ಕೋಲ್ಕತಾ/ಹೊಸದಿಲ್ಲಿ: “ಭದ್ರಲೋಕ್ ಕಮ್ಯೂನಿಸ್ಟ್’, “ಹೆಡ್‌ಮಾಸ್ತರ್’ ಎಂದೇ ಖ್ಯಾತರಾಗಿದ್ದ ಸೋಮನಾಥ ಚಟರ್ಜಿ ಸೋಮವಾರ ಬೆಳಗ್ಗೆ ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ. 89 ವರ್ಷ ವಯಸ್ಸಿನ ಸೋಮನಾಥ ಚಟರ್ಜಿ ಅವರಿಗೆ ರವಿವಾರ ಲಘು ಹೃದಯಾಘಾತವಾಗಿತ್ತು. ಸೋಮ ವಾರ ಬೆಳಗ್ಗೆ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಹತ್ತು ಬಾರಿ ಸಂಸದರಾಗಿದ್ದ ಚಟರ್ಜಿ ಅವರು, ಪತ್ನಿ ರೇಣು, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪ. ಬಂಗಾಲ ವಿಧಾನಸಭೆಗೆ ಒಯ್ದು ಸರ ಕಾರಿ ಗೌರವ ಸಲ್ಲಿಸಿದ ಬಳಿಕ ಅವರ ನಿವಾಸಕ್ಕೆ ಒಯ್ಯಲಾಯಿತು. ಇದಾದ ಬಳಿಕ ಎಸ್‌ಎಸ್‌ಕೆಎನ್ ಆಸ್ಪತ್ರೆಗೆ ದೇಹ ದಾನ ಮಾಡಲಾಯಿತು.
ತಮ್ಮ ಜೀವನದುದ್ದಕ್ಕೂ ಎಡಪಂಥೀಯ ಸಿದ್ಧಾಂತ ರೂಢಿಸಿಕೊಂಡಿದ್ದ ಸೋಮನಾಥ ಚಟರ್ಜಿ ಅವರು ಜ್ಯೋತಿ ಬಸು ಒಡನಾಡಿಯಾಗಿದ್ದರು. ದೇಶದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಎಡಪಕ್ಷಗಳ ಕಡೆಯಿಂದ ಲೋಕಸಭೆಗೆ ಸ್ಪೀಕರ್ ಆದವರು ಚಟರ್ಜಿ. ಈ ಸಂದರ್ಭದಲ್ಲಿ ಯಾವುದೇ ಪಕ್ಷದ ಕೈಗೊಂಬೆಯಾಗದೆ ಕಾರ್ಯ ನಿರ್ವಹಿಸಿದ್ದರಿಂದ ತಮ್ಮ ಪಕ್ಷದಿಂದಲೇ ಉಚ್ಛಾಟನೆಗೂ ಒಳಗಾಗಬೇಕಾಯಿತು.
“ಸಂಸದೀಯ ಪ್ರಜಾಪ್ರಭುತ್ವವನ್ನು ಚಟರ್ಜಿ ಶ್ರೀಮಂತಗೊಳಿಸಿದ್ದರು. ಬಡವರು ಮತ್ತು ಸಮಾಜದ ಕಟ್ಟಕಡೆಯವರಿಗಾಗಿ ಧ್ವನಿ ಎತ್ತಿದ್ದರು’ ಎಂದು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಅವರು ಕೇವಲ ವ್ಯಕ್ತಿಯಾಗಿರಲಿಲ್ಲ, ಬದಲಾಗಿ ಸಂಸ್ಥೆಯಂತಿದ್ದರು. ಪಕ್ಷಭೇದವಿಲ್ಲದೆ ಎಲ್ಲರ ಕಡೆಯಿಂದಲೂ ಗೌರವ ಪಡೆಯುವಂಥ ವ್ಯಕ್ತಿತ್ವ ಇವರದ್ದಾಗಿತ್ತು. ಲೋಕಸಭೆ ಸ್ಪೀಕರ್ ಹುದ್ದೆಯ ಘನತೆಯನ್ನು ಎತ್ತಿಹಿಡಿದರು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದಾರೆ.
ಲೋಕಸಭೆಯ ಹಾಲಿ ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎಲ್.ಕೆ. ಆಡ್ವಾಣಿ, ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಕೆ.ಎನ್. ತ್ರಿಪಾಠಿ, ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್, ಅರುಣ್ ಜೇತ್ಲಿ, ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್, ಪಿ. ಚಿದಂಬರಂ, ಶರದ್ ಪವಾರ್ ಸಹಿತ ಎಲ್ಲ ಪಕ್ಷಗಳ ನಾಯಕರು ಚಟರ್ಜಿ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ವಾಪಸ್ ಸೇರಿಸಿಕೊಳ್ಳದ್ದಕ್ಕೆ ಸಿಪಿಎಂ ವಿಷಾದ
2004-09ರ ವರೆಗೆ ಚಟರ್ಜಿ ಲೋಕಸಭೆಯ ಸ್ಪೀಕರ್ ಆಗಿದ್ದರು. ಎಡಪಕ್ಷಗಳು ಯುಪಿಎ-1 ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ತೆಗೆದು ಕೊಂಡಿದ್ದವು. ಆಗ ಇವರಿಗೂ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರು ನಿರಾಕರಿಸಿದ್ದರು. ಸಿಪಿಎಂ ಇವರನ್ನು ಪಕ್ಷದಿಂದಲೇ ಉಚ್ಚಾಟಿಸಿತ್ತು. ಈಗ ಅವರ ಸಾವಿನ ಬಳಿಕ ಸಿಪಿಎಂ ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ.