Advertisement

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

08:31 PM Oct 22, 2021 | Team Udayavani |

ಮಹಾನಗರ: ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್‌ ಮತ್ತು ಅಲ್ಲಿನ ಬೀಚ್‌ ಉದ್ದಕ್ಕೂ ರಾತ್ರಿ ವೇಳೆ ತಡ ರಾತ್ರಿ ತನಕವೂ ಸಭೆ, ಪಾರ್ಟಿಗಳನ್ನು ನಡೆಸಿ, ಡಿಜೆ ಹಾಕಿ ಶಬ್ದ ಮಾಲಿನ್ಯ ಉಂಟು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಸೋಮೇಶ್ವರ ಪರಿಸರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ನೋವು ತೋಡಿಕೊಂಡಿದ್ದಾರೆ. ಉಳ್ಳಾಲ ರೈಲು ನಿಲ್ದಾಣದಿಂದ ತಲಪಾಡಿ ಬಟ್ಟಂಪಾಡಿ ವರೆಗಿನ ಬೀಚ್‌ನಲ್ಲಿ ಹಲವಾರು ಗೆಸ್ಟ್‌ ಹೌಸ್‌ಗಳು ಮತ್ತು ಕೆಲವು ರೆಸಾರ್ಟ್‌ಗಳು ಇದ್ದು, ಅಲ್ಲೆಲ್ಲ ರಾತ್ರಿ ವೇಳೆ ಸಭೆ, ಸಮಾರಂಭಗಳು, ಪಾರ್ಟಿಗಳು ನಡೆಯುತ್ತಿರುತ್ತವೆ. ಕೆಲವು ಪಾರ್ಟಿಗಳು ತಡ ರಾತ್ರಿ ಕಳೆದರೂ ನಡೆಯುತ್ತಿರುತ್ತವೆ. ಬಹುತೇಕ ಕಡೆ ಡಿಜೆ ಹಾಕಿ ಕರ್ಕಶ ಶಬ್ದ ಮಾಡಲಾಗುತ್ತದೆ. ಕೆಲವು ಬಾರಿ ಮುಂಜಾನೆ 4 ಗಂಟೆ ತನಕ ಪಾರ್ಟಿ ನಡೆದದ್ದಿದೆ ಎನ್ನುವುದು ಸ್ಥಳೀಯರ ಆರೋಪ.

“ಸಭೆ, ಸಮಾರಂಭಗಳನ್ನು ನಡೆಸಲಿ, ಆದರೆ ತಡ ರಾತ್ರಿ ಬಳಿಕವೂ ಡಿಜೆ ಹಾಕುವುದು ಸರಿಯಲ್ಲ. ನೆಮ್ಮದಿಯಿಂದ ನಿದ್ರೆ ಮಾಡುತ್ತಿರುವ ಸ್ಥಳೀಯ ಜನರಿಗೆ ತೊಂದರೆ ಆಗುತ್ತಿದೆ. ಡಿಜೆ ಶಬ್ದದ ತೀವ್ರತೆಗೆ ಭೂಮಿ, ಕಟ್ಟಡಗಳು ಕಂಪಿಸಿದ ಅನುಭವ ಆಗುತ್ತಿದೆ’ ಎಂದು ಸ್ಥಳೀಯ ನಾಗರಿಕರು ಹೇಳುತ್ತಿದ್ದಾರೆ.

ಈ ಬಗ್ಗೆ ನಾವು ಈ ಹಿಂದೆ ಉಳ್ಳಾಲ ಪೊಲೀಸರು, ಸೋಮೇಶ್ವರ ಪುರಸಭೆ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಇದುವರೆಗೂ ಕಟ್ಟು ನಿಟ್ಟಿನ ಕ್ರಮ ಆಗಿಲ್ಲ ಎಂದು ಸೋಮೇಶ್ವರ ಪರಿಸರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಆರೋಪಿಸಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

Advertisement

ಅನಧಿಕೃತವಾಗಿ ಕಾರ್ಯಕ್ರಮ ನಡೆಸುವಂತಿಲ್ಲ
ಬೀಚ್‌ನಲ್ಲಿ ತಡ ರಾತ್ರಿ ಡಿಜೆ ಹಾಕಿ ಶಬ್ದ ಮಾಲಿನ್ಯಕ್ಕೆ ಕಾರಣವಾದ ಬಗ್ಗೆ ಕೆಲವು ಸಮಯದ ಹಿಂದೆ ದೂರು ಬಂದಿತ್ತು. ಆಗ ಈ ಕುರಿತಂತೆ ಕ್ರಮ ಕೈಗೊಳ್ಳಲು ಪೊಲೀಸರ ಗಮನಕ್ಕೆ ತರಲಾಗಿತ್ತು. ಈಗ ಕೋವಿಡ್‌ ಕಾರಣ ಅನಧಿಕೃತವಾಗಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಅನಧಿಕೃತವಾಗಿ ಕಾರ್ಯಕ್ರಮ ನಡೆಸಿದವರಿಗೆ 5,000ದಿಂದ 10,000 ರೂ.ಗಳ ತನಕ ದಂಡ ವಿಧಿಸಿದ ಉದಾಹರಣೆ ಇದೆ ಎಂದು ಸೋಮೇಶ್ವರ ಪುರಸಭೆಯ ಮೂಲಗಳು ತಿಳಿಸಿವೆ.

ಲಿಖಿತವಾಗಿ ದೂರು ನೀಡಲಿ
ಸಮಸ್ಯೆಗಳಿದ್ದರೆ ಈಗಲೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ ಲಿಖಿತವಾಗಿ ದೂರು ನೀಡಲಿ.
-ವಾಣಿ ಆಳ್ವ, ಮುಖ್ಯ ಅಧಿಕಾರಿ, ಸೋಮೇಶ್ವರ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next