ಅಲ್ಲೆಲ್ಲೋ ಲಂಡನ್ನಿನಲ್ಲಿ ಕಣ್ಮುಚ್ಚಿದ ತನ್ನ ಮಗಳ ನೆನಪಿನಲ್ಲಿ ಈ ತಂದೆ ಒಂದು ಶಾಲೆ ತೆರೆದರು. ದಾವಣಗೆರೆಯ ರಶ್ಮಿ ಹೆಣ್ಣುಮಕ್ಕಳ ವಸತಿಶಾಲೆ, ಹೆಣ್ಣು ಹೆತ್ತ ಬಡವರ ಪಾಲಿಗೊಂದು ಆಶಾಕಿರಣ…
‘ಪುತ್ರ ಶೋಕ ನಿರಂತರ’ ಎಂಬ ಮಾತಿದೆ. ಅಂದರೆ, ಕರುಳ ಕುಡಿಗಳ ಸಾವಿನ ನೋವು ಹೆತ್ತವರನ್ನು ಸದಾ ಕಾಡುತ್ತದೆ ಎಂದರ್ಥ. ಲಂಡನ್‌ನಲ್ಲಿರುವ ರಶ್ಮಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಮಾಲೀಕರಾದ ಪಿ. ಸುರೇಂದ್ರ ಅವರೂ ಆ ನೋವಿಗೆ ತುತ್ತಾದರು. 1993ರಲ್ಲಿ ಅವರ ಮುದ್ದಿನ ಮಗಳು, 21ರ ಹರೆಯದ ರಶ್ಮಿ ರಸ್ತೆ ಅಪಘಾತದಲ್ಲಿ ಮಡಿದಳು. ಇದ್ದಕ್ಕಿದ್ದಂತೆ ಬಂದೆರಗಿದ ನೋವನ್ನು ಒಪ್ಪಿಕೊಳ್ಳಲು ಬಹಳಷ್ಟು ಸಮಯ ಬೇಕಾಯ್ತು. ವರ್ಷಗಳು ಉರುಳಿದರೂ, ಹೃದಯದ ನೋವು ಮಾಸಲಿಲ್ಲ. ಮಗಳ ನೆನಪಿನಲ್ಲಿ ಏನಾದರೂ ಒಳ್ಳೇ ಕೆಲಸ ಮಾಡಬೇಕು, ಆ ಮೂಲಕವಾದರೂ ಅವಳನ್ನು ಜೊತೆಗಿರಿಸಿಕೊಳ್ಳಬೇಕು ಅಂತ ಸುರೇಂದ್ರ ಅವರು ನಿರ್ಧರಿಸಿದರು. ಹಾಗೆ ಕಣ್ತೆರೆದಿದ್ದೇ, ದಾವಣಗೆರೆಯ ‘ರಶ್ಮಿ ಹೆಣ್ಣುಮಕ್ಕಳ ವಸತಿ ಶಾಲೆ’. 2000ನೇ ಇಸವಿಯಲ್ಲಿ ಪ್ರಾರಂಭವಾದ ಈ ಶಾಲೆ, ಬಡ ಮತ್ತು ನಿರ್ಗತಿಕ ಹೆಣ್ಣುಮಕ್ಕಳಿಗೆ ಉಚಿತ ವಿದ್ಯೆ- ವಸತಿ- ಊಟವನ್ನು ಒದಗಿಸುತ್ತಿದೆ. ಮೊದಲ ವರ್ಷ 25 ಹೆಣ್ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಿಕೊಳ್ಳಲಾಯ್ತು. ಮುಂದಿನ ವರ್ಷ ಮತ್ತೆ 25 ಹುಡುಗಿಯರು ಸೇರಿದರು.
ಹೀಗೆ ಪ್ರತಿ ವರ್ಷ ಒಂದೊಂದು ತರಗತಿಯನ್ನು ಸೇರಿಸಿಕೊಳ್ಳುತ್ತಾ ಬೆಳೆದ ಈ ಶಾಲೆಯಲ್ಲಿ ಈಗ 250 ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯರು ಎಲ್ಲ ವಿಷಯದಲ್ಲೂ ಬಹಳ ಚುರುಕು. ಓದು, ಆಟೋಟ, ಸಾಂಸ್ಕೃತಿಕ ಚಟುವಟಿಕೆ, ಕಂಪ್ಯೂಟರ್ ಬಳಕೆ, ಯೋಗ, ಧ್ಯಾನ… ಹೀಗೆ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಫಿಟ್ ಇದ್ದಾರೆ. ಶಾಲೆಯ ಹಿಂದಿರುವ ಕೈ ತೋಟದಲ್ಲಿ ಮಕ್ಕಳೇ ಹಣ್ಣು- ತರಕಾರಿಗಳನ್ನು ಬೆಳೆಯುತ್ತಾರೆ. ಅಲ್ಲಿನ ಉತ್ಪನ್ನಗಳೇ ಹಾಸ್ಟೆಲ್ನ ಅಡುಗೆ ಕೋಣೆಯಲ್ಲಿ ಆಹಾರವಾಗಿ, ಹುಡುಗಿಯರ ತಟ್ಟೆ ಸೇರುತ್ತದೆ. ಆರೋಗ್ಯ ತಪಾಸಣೆ ನಡೆಸುತ್ತಾರೆ. ಇಲ್ಲಿನ ಶಿಕ್ಷಕಿಯರೂ, ಮಕ್ಕಳ ಜೊತೆಗೆ ಹಾಸ್ಟೆಲ್ನಲ್ಲಿದ್ದು ಅವರ ಬೇಕು- ಬೇಡಗಳನ್ನು ನೋಡಿಕೊಳ್ಳುತ್ತಾರೆ. ಹತ್ತನೇ ತರಗತಿ ಮುಗಿದ ನಂತರ, ನಿಮ್ಮ ದಾರಿ ನಿಮ್ಮದು ಅಂತ ಹುಡುಗಿಯರನ್ನು ಒಂಟಿ ಮಾಡುವುದಿಲ್ಲ ಈ ಶಾಲೆ. ಪಾಲಕರಿಲ್ಲದ ಹುಡುಗಿಯರ ಮುಂದಿನ ಶಿಕ್ಷಣಕ್ಕೂ ಶಾಲೆಯೇ ವ್ಯವಸ್ಥೆ ಮಾಡುತ್ತದೆ.
ದಾವಣಗೆರೆಯ ಕೆಲವು ಕಾಲೇಜುಗಳು, ಈ ಶಾಲೆಯ ಹುಡುಗಿಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತವೆ. ಇಲ್ಲಿ ಓದಿದ 6 ಹುಡುಗಿಯರು ಎಂಜಿನಿಯರ್ ಆಗಿದ್ದರೆ, ಕೆಲವರು ಬ್ಯಾಂಕ್ ನೌಕರಿ ಹಿಡಿದಿದ್ದಾರೆ. ಬಿಎಸ್‌ಸಿ ಅಗ್ರಿ, ನರ್ಸಿಂಗ್‌ನಂಥ ಕೋರ್ಸ್ ಮಾಡಿ, ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಡಾ. ಪರ್ವತಪ್ಪ (ಸುರೇಂದ್ರ ಅವರ ತಂದೆ) ಮೆಮೊರಿಯಲ್ ಟ್ರಸ್ಟ್‌ನಡಿಯಲ್ಲಿ ಈ ಶಾಲೆ ನಡೆಯುತ್ತಿದೆ. ಸುರೇಂದ್ರ ಅವರ ಸೋದರ ಡಾ. ನಾಗರಾಜ್ ಮತ್ತು ಅವರ ಪತ್ನಿ ಪ್ರೇಮಾ ನಾಗರಾಜ್, ಶಾಲೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.