ನಿನ್ನ ಈಗೋ, ನನ್ನ ಅಂಜಿಕೆಯ ಸ್ವಭಾವದಿಂದ ನಮ್ಮ ಪ್ರೀತಿಯ ದೋಣಿ ದಡ ಸೇರಲೇ ಇಲ್ಲ. ಕೊನೆ ಕ್ಷಣದಲ್ಲಾದರೂ ನೀನಾಗಿಯೇ ಬಂದು, ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಭರವಸೆಯಿತ್ತು ಅದು ಕೂಡ ಕೈಗೂಡಲಿಲ್ಲ.
ಬಹುಶಃ ಈ ಅವತಾರದಲ್ಲಿ ನಾನು ನಿನ್ನನ್ನು ನೋಡುತ್ತೀನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಬೆಳ್‌ಬೆಳಗ್ಗೆ ಫೇಸ್‌ಬುಕ್ ತೆರೆದರೆ ಕಂಡಿದ್ದು ನೀನು ಮದುಮಗಳಂತೆ ಸಿಂಗಾರಗೊಂಡಿರುವ ಫೋಟೊ. ರೇಷ್ಮೆ ಸೀರೆ, ಕೊರಳಲ್ಲಿ ಬಂಗಾರದ ಒಡವೆಗಳು, ಕೈತುಂಬಾ ಮೆಹಂದಿಯ ಚಿತ್ತಾರ, ಮುಖಕ್ಕೆ ಮೆತ್ತಿರುವ ಮೇಕಪ್, ತೋಳು ಬಳಸಿ ನಿನ್ನ ಸಂಗಾತಿಯೊಡನೆ ಸೆಲ್ಫಿ ಕ್ಲಿಕ್ಕಿಸುವ ಪೋಸು… ಇಷ್ಟು ನೋಡಿದ್ದೇ ತಡ; ಉಸಿರು ನಿಂತಂತಾಗಿತ್ತು. ಎದೆಬಡಿತ ಜೋರಾಯಿತು. ಅದು ನಿನ್ನ ಮದುವೆಯ ಫೋಟೋವೆಂದು ತಿಳಿಯಲು ತಡವಾಗಲಿಲ್ಲ. ಅವತ್ತು ದಿನವಿಡೀ ರೂಮಿನೊಳಗೇ ಇದ್ದೆ. ಆ ರಾತ್ರಿ ನಿದ್ದೆಯೇ ಬರಲಿಲ್ಲ… ಮಧ್ಯರಾತ್ರಿ ಧುಮ್ಮಿಕ್ಕಿ ಬಂತು ನಿನ್ನ ನೆನಪು.
ಅಂದು ಕಾಲೇಜಿನ ಮೊದಲ ದಿನ. ಬೆಟ್ಟದಷ್ಟು ಕನಸು ಹೊತ್ತು ತರಗತಿಯೊಳಗೆ ಬಂದಿದ್ದೆ. ಲೆಕ್ಚರರ್ ಎಲ್ಲರ ಪರಿಚಯ ಕೇಳುತ್ತಿದ್ದರು. ಹುಡುಗಿಯರ ಗುಂಪಿನಿಂದ, ನೀಳ ಕೂದಲ, ಗುಳಿಕೆನ್ನೆಯ, ನಗುಮೊಗದ ನೀನು ಹೂವಿನಂತೆ ಮುಗುಳ್ನಗುತ್ತಾ ಇಂಗ್ಲಿಷ್‌ನಲ್ಲಿ ಪರಿಚಯ ಹೇಳುತ್ತಿದ್ದರೆ, ಈ ಕಡೆ ನನ್ನ ಹೃದಯ ಪ್ರೀತಿಗೆ ಮುನ್ನುಡಿ ಬರೆಯುತ್ತಿತ್ತು.
ಪ್ರೀತಿ ಗೀತಿಯಲ್ಲಿ ನಾನು ಬೀಳುವುದಿಲ್ಲವೆಂದು ಗೆಳೆಯರೆದುರು ಜಂಬ ಕೊಚ್ಚಿಕೊಳ್ಳುತಿದ್ದ ನಾನು, ನಿನ್ನನ್ನು ನೋಡಿದ ಕ್ಷಣದಲ್ಲಿ ಮೂಕನಾಗಿ ಹೋಗಿದ್ದೆ. ನನ್ನ ಬಾಳು ಬೆಳಗುವ ಹುಡುಗಿಯ ಕಲ್ಪನೆಯ ಸಾಕಾರ ರೂಪದಂತಿದ್ದೆ ನೀನು. ನಿನ್ನ ವ್ಯಕ್ತಿತ್ವ, ಸೌಂದರ್ಯ, ಮಾತಿನ ಶೈಲಿ ಎಲ್ಲವೂ ನನ್ನ ಕನಸಿನ ಹುಡುಗಿಯನ್ನೇ ಹೋಲುತ್ತಿದ್ದವು. “ಫಸ್ಟ್ ಇಂಪ್ರಷನ್ ಈಸ್ ದಿ ಬೆಸ್ಟ್ ಇಂಪ್ರಷನ್’ ಅಂತಾರಲ್ಲ, ಅದಕ್ಕಾಗೇ ಅವತ್ತು ನಿನ್ನನ್ನು ಸೆಳೆಯುವ ಪ್ರಯತ್ನ ಮಾಡಿದ್ದೆ. ಕ್ರಮೇಣ ಇಬ್ಬರೂ ಪರಿಚಿತರಾದೆವು. ಆದರೂ ಪ್ರೀತಿ ನಿವೇದನೆಗೆ ನನ್ನ ಹೃದಯ ಹಿಂಜರಿಯುತಿತ್ತು. ನಾನೇ ಮೊಣಕಾಲೂರಿ, ಗುಲಾಬಿ ಕೊಟ್ಟು ಪ್ರೇಮ ನಿವೇದನೆ ಮಾಡಬೇಕೆನ್ನುವ ಪಟ್ಟು ನಿನ್ನದು. ನಾನು ಕ್ಲಾಸ್‌ಗೆ ಬರದಿದ್ದಾಗ, ನೀನು ಚಡಪಡಿಸುತ್ತಿದ್ದುದು ನನಗೆ ತಿಳಿಯದ್ದೇನೂ ಆಗಿರಲಿಲ್ಲ.
ಹೂಬನದ ನಡುವೆ ನಿನ್ನೊಡನೆ ಸುಮಧುರ ಹಾಡೊಂದು ಗುನುಗಬೇಕು, ಸಮುದ್ರ ದಂಡೆಗೆ ಮುತ್ತಿಕ್ಕುವ ಅಲೆಗಳೊಂದಿಗೆ ನಾವಿಬ್ಬರೂ ಆಟವಾಡಬೇಕು. ರೈಲುಗಾಡಿಯ ಎದುರುಬದುರಿನ ಸೀಟಿಗೆ ಕುಳಿತು ನಿನ್ನೆಲ್ಲಾ ಸಿಹಿಮಾತಿಗೆ ಕಿವಿಯಾಗಬೇಕು… ಹೀಗೆ ಪ್ರತಿ ಕ್ಷಣವೂ ನೀನು ನನ್ನ ಉಸಿರಾಗಿರಬೇಕೆಂದು ಹಪಹಪಿಸುತ್ತಿದ್ದೆ.
ಆದರೆ, ಇವೆಲ್ಲ ಕೇವಲ ಭ್ರಮೆಯಾಗಿಯೇ ಉಳಿದುಬಿಟ್ಟವು. ನಿನ್ನ ಈಗೋ, ನನ್ನ ಅಂಜಿಕೆಯ ಸ್ವಭಾವದಿಂದ ನಮ್ಮ ಪ್ರೀತಿಯ ದೋಣಿ ದಡ ಸೇರಲೇ ಇಲ್ಲ. ಕೊನೆ ಕ್ಷಣದಲ್ಲಾದರೂ ನೀನಾಗಿಯೇ ಬಂದು, ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಭರವಸೆಯಿತ್ತು ಅದು ಕೂಡ ಕೈಗೂಡಲಿಲ್ಲ. ಕಾಲೇಜು ಮುಗಿದ ಮೇಲಾದರೂ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಾದರೂ ನನ್ನ ಭಾವಗಳಿಗೆ ಉಸಿರಾಗಿಸಿ ಜೀವ ತುಂಬಬಹುದೆಂಬ ನಿರೀಕ್ಷೆಯೂ ಸುಳ್ಳಾಯಿತು. ಇರಲಿ, ನಿನ್ನ ದಾಂಪತ್ಯ ಜೀವನ ಸುಖವಾಗಿರಲೆಂದು ಹಾರೈಸುತ್ತೇನೆ…
– ಅಂಬಿ ಎಸ್. ಹೈಯ್ನಾಳ್