Advertisement

ಸಂತೆ ಸ್ಥಳಾಂತರಕ್ಕೆ ಕೆಲ ವ್ಯಾಪಾರಿಗಳ ವಿರೋಧ

08:36 PM Dec 16, 2019 | Lakshmi GovindaRaj |

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ವಾರದ ಸಂತೆ ಸ್ಥಳಾಂತರ ವಿರೋಧಿಸಿ ಕೆಲವು ಸಂತೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸುವ ಮೂಲಕ ಅಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ನೂತನವಾಗಿ ಆರಂಭವಾಗಿರುವ ಎಪಿಎಂಸಿ ಸಂತೆ ಆವರಣದಲ್ಲಿ ವ್ಯಾಪಾರ ಮಾಡುವ ಮೂಲಕ ಸ್ಥಳಾಂತರಕ್ಕೆ ಸಹಮತ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಆದೇಶದಂತೆ ಪುರಸಭೆ ಅಧಿಕಾರಿಗಳು ಪಟ್ಟಣದ ಎಪಿಎಂಸಿ ಆವರಣಕ್ಕೆ ಸಂತೆ ಸ್ಥಳಾಂತರಿಸಿ ಆದೇಶ ನೀಡಿದ್ದನ್ನು ವಿರೋಧಿಸಿ ಕೆಲ ಸಂತೆ ವ್ಯಾಪಾರಸ್ಥರು ಸಂತೆ ಬಹಿಷ್ಕರಿಸಿ ಜಿಲ್ಲಾಧಿಕಾರಿ ಆದೇಶ ವಿರೋಧಿಸಿದರು.

Advertisement

ಸಂತೆ ಸ್ಥಳ ಸ್ಥಳಾಂತರ ಖಂಡಿಸಿ ಕರೆ ನೀಡಿದ್ದ ಸಂತೆ ಬಂದ್‌ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ಕೆಲ ವ್ಯಾಪಾರಸ್ಥರು ಸಂತೆಗೆ ಸಾಮಗ್ರಿ ಮಾರಾಟ ಮಾಡಲು ಬಾರದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ಇನ್ನು ಕೆಲವರು ಎಪಿಎಂಸಿ ಆವರಣದಲ್ಲಿ ಸಾಮಗ್ರಿ ಮಾರಾಟ ಮಾಡುವ ಮೂಲಕ ಅಧಿಕಾರಿಗಳ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದರು.

ಪ್ರತಿಭಟನೆ ಮೆರವಣಿಗೆ: ಪಟ್ಟಣದ ಕನ್ನಡ ಸಂಘ ವೇದಿಕೆಯಿಂದ ತಾಲೂಕು ಕಚೇರಿವರೆಗೆ ಸಂತೆ ವ್ಯಾಪಾರಸ್ಥರು ಪ್ರತಿಭಟನೆ ಮೆರವಣಿ ನಡೆಸಿದರು. ವೇದಿಕೆ ಅಧ್ಯಕ್ಷ ಸಿ.ಬಿ ರೇಣುಕಸ್ವಾಮಿ ತಹಶೀಲಾರ್‌ ತೇಜಸ್ವಿನಿಗೆ ಮನವಿ ನೀಡಿ ಮೊದಲು ನಡೆಸುತ್ತಿದ್ದ ಜಾಗದಲ್ಲೇ ಸಂತೆ ನಡೆಸಬೇಕು ಎಂದು ಒತ್ತಾಯಿಸಿದರು.

ಪೊಲೀಸ್‌ ಬಂದೋಬಸ್ತ್: ಪುರಸಭೆ ಅಧಿಕಾರಿಗಳು ಪೊಲೀಸ್‌ ಇಲಾಖೆ ಸಹಾಯದಿಂದ ಬಿ.ಎಚ್‌ ರಸ್ತೆ ಹಾಗೂ ಕ್ರೀಡಾಂಗಣ ಅಕ್ಕ ಪಕ್ಕದ ಜಾಗದಲ್ಲಿ ಸಂತೆ ವ್ಯಾಪಾರ ನಡೆಸದಂತೆ ಕಾವಲು ಹಾಕಲಾಗಿತ್ತು. ಎಪಿಎಂಸಿ ಆವರಣದಲ್ಲಿ ವ್ಯಾಪಾರಸ್ಥರಿಗೆ ಸಂತೆ ಮಾಡಲು ಅನುಕೂಲ ಮಾಡಲಾಗಿತ್ತು. ಪ್ರತಿಭಟನಾಕಾರರು ಸಂತೆ ವ್ಯಾಪಾರಕ್ಕೆ ಆಡ್ಡಿ ಮಾಡದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಗ್ರಾಹಕರ ಜೇಬಿಗೆ ಕತ್ತರಿ: ಸಂತೆ ಸ್ಥಳಾಂತರದ ಬಗ್ಗೆ ದ್ವಂದ್ವ ನಿಲುವಿನಿಂದ ವಾರದ ಸಂತೆ ಸಂಪೂರ್ಣವಾಗಿ ನಡೆಯದೆ ಇದ್ದುದರಿಂದ ಖಾಸಗಿ ನಿಲ್ದಾಣದ ಬಳಿ ಇದ್ದ ತರಕಾರಿ ಅಂಗಡಿಗಳಿಗೆ ಗ್ರಾಹಕರು ತರಕಾರಿ ಕೊಳ್ಳಲು ಹೋಗಿದ್ದು, ವ್ಯಾಪಾರಿಗಳು ತರಕಾರಿ ಬೆಲೆ ಹೆಚ್ಚಿಸಿ ಮಾರಾಟ ಮಾಡುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದರು. ಆದರೂ ಗ್ರಾಹಕರು ತರಕಾರಿ ಕೊಂಡು ಮನೆಯತ್ತ ಸಾಗಿದರು.

Advertisement

ಸಚಿವರು ಶ್ರೀಮಂತರ ಪರ
ಚಿಕ್ಕನಾಯಕನಹಳ್ಳಿ: ತಾಲೂಕು ಆಡಳಿತ ಜನಸಮಾನ್ಯರ ಕಷ್ಟ-ಸುಖ ತಿಳಿದು ತೀರ್ಮಾನ ತೆಗೆದುಕೊಳ್ಳಬೇಕು. ಸಂತೆ ಸ್ಥಳಾಂತರವಾದರೆ ಅಭಿವೃದ್ಧಿ ಮಾಡಿದಂತೆ ಅಲ್ಲ. ತಾಲೂಕಿನಲ್ಲಿ ಮಾಡಬೇಕಾದ ಕೆಲಸ ಬೇರೆ ಇದೆ. ಬಡವರ ಜೀವನದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಮುಖಂಡ ಸಾಸಲು ಸತೀಶ್‌ ತಿಳಿಸಿದರು.

ಪಟ್ಟಣದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಸಚಿವರು ಶ್ರೀಮಂತರ, ಜಮೀನುದಾರರ, ಭೂಮಾಲೀಕರ, ಗುತ್ತಿಗೆದಾರರ ಪರವಾಗಿದ್ದು, ಬಡವರವಾಗಿದ್ದರೆ ಕಷ್ಟ ತಿಳಿಯುತಿತ್ತು. ಅಧಿಕಾರಿಗಳು , ರಾಜಕಾರಣಿಗಳು ಬಡವರ ಪರ ಕೆಲಸ ಮಾಡಬೇಕು. ಡೀಸಿ ಹಾಗೂ ಪುರಸಭೆ ಆದೇಶ ಅಂತಿಮವಲ್ಲ. ಸ್ಥಳಾಂತರಕ್ಕೆ ಮುನ್ನ ವ್ಯಾಪಾರಸ್ಥರ, ಗ್ರಾಹಕರ ಅಭಿಪ್ರಾಯ ಸಂಗ್ರಹಿಸಬೇಕು. ಎಪಿಎಂಸಿ ಆವರಣದಲ್ಲಿ ಹಲವಾರು ವರ್ಷಗಳಿಂದ ಕುರಿ ಸಂತೆ ನಡೆಯುತ್ತಿದೆ.

ಆದರ ಜೊತೆ ತರಕಾರಿ ಸಂತೆ ಸೇರಿಸಿದರೆ ಗ್ರಾಹಕರಿಗೆ ಕಿರಿಕಿರಿಯಾಗುತ್ತದೆ. ಕುರಿ, ಕೋಳಿ ಕೆಲ ತಾಲೂಕಿನ ರಾಜಕಾರಣಿಗಳಿಗೆ ಅಲರ್ಜಿ. ಆದ್ದರಿಂದ ಕುರಿ ಸಂತೆಗೆ ಕುತ್ತು ತರುವ ಉದ್ದೇಶದಿಂದ ತರಕಾರಿ ಸಂತೆ ಸ್ಥಳಾಂತರಿಸಲಾಗಿದೆ. ಇದು ಸರಿಯಲ್ಲ. ಮೊದಲು ನಡೆಯುತ್ತಿದ್ದ ಜಾಗದಲ್ಲೇ ಸಂತೆ ಮುಂದುವರಿಸಬೇಕು. ರಸ್ತೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಾರದ ಸಂತೆ ದಿನ ಹೆಚ್ಚು ಪೊಲೀಸ್‌ ಸಿಬ್ಬಂದಿ ನೇಮಿಸಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next