ಮಂಗಳೂರು: ರಾಜಕೀಯ ರಂಗದಲ್ಲಿ ಪಕ್ಷಾಂತರ ಪ್ರಸಂಗಗಳು ಸಾಮಾನ್ಯ. ಕೆಲವು ಪ್ರಸಂಗಗಳು ಆಗಿನ ಸರಕಾರಗಳ ಪತನಕ್ಕೆ ಕಾರಣವಾಗುವಷ್ಟು ಪ್ರಭಾವಶಾಲಿಗಳಾಗಿದ್ದರೆ, ಇನ್ನು ಕೆಲವು ಹಾಸ್ಯಾಸ್ಪದ ಸಂಗತಿಗಳಿಗೂ ಕಾರಣವಾಗಿ ಬಿಡುತ್ತವೆ. ವ್ಯಕ್ತಿಗತ ಅಥವಾ ಸಾಮೂಹಿಕ ಪಕ್ಷಾಂತರ ಗಳೆಲ್ಲ ಚುನಾವಣೆಗಳ ಸಂದರ್ಭದಲ್ಲೇ ನಡೆಯುವುದು ಉಲ್ಲೇಖನೀಯ.
ಹಾಗೆ ನೋಡಿದರೆ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲೂ ಕೆಲವು ನಾಯಕರು ಪಕ್ಷಾಂತರ ಮಾಡಿದ್ದಿದೆ. ಆದರೆ ಇದು ವ್ಯಕ್ತಿಗತವಾದ ಬದಲಾವಣೆಗಳಿಗಷ್ಟೇ ಸೀಮಿತವಾಗಿದೆ. ಇದರಿಂದ ಸರಕಾರ ಪತನವಾಗುವ ಅಥವಾ ಸಾರ್ವತ್ರಿಕ ಚುನಾ ವಣೆಯ ಫಲಿತಾಂಶ ಏರುಪೇರಾಗುವ ಯಾವುದೇ ‘ತಲ್ಲಣ’ ಉಂಟಾಗಿಲ್ಲ.
ಜಿಲ್ಲೆಗೆ 1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ 2018ರ ವರೆಗೆ 66 ವರ್ಷಗಳ ಚುನಾವಣಾ ಇತಿಹಾಸವಿದೆ. ಇಲ್ಲಿ ಶಾಸಕರು ಅಥವಾ ಮಾಜಿ ಶಾಸಕರು (ಸಾಂದರ್ಭಿಕ ಸಚಿವರ ಸಹಿತ) ನಡೆಸಿರುವ ಪಕ್ಷಾಂತರಗಳ ವಿಶ್ಲೇಷಣೆಯು ಸಾಕಷ್ಟು ಕುತೂಹಲಕಾರಿಯಾದ ಸಂಗತಿಗಳನ್ನು ನೀಡುತ್ತದೆ. ಈ ಪೈಕಿ ಹಲವರು ‘ನನ್ನದು ಪಕ್ಷಾಂತರವಲ್ಲ. ನೀತಿ ಸಿದ್ಧಾಂತಗಳಿಗೆ ಅನುಗುಣವಾದ ಬದಲಾವಣೆಯ ನಿರ್ಧಾರ’ ಎಂಬ ಸಮಜಾಯಿಷಿಯನ್ನು
ಮಾಧ್ಯಮಗಳಿಗೆ ನೀಡಿದ್ದೂ ಇದೆ!
ವಿಧಾನಸಭೆಯ ಸದಸ್ಯರ ವ್ಯಾಪ್ತಿ ಯನ್ನು ಪರಿಗಣಿಸಿದರೆ ಬೆಳ್ತಂಗಡಿಯಲ್ಲಿ ಕೆ. ವಸಂತ ಬಂಗೇರ ಅವರು ಜನತಾ ಪಕ್ಷ- ಬಿಜೆಪಿ- ಕಾಂಗ್ರೆಸ್‌ನಿಂದ, ಶಕುಂತಳಾ ಶೆಟ್ಟಿ ಅವರು ಬಿಜೆಪಿ- ಕಾಂಗ್ರೆಸ್‌ನಿಂದ, ಸುರತ್ಕಲ್‌ನ ಬಿ. ಸುಬ್ಬಯ್ಯ ಶೆಟ್ಟಿ ಅವರು ಕಾಂಗ್ರೆಸ್- ಜೆಡಿಎಸ್‌ನಿಂದ, ಬೆಳ್ತಂಗಡಿಯ ಗಂಗಾಧರ ಗೌಡ ಅವರು ಕಾಂಗ್ರೆಸ್- ಬಿಜೆಪಿಯಿಂದ, ಬೈಂದೂರಿನ ಐ. ಎಂ. ಜಯರಾಮ ಶೆಟ್ಟಿ ಅವರು ಬಿಜೆಪಿ- ಜೆಡಿಯು, ಸುಳ್ಯದ ಕೆ. ಕುಶಲ ಕಾಂಗ್ರೆಸ್- ದಳದಿಂದ; ಬಾಕಿಲ ಹುಕ್ರಪ್ಪ ಬಿಜೆಪಿ ಯಿಂದ ಜನತಾ-ಕೆಸಿಪಿಯಿಂದ ಸ್ಪರ್ಧಿಸಿದವರು. ಮೂಡಬಿದಿರೆಯ ಕೆ. ಅಮರನಾಥ ಶೆಟ್ಟಿ ಅವರು ಜನತಾ ಪರಿವಾರದ ಪಕ್ಷಗಳಿಂದಲೇ ಸ್ಪರ್ಧಿಸಿದರು. ಕಾಪುವಿನ ವಸಂತ ಸಾಲ್ಯಾನ್ ಕಾಂಗ್ರೆಸ್- ದಳ- ಬಿಜೆಪಿ ಸೇರಿದವರು.
ಇನ್ನು ಪಕ್ಷೇತರ- ಪಕ್ಷ ಸಹಿತ ಎಂಬ ಬದಲಾವಣೆಯೂ ಜಿಲ್ಲೆಯಲ್ಲಿದೆ. ಬ್ರಹ್ಮಾವರದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಜನತಾ ಪಕ್ಷದಿಂದ, ಬಳಿಕ ಪಕ್ಷೇತರರಾಗಿ ಗೆದ್ದವರು. ಈಗ ಬಿಜೆಪಿಯಲ್ಲಿದ್ದಾರೆ. ಉಡುಪಿಯ ಯು.ಆರ್. ಸಭಾಪತಿ ಅವರು ಪಕ್ಷೇತರ ರಾಗಿ- ಬಳಿಕ ಕೆಸಿಪಿಯಲ್ಲಿ- ಈಗ ಮತ್ತೆ ಕಾಂಗ್ರೆಸ್‌ಗೆ ಹಿಂತಿರುಗಿದ್ದಾರೆ. ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯಿಂದ ಗೆದ್ದು- ಬಳಿಕ ಪಕ್ಷೇತರರಾಗಿ ಗೆದ್ದು ಈಗ ಬಿಜೆಪಿಗೆ ಹಿಂದಿರುಗಿದ್ದಾರೆ. ಎ.ಜಿ. ಕೊಡ್ಗಿ ಕಾಂಗ್ರೆಸ್‌ನಿಂದ ಬಿಜೆಪಿ; ವಿಟ್ಲದಿಂದ ಶುಂಠಿಕೊಪ್ಪ ಇಬ್ರಾಹಿಂ ಅವರು ಕಾಂಗ್ರೆಸ್- ಜೆಡಿಎಸ್‌ನಿಂದ ಸ್ಪರ್ಧಿಸಿದವರು. ಪ್ರಜಾ ಸೋಶಲಿಸ್ಟ್ ಪಾರ್ಟಿಯಿಂದ ಮೊದಲ ಬಾರಿಗೆ ಜಯಿಸಿದ್ದ ಕಾಪುವಿನ ಕಾಪು ಭಾಸ್ಕರ ಶೆಟ್ಟಿ ಕಾಂಗ್ರೆಸ್‌ನಿಂದ, ಬಳಿಕ ಪಕ್ಷೇತರರಾಗಿ ಸ್ಪರ್ಧಿಸಿದವರು. ಕುಂದಾಪುರದ ಪಿಎಸ್‌ಪಿಯ ವಿನ್ನಿಫ್ರೆಡ್ ಫೆರ್ನಾಂಡಿಸ್ ಬಳಿಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು.
ಅಂದ ಹಾಗೆ …
ಮೂಲ ಪಕ್ಷದಿಂದ ಬೇರೆ ಪಕ್ಷದಲ್ಲಿ ಅಥವಾ ಪಕ್ಷೇತರರಾಗಿ ವಿ.ಸಭಾ ಚುನಾವಣೆಗಳಲ್ಲಿ ಗೆದ್ದವರು: ಕಾಪು ಭಾಸ್ಕರ ಶೆಟ್ಟಿ, ವಿನ್ನಿಫ್ರೆಡ್ ಫೆರ್ನಾಂಡಿಸ್, ಕೆ. ಜಯಪ್ರಕಾಶ್ ಹೆಗ್ಡೆ, ಯು.ಆರ್. ಸಭಾಪತಿ, ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ. (ಜನತಾ ಪಕ್ಷದ ವಿಭಜಿತ ಸ್ವರೂಪಗಳಲ್ಲಿ ಕೆ. ಅಮರನಾಥ ಶೆಟ್ಟಿ ಜಯಿಸಿದ್ದಾರೆ.)
ಮನೋಹರ ಪ್ರಸಾದ್