸಿದ್ದಾರೆ. ಚರಣ್‌ ರಾಜ್‌ ಸಂಗೀತದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next