ಉಳ್ಳಾಲ: ಸೋಮೇಶ್ವರ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಬೀಚ್ರಸ್ತೆ ಕುಸಿಯುವ ಭೀತಿಯಲ್ಲಿದ್ದು ಸ್ಥಳೀಯವಾಗಿ ವಿದ್ಯುತ್ ಕಂಬಗಳು ಸಮುದ್ರಪಾಲಾಗುವ ಆಂತಕ ಸೃಷ್ಟಿಯಾಗಿದೆ. ಬುಧವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಮಂಗಳವಾರ ಸುರಿದ ಮಳೆಗೆ ಸಂಬಂಧಿಸಿದ ಪ್ರಕೃತಿ ವಿಕೋಪದ ದುರಸ್ತಿ ಕಾರ್ಯ ಮುಂದುವರೆದಿದೆ.
ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಸಂಜೆಯ ವೇಳೆಗೆ ಆರಂಭಗೊಂಡಿದ್ದು ತಾತ್ಕಾಲಿಕ ಕಲ್ಲು ಹಾಕುವ ಕಾರ್ಯ ನಡೆಸಿದ್ದರೂ ಸುಮಾರು 10ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಸೋಮೇಶ್ವರದಲ್ಲೂ ದೇವಸ್ಥಾನದಿಂದ ಸಮುದ್ರಕ್ಕೆ ಇಳಿಯುವ ಮೆಟ್ಟಿಲುಗಳು ಸಮುದ್ರಪಾಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಮಂಗಳವಾರದರೆಗೆ ಸುರಿದ ಮಳೆಗೆ ತಲಪಾಡಿ ಗ್ರಾ.ಪಂ.ನ ಪಿಲಿಕೂರು ಹೊಸನಗರ ಅಬ್ದುಲ್ ರೆಹಮಾನ್ ಎಂಬವರ ಮನೆ ಕಾಂಪೌಂಡ್ ಗೋಡೆ ಕುಸಿದು ಚರಂಡಿ ಮುಚ್ಚಿ ಹೋಗಿ, ನೆರೆಮನೆಯ ಶೀನ ಪೂಜಾರಿ ಎಂಬವರ ತೋಟಕ್ಕೆ ನೀರು ನುಗ್ಗಿ ಕೃಷಿ ಚಟುವಟಿಕೆಗಳಿಗೆ ಅಪಾರ ಹಾನಿ ಸಂಭವಿಸಿದೆ. ದೇವಿನಗರದಿಂದ ದೇವಿಪುರ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಕುಸಿತಗೊಂಡಿದೆ. ಇದರಿಂದ ಈ ಭಾಗದ ಜನ ಸಂಪರ್ಕ ಕಡಿತಗೊಂಡಿದೆ. ಕೇರಳದ ತೂಮಿನಾಡು ಮತ್ತು ಕಿನ್ಯಾ ಮೂಲಕ ಪರ್ಯಾಯ ರಸ್ತೆಯ ಮೂಲಕ ತೆರಳುವಂತಾಗಿದೆ. ದೇವಿಪುರ ದೇವಸ್ಥಾನ ಬಳಿಯ ರಸ್ತೆ ಗೋಡೆ ಕುಸಿತಗೊಂಡು, ರಸ್ತೆ ಅಪಾಯದಂಚಿನಲ್ಲಿದೆ.
ಯು.ಟಿ. ಖಾದರ್ ಭೇಟಿ
ಶಾಸಕ ಯು.ಟಿ. ಖಾದರ್ ಮುಡಿಪು ಸಾಂಬಾರ್‌ತೋಟ ಸಹಿತ ತೊಕ್ಕೊಟ್ಟು, ಉಳ್ಳಾಲ, ತಲಪಾಡಿಯ ಪ್ರಕೃತಿ ವಿಕೋಪ ಸ್ಥಳಗಳಿಗೆ ಮಂಗಳವಾರ ತಡರಾತ್ರಿವರೆಗೆ ಭೇಟಿ ನೀಡಿದರು. ಅಧಿಕಾರಿಗಳು ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.