ಕ್ಯಾಂಪಸ್ಸಿನ ಸುತ್ತ ನಿನ್ನ ಕೈಡಿದು ನಡೆಯುತ್ತಾ, ನನ್ನ ಭಾವನೆಗಳನ್ನ, ಕನಸುಗಳನ್ನ, ಪ್ರೀತಿಯ ಪರದಾಟವನ್ನು ನಿನ್ನ ಮುಂದೆ ಬಿಚ್ಚಿಡಬೇಕೆನಿಸುತ್ತದೆ. ಆದರೆ ಧೈರ್ಯ ಸಾಲುತ್ತಿಲ್ಲ.
ಹಾಯ್ ಪೋರಿ…
ಅದೆಷ್ಟು ಸತಾಯಿಸ್ತೀಯಾ, ಒಪ್ಪಿಕೊಳ್ಳಬಾರದಾ ನನ್ನನ್ನ? ನೀನು, “ಒಲವೇ ಮಂದಾರ’ ಸಿನಿಮಾ ನೋಡಿದ್ದೀಯಾ? ಅದರಲ್ಲಿ, ಹೀರೋ ತಾನು ಪ್ರೀತಿಸಿದ ಹುಡುಗಿಯನ್ನು ಹುಡುಕಿಕೊಂಡು, ಕರ್ನಾಟಕದಿಂದ ಅಸ್ಸಾಂಗೆ ಹೋಗುತ್ತಾನೆ. ಅದೂ ಬರಿಗೈಯಲ್ಲಿ, ಓಡುತ್ತಲೇ ಅಲ್ಲಿಗೆ ತಲುಪುತ್ತಾನೆ ಗೊತ್ತಾ? ನನ್ನ ಪ್ರೀತಿ ಕೂಡಾ ಹೆಚ್ಚಾ ಕಡಿಮೆ ಆ ಸಿನಿಮಾವನ್ನೇ ಹೋಲುತ್ತೆ.
ಬಾಗಲಕೋಟೆಯಿಂದ ಶೈಕ್ಷಣಿಕ ಪ್ರವಾಸಕ್ಕೆಂದು ಮೈಸೂರಿಗೆ ಬಂದಿದ್ದಾಗ ನಿನ್ನನ್ನು ಮೊದಲು ನೋಡಿದ್ದು. ನಿಂಗೆ ನೆನಪಿದೆಯೋ ಇಲ್ಲವೋ, ನಂಗಂತೂ ನೆನಪಿದೆ. ನಿನ್ನ ತಂದೆಯ ಕಿರುಬೆರಳ ಹಿಡಿದು ಅಂಬಾವಿಲಾಸ ಅರಮನೆಯ ಮುಂದೆ ನಿಂತಿದ್ದೆ ನೀನು. ಅದನ್ನು ಕಂಡು, ಅಯ್ಯೋ, ಮೈಸೂರಿನ ಒಡೆಯರ ಮಗಳಿಗೆ ಏನಾಗಿದೆ? ಹೀಗೆ ಹೊರಗಡೆ ಅಲೆದಾಡುತ್ತಿದ್ದಾಳಲ್ಲಾ ಅನ್ನಿಸಿತ್ತು. ನಿನ್ನನ್ನು ಮಾತಾಡಿಸುವ ಆಸೆಯೂ ಆಗಿತ್ತು. ಹನಮಂತನ ಬಾಲದಂತಿದ್ದ ಸರತಿ ಸಾಲಿನಲ್ಲಿ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದ ಮೇಡಂ ಕಣ್ಣಿನಿಂದ ತಪ್ಪಿಸಿಕೊಂಡು, ನಿನ್ನೆಡೆಗೆ ಬರುವುದು ಸುಲಭವಾಗಿರಲಿಲ್ಲ. ಕೊನೆಗೂ ಅದು ಹೇಗೋ ತಪ್ಪಿಸಿಕೊಂಡು ನಿನ್ನ ಮುಂದೆ ನಿಂತಾಗ, ಮೂಗು ಮುರಿದು ಹೋಗಿಬಿಟ್ಟೆಯಲ್ಲಾ? ಅಬ್ಟಾ ನಿನ್ನ ಸೊಕ್ಕೇ, ಹೋಗುವವಳು ನನ್ನ ಹೃದಯವನ್ನೂ ಜೊತೆಗೇ ಕದ್ದೊಯ್ದಿದ್ದೆ. ನಾನೆಂಥ ಭಂಡ ಅಂದರೆ, ಅವತ್ತು ನಿಮ್ಮ ಅಪ್ಪನನ್ನೇ ಮಾತಾಡಿಸಿ, ನಿನ್ನ ಅಡ್ರೆಸ್ ಪಡೆದುಕೊಂಡೆ!
ಆನಂತರದಲ್ಲಿ ಅದೇ ಭಂಡ ಧೈರ್ಯದೊಂದಿಗೆ, ನಿಮ್ಮಪ್ಪನ ಹೆಸರಿಗೇ ನೂರಾರು ಪ್ರೇಮಪತ್ರಗಳನ್ನು ಕಳಿಸಿದ್ದೀನಿ. ಅದ್ಯಾವುದಕ್ಕೂ ಉತ್ತರ ಬರದೆ, ಎರಡು ವರ್ಷದ ಪಿಯುಸಿ ಕೂಡ ಮುಗಿಯಿತು. ಆದರೆ, ನಿನ್ನ ಹುಡುಕಾಟ ಮಾತ್ರ ಮುಗಿಯಲಿಲ್ಲ. ಗೂಗಲ್, ಫೇಸ್‌ಬುಕ್, ಕಾಲೇಜ್, ನಿಮ್ಮೂರಿನ ಗಲ್ಲಿ.. ಹೀಗೆ ಎಲ್ಲ ಕಡೆ ಹುಡುಕಿದ್ದೇನೆ. ಅಷ್ಟರಲ್ಲಿ ಡಿಗ್ರಿಯೂ ಮುಗಿಯಿತು. ತಲೆ ತುಂಬಾ ಬರೀ ನಿನ್ನದೇ ಯೋಚನೆ. ಕೊನೆಗೂ ಒಂದು ದಿನ ನೀನು ಎಲ್ಲಿದ್ದೀಯಾ, ಏನು ಮಾಡ್ತಾ ಇದ್ದೀಯ ಅನ್ನೋದು ಪತ್ತೆಯಾಯ್ತು. ನೀನು ಸ್ನಾತಕೋತ್ತರ ಪದವಿ ಓದಲು ಮೈಸೂರು ವಿ.ವಿ. ಗೆ ಅರ್ಜಿ ಸಲ್ಲಿಸಿದ್ದೀಯಾ ಅಂತ ಗೊತ್ತಾಗಿ, ತಕ್ಷಣ ನಾನೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಬಿಟ್ಟೆ. ಹೇಗಾದ್ರೂ ಮಾಡಿ ಸೀಟು ಗಿಟ್ಟಿಸಿಕೊಳ್ಳಬೇಕೆಂದುಕೊಂಡ ಈ ದಡ್ಡ ಹುಡುಗನಿಗೆ ಐದನೇ ರ್‍ಯಾಂಕ್ ಬಂದಿದ್ದಕ್ಕೆ ನಿನ್ನ ಮೇಲಿನ ಪ್ರೀತಿಯೇ ಕಾರಣ.
5 ವರ್ಷದ ನಂತರ ನಿನ್ನನ್ನು ಹುಡುಕಿಕೊಂಡು ಮೈಸೂರಿಗೆ ಬಂದೆ. ಇಲ್ಲಿಯೇ ಕಾಲೇಜಿಗೂ ಸೇರಿದೆ. ನಿನ್ನ ಸ್ನೇಹವನ್ನೂ ಪಡೆದುಕೊಂಡೆ. ಆದರೆ, ಪ್ರೀತಿ ನಿವೇದನೆ ಮಾತ್ರ ಇದುವರೆಗೂ ಸಾಧ್ಯವಾಗಿಲ್ಲ. ಕ್ಯಾಂಪಸ್ಸಿನ ಸುತ್ತ ನಿನ್ನ ಕೈಡಿದು ನಡೆಯುತ್ತಾ, ನನ್ನ ಭಾವನೆಗಳನ್ನ, ಕನಸುಗಳನ್ನ, ಪ್ರೀತಿಯ ಪರದಾಟವನ್ನು ನಿನ್ನ ಮುಂದೆ ಬಿಚ್ಚಿಡಬೇಕೆನಿಸುತ್ತದೆ. ಆದರೆ ಧೈರ್ಯ ಸಾಲುತ್ತಿಲ್ಲ. ಏನ್ಮಾಡಲಿ, ನೀನೇ ಹೇಳು?
ಇಂತಿ ನಿನ್ನ ಹುಡುಗ
– ಸುನೀಲ ಗದೆಪ್ಪಗೋಳ